×
Ad

ಜೈಲುಪಾಲಾದ ಸಿಎಂ ಹಾಗೂ ಪ್ರಧಾನಿಗಳನ್ನು ವಜಾಗೊಳಿಸುವ ಮಸೂದೆ ಸಂಸತ್ತಿನಲ್ಲಿ ಮರುಮಂಡನೆಗೆ ಸಜ್ಜು

Update: 2026-07-02 20:39 IST

Photo Credit : PTI 

ಹೊಸದಿಲ್ಲಿ,ಜು.2: ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳನ್ನು ಅನರ್ಹಗೊಳಿಸುವ ಕುರಿತಾದ ವಿವಾದಾತ್ಮಕ 130ನೇ ಸಂವಿಧಾನ ತಿದ್ದುಪಡಿ ಮಸೂದೆಯ ಪರಿಶೀಲನೆಯು ಮುಕ್ತಾಯ ಹಂತಕ್ಕೆ ತಲುಪಿದ್ದು, ಸಂಸತ್ತಿನಲ್ಲಿ ಮರುಮಂಡನೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಮೊದಲ ಬಾರಿಗೆ ಮಂಡನೆಯಾಗಿದ್ದ ಈ ಮಸೂದೆಯನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಲು ಸರಕಾರವು ತೀವ್ರ ಉತ್ಸುಕವಾಗಿದೆ ಎಂದು ಹೇಳಲಾಗಿದೆ. ಅಧಿವೇಶನವು ಜುಲೈ 20ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ಪ್ರಧಾನಿ ಅಥವಾ ಮುಖ್ಯಮಂತ್ರಿಗಳ ಹುದ್ದೆಗಳಲ್ಲಿರುವವರು ಜಾಮೀನು ಇಲ್ಲದೆ 30 ದಿನಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರು ಸ್ವಯಂಚಾಲಿತವಾಗಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರ ಹೊಣೆಗಾರಿಕೆಯನ್ನು ಬಲಪಡಿಸಲು ಮತ್ತು ಅವರ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸರಕಾರವು ಪ್ರತಿಪಾದಿಸಿದೆ.

ಆದರೆ ವಿರೋಧ ಪಕ್ಷಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪ್ರಸ್ತಾವವು ವಿಶೇಷವಾಗಿ ನ್ಯಾಯಾಲಯದ ಕಲಾಪಗಳು ಇನ್ನೂ ಇತ್ಯರ್ಥವಾಗದ ಪ್ರಕರಣಗಳಲ್ಲಿ ದೂರಗಾಮಿ ಸಾಂವಿಧಾನಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರಬಹುದು ಎಂದು ವಾದಿಸಿವೆ. ಅಪರಾಧ ಸಾಬೀತಾಗುವವರೆಗೆ ವ್ಯಕ್ತಿಯನ್ನು ನಿರಪರಾಧಿ ಎಂದೇ ಪರಿಗಣಿಸಬೇಕು ಎಂಬ ಸ್ಥಾಪಿತ ಸಾಂವಿಧಾನಿಕ ತತ್ವಗಳಿಗೆ ಈ ಮಸೂದೆ ಹೊಂದಿಕೆಯಾಗುತ್ತದೆಯೇ ಎಂದೂ ಅವು ಪ್ರಶ್ನಿಸಿವೆ.

ಮಸೂದೆಯನ್ನು ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ನೇತೃತ್ವದ 31 ಸದಸ್ಯರ ಜೆಪಿಸಿಗೆ ಈ ಮಸೂದೆಯನ್ನು ಉಲ್ಲೇಖಿಸಲಾಗಿತ್ತು. ಸಮಿತಿಯು ಮುಂಗಾರು ಅಧಿವೇಶನಕ್ಕೂ ಮುನ್ನ ತನ್ನ ವರದಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಜೆಪಿಸಿಯನ್ನು ಬಹಿಷ್ಕರಿಸಿದ್ದು, ಇದರಲ್ಲಿ ಭಾಗವಹಿಸುವುದರಿಂದ ಯಾವುದೇ ಅರ್ಥಪೂರ್ಣ ಪ್ರಯೋಜನವಿಲ್ಲ ಎಂದು ವಾದಿಸಿವೆ. ಆದರೆ ಆಡಳಿತಾರೂಢ ಎನ್‌ಡಿಎ ಈ ಆಕ್ಷೇಪಣೆಗಳನ್ನು ತಿರಸ್ಕರಿಸಿದೆ ಮತ್ತು ಜೆಪಿಸಿಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದೆ. ಈ ಮಸೂದೆಯು ಇಂದಿನ ಅಗತ್ಯವಾಗಿದೆ ಎಂದು ವಾದಿಸಿದೆ.

ಈ ಮಸೂದೆಯನ್ನು ಈಗ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ. ಮುಂಬರುವ ಅಧಿವೇಶನದ ಶಾಸಕಾಂಗ ಕಾರ್ಯಸೂಚಿಯಲ್ಲಿ ಇದು ಪ್ರಮುಖ ಸ್ಥಾನ ಪಡೆದಿದೆ ಎಂದು ಬಲ್ಲ ಮೂಲಗಳು ಸೂಚಿಸಿವೆ.

ಸರಕಾರವು ಮುಂಗಾರು ಅಧಿವೇಶನದಲ್ಲಿ ಪ್ರಧಾನಿ, ಸಿಎಂಗಳು ಮತ್ತು ಸಚಿವರನ್ನು ಅನರ್ಹಗೊಳಿಸುವ ಮಸೂದೆಯ ಹೊರತಾಗಿ ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಇತರ ಕೆಲವು ಸೀಮಿತ ಸಂಖ್ಯೆಯ ಮಸೂದೆಗಳಿಗೆ ಆದ್ಯತೆ ನೀಡುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News