ಅಖಿಲೇಶ್ ಯಾದವ್ | Photo Credit ; PTI 

ಲಕ್ನೋ, ನ.7: ಶಹನಾಯಿ ಮಾಂತ್ರಿಕ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ವಾರಣಾಸಿಯ ನಿವಾಸದ ಒಂದು ಭಾಗವನ್ನು ಕೆಡವಿದ್ದಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರಿಗಾಗಿ ಶಹನಾಯಿ ಬಾರಿಸಲ್ಪಡಲಿಲ್ಲವೋ ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಮತ್ತು ಅದರ ಸಂಕುಚಿತ ಮನೋಭಾವದ ಮಿತ್ರಪಕ್ಷಗಳು ಕಲೆ ಮತ್ತು ಕಲಾವಿದರ ವಿರುದ್ಧವಾಗಿದ್ದು, ಭಾರತ ರತ್ನ ಪುರಸ್ಕೃತರ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ದೇಶದ ಗೌರವವನ್ನು ನಾಶಪಡಿಸುತ್ತಿವೆ ಎಂದು ಅಖಿಲೇಶ್ ಎಕ್ಸ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ. ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಬಿಸ್ಮಿಲ್ಲಾ ಖಾನ್ ಅವರ ಸಂಗೀತ ಪರಂಪರೆಯನ್ನು ಸಂರಕ್ಷಿಸಲು ‘ಶ್ರವಣ ಸಂಗ್ರಹಾಲಯ’ ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

ಆದರೆ, ಈ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂಬುದನ್ನು ವಾರಣಾಸಿ ಮಹಾನಗರ ಪಾಲಿಕೆ (VMC) ಸ್ಪಷ್ಟವಾಗಿ ನಿರಾಕರಿಸಿದೆ. ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಮುನ್ನೆಚ್ಚರಿಕೆಯಾಗಿ ಕುಟುಂಬಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಮನೆ ನವೀಕರಣಕ್ಕಾಗಿ ಕಟ್ಟಡದ ಒಂದು ಭಾಗವನ್ನು ಕೆಡವಲು ಕುಟುಂಬಸ್ಥರೇ ಸ್ವತಃ ನಿರ್ಧಾರ ತೆಗೆದುಕೊಂಡಿದ್ದರು ಎಂದು ಪಾಲಿಕೆ ಅಧಿಕಾರಿಗಳು ವಿವರಿಸಿದ್ದಾರೆ.

ನಗರದ ಮಹಾನ್ ವ್ಯಕ್ತಿಗಳನ್ನು ಗೌರವಿಸಲು ಅವರ ನಿವಾಸಗಳ ರಸ್ತೆಗಳ ಅಭಿವೃದ್ಧಿ ಮತ್ತು ಮನೆಯ ಒಂದು ಕೊಠಡಿಯನ್ನು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪಾಲಿಕೆಯು ಹೊಂದಿದೆ. ಆದರೆ, ಖಾನ್ ಕುಟುಂಬಸ್ಥರು ತಮ್ಮ ನಿವಾಸವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಒಪ್ಪಿಗೆ ನೀಡಿಲ್ಲ. ಈ ಕಟ್ಟಡ ಕೆಡವುವ ಪ್ರಕ್ರಿಯೆಯಲ್ಲಿ ಪಾಲಿಕೆಯ ಯಾವುದೇ ಪಾತ್ರವಿಲ್ಲ ಎಂದು VMCಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.

ನಿವಾಸದ ಮಾಲೀಕರೇ ಸ್ವತಃ ಮನೆಯನ್ನು ಕೆಡವುತ್ತಿದ್ದಾರೆ. ಆಸ್ತಿಯ ಕೆಲವು ಭಾಗಗಳಿಗೆ ಸಂಬಂಧಿಸಿದಂತೆ ಕುಟುಂಬದೊಳಗೆ ಆಂತರಿಕ ವಿವಾದವಿತ್ತು. ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದ್ದು, ಆ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ಚೌಕ್ ಪೊಲೀಸ್ ಠಾಣೆಯ SHO ವಿಜಯ್ ಕುಮಾರ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor