FIFA 2026 | ವಿಶ್ವಕಪ್, ಯುರೋ ಚಾಂಪಿಯನ್‌ಶಿಪ್‌ನಲ್ಲಿ 20 ಗೋಲುಗಳನ್ನು ಗಳಿಸಿದ ಎರಡನೇ ಆಟಗಾರ ಹ್ಯಾರಿ ಕೇನ್
ಹ್ಯಾರಿ ಕೇನ್ | Photo Credit : AP , PTI
ಅಟ್ಲಾಂಟಾ, ಜು.2: ಕಾಂಗೋ ತಂಡದ ವಿರುದ್ಧ ಫಿಫಾ ವಿಶ್ವಕಪ್‌ನ 32ರ ಸುತ್ತಿನ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಅವರು ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿದ್ದ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.
ಹ್ಯಾರಿ ಕೇನ್ ಗಳಿಸಿದ ಅವಳಿ ಗೋಲಿನಿಂದಾಗಿ ಹಿನ್ನಡೆಯಿಂದ ಚೇತರಿಸಿಕೊಂಡ ಇಂಗ್ಲೆಂಡ್ ತಂಡವು ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಪಡೆಯಿತು. ಸೋಮವಾರ ಅಝ್ಟೆಕಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು ಎದುರಿಸಲಿದೆ.
ಕೇನ್ ಇದೀಗ ವಿಶ್ವಕಪ್ ಹಾಗೂ ಯುರೋ ಚಾಂಪಿಯನ್‌ಶಿಪ್ ಟೂರ್ನಮೆಂಟ್‌ಗಳಲ್ಲಿ 20 ಗೋಲುಗಳನ್ನು ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ 13 ಹಾಗೂ ಯುರೋಸ್‌ನಲ್ಲಿ ಏಳು ಗೋಲು ದಾಖಲಿಸಿದ್ದಾರೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮಾತ್ರ ಅತಿ ಹೆಚ್ಚು 24 ಗೋಲುಗಳನ್ನು (ವಿಶ್ವಕಪ್‌ನಲ್ಲಿ 10, ಯುರೋ ಚಾಂಪಿಯನ್‌ಶಿಪ್‌ನಲ್ಲಿ 14)ಗಳಿಸಿದ್ದಾರೆ.
ಕೇನ್ ಅವರು ನಾಕೌಟ್ ಪಂದ್ಯಗಳಲ್ಲಿ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. 2020ರ ಯುರೋ ಚಾಂಪಿಯನ್‌ಶಿಪ್ ನಂತರ ವಿಶ್ವಕಪ್ ಹಾಗೂ ಯುರೋಸ್‌ಗಳಲ್ಲಿನ ನಾಕೌಟ್ ಪಂದ್ಯಗಳಲ್ಲಿ ಇದೀಗ 10 ಗೋಲುಗಳನ್ನು ಗಳಿಸಿದ್ದಾರೆ. ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಏಳು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಡ್ಯಾನಿ ಒಲ್ಮೊ, ಕಾಸ್ಪರ್ ಡೊಲ್ಬರ್ಗ್ ಹಾಗೂ ರಾಮೊಸ್ ತಲಾ ಮೂರು ಗೋಲುಗಳನ್ನು ಗಳಿಸಿದ್ದಾರೆ.
ಬ್ರಿಯಾನ್ ಸೆಪೆಂಕಾ ಏಳನೇ ನಿಮಿಷದಲ್ಲಿ ಗೋಲು ಗಳಿಸಿ ಡಿಆರ್ ಕಾಂಗೋ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟಿದ್ದರು. ಕೇನ್ 75ನೇ ಹಾಗೂ 86ನೇ ನಿಮಿಷದಲ್ಲಿ ಗೋಲು ಗಳಿಸುವ ಮೊದಲು ಕಾಂಗೋ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಅವಳಿ ಗೋಲು ಗಳಿಸಿರುವ ಕೇನ್ ಫಿಫಾ ವಿಶ್ವಕಪ್ ಸ್ಕೋರಿಂಗ್ ಪಟ್ಟಿಯಲ್ಲಿ ಬ್ರೆಝಿಲ್‌ನ ದಿಗ್ಗಜ ಪೀಲೆ ಅವರನ್ನು ಹಿಂದಿಕ್ಕಿದ್ದಾರೆ. ಕೇನ್ ಇದೀಗ 13 ವಿಶ್ವಕಪ್ ಗೋಲುಗಳನ್ನು ಗಳಿಸಿದ್ದು, ಪೀಲೆ(12)ಗಿಂತ ಒಂದು ಗೋಲು ಮುಂದಿದ್ದಾರೆ.
ಕೇನ್ ಅವರು ಗ್ಯಾರಿ ಲೆನೆಕರ್ ಅವರ ವಿಶ್ವಕಪ್ ಗೋಲು ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದೀಗ ಕೇನ್ 13 ವಿಶ್ವಕಪ್ ಗೋಲುಗಳನ್ನು ಗಳಿಸಿದರೆ, ಲಿನೆಕರ್ 10 ಗೋಲು ಗಳಿಸಿದ್ದಾರೆ.