‘ಕ್ರೀಮಿ ಲೇಯರ್’ ತೀರ್ಪು ಹಳೆಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ
►ಅಮಾಲ್ ಶೇಖ್ – indianexpress. com ವರದಿ
ಸುಪ್ರೀಂ ಕೋರ್ಟ್ | Photo Credit : PTI
ಈಗಾಗಲೇ ಪೂರ್ಣಗೊಂಡಿರುವ ಆಯ್ಕೆ, ನೇಮಕಾತಿ ಮತ್ತು ಹುದ್ದೆ ಹಂಚಿಕೆ ಪ್ರಕ್ರಿಯೆಗಳನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದ ನ್ಯಾಯಾಲಯ
ಸುಪ್ರೀಂ ಕೋರ್ಟ್ ನವೆಂಬರ್ 6ರಂದು ನೀಡಿದ ತೀರ್ಪಿನಲ್ಲಿ, ಹಿಂದುಳಿದ ವರ್ಗಗಳ (OBC) ‘ಕ್ರೀಮಿ ಲೇಯರ್’ಗೆ ಸಂಬಂಧಿಸಿದ ಮಾರ್ಚ್ ತಿಂಗಳ ನಿರ್ಧಾರವು ಈಗಾಗಲೇ ಪೂರ್ಣಗೊಂಡಿರುವ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಮರುಪರಿಶೀಲಿಸಲು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಈ ನಿಯಮವು ಪ್ರಸ್ತುತ ಬಾಕಿ ಇರುವ 2025ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಹುದ್ದೆಗಳ ಹಂಚಿಕೆಗೆ ಅನ್ವಯಿಸಲಿದೆ.
ಒಬಿಸಿ ಸಮುದಾಯದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಡೆದಿರುವ ಕುಟುಂಬಗಳನ್ನು ‘ಕ್ರೀಮಿ ಲೇಯರ್’ ಎಂದು ಕರೆಯಲಾಗುತ್ತದೆ. ಈ ವ್ಯಾಪ್ತಿಗೆ ಬರುವವರಿಗೆ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ.
ಸರ್ಕಾರಿ ಹುದ್ದೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳು (PSU) ಅಥವಾ ಖಾಸಗಿ ವಲಯದ ಉದ್ಯೋಗಿಗಳ ಹುದ್ದೆಗಳ ಸಮಾನತೆಯನ್ನು ನಿರ್ಧರಿಸಲು ಕೇವಲ ಆದಾಯವನ್ನೇ ಏಕೈಕ ಮಾನದಂಡವನ್ನಾಗಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮಾರ್ಚ್ ನಲ್ಲಿ ತೀರ್ಪು ನೀಡಿತ್ತು.
ಈ ತೀರ್ಪು ಹಿಂದಿನ ನೇಮಕಾತಿಗಳಿಗೂ ಅನ್ವಯಿಸುತ್ತದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ಕೋರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ, "ಮಾರ್ಚ್ 11, 2026ರ ತೀರ್ಪಿಗಿಂತ ಮೊದಲು ಪೂರ್ಣಗೊಂಡಿರುವ ನೇಮಕಾತಿಗಳನ್ನು ಈ ಆಧಾರದ ಮೇಲೆ ಮತ್ತೆ ತೆರೆಯಲು ಸಾಧ್ಯವಿಲ್ಲ" ಎಂದು ಹೇಳಿದೆ.
ಅದೇ ಸಮಯದಲ್ಲಿ, 2025ರ ನಾಗರಿಕ ಸೇವೆಗಳ ಹುದ್ದೆ ಹಂಚಿಕೆ ಪ್ರಕ್ರಿಯೆ ಇನ್ನೂ ಬಾಕಿ ಇರುವುದರಿಂದ ಈ ತೀರ್ಪಿನ ಜಾರಿಯನ್ನು ಮುಂದೂಡಲು ಸೂಕ್ತ ಕಾರಣಗಳಿಲ್ಲ ಎಂದಿದೆ.
ಹುದ್ದೆಗಳ ಸಮಾನತೆಯನ್ನು ಗುರುತಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ತೀರ್ಪು ಜಾರಿಗೆ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.
►ತೀರ್ಪಿನಲ್ಲಿ ಏನಿತ್ತು?
ಈ ಪ್ರಕರಣವು ಸೆಪ್ಟೆಂಬರ್ 1993ರ ಸುತ್ತೋಲೆಯಿಂದ (OM) ಆರಂಭವಾಗಿತ್ತು. ಇದರಲ್ಲಿ ಇತರ ಹಿಂದುಳಿದ ವರ್ಗಗಳ (OBC) ‘ಕ್ರೀಮಿ ಲೇಯರ್’ ಅನ್ನು ಗುರುತಿಸುವ ಮತ್ತು ಅವರನ್ನು ಮೀಸಲಾತಿಯಿಂದ ಹೊರಗಿಡುವ ಮಾನದಂಡಗಳನ್ನು ರೂಪಿಸಲಾಗಿತ್ತು. ಅದರ ಆದಾಯ ಮತ್ತು ಸಂಪತ್ತಿನ ಪರೀಕ್ಷೆಯ ವರ್ಗ IVರ ಅಡಿಯಲ್ಲಿ, ಸಂಬಳ ಹಾಗೂ ಕೃಷಿ ಭೂಮಿಯನ್ನು ಹೊರತುಪಡಿಸಿ ಇತರ ಮೂಲಗಳಿಂದ ಬರುವ ಆದಾಯವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.
ಆದರೆ, 2004ರ ಅಕ್ಟೋಬರ್ ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ನೀಡಿದ ಸ್ಪಷ್ಟೀಕರಣ ಪತ್ರದಲ್ಲಿ, ಸಾರ್ವಜನಿಕ ವಲಯದ ಉದ್ಯಮಗಳು (PSU), ಬ್ಯಾಂಕ್ಗಳು ಹಾಗೂ ಸಾರ್ವಜನಿಕ ಉದ್ಯೋಗಗಳಲ್ಲಿನ ಹುದ್ದೆಗಳ ‘ಸಮಾನತೆ’ ನಿಗದಿಯಾಗದಿದ್ದರೆ, ಅಂತಹ ಉದ್ಯೋಗಿಗಳ ಸಂಬಳವನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಆದಾಯವು ಸತತ ಮೂರು ವರ್ಷಗಳ ಕಾಲ ನಿಗದಿತ ಮಿತಿಯನ್ನು ಮೀರಿದರೆ, ಅವರ ಮಕ್ಕಳನ್ನು ಕ್ರೀಮಿ ಲೇಯರ್ ವ್ಯಾಪ್ತಿಗೆ ತರಲಾಗುತ್ತದೆ ಎಂದು ಹೇಳಲಾಗಿತ್ತು.
ಈ ವರ್ಷದ ಮಾರ್ಚ್ ನಲ್ಲಿ ತೀರ್ಪು ನೀಡಿದ ಪೀಠವು, "ಸ್ಪಷ್ಟೀಕರಣ ಪತ್ರದ ಮೂಲಕ ಮೂಲ ನೀತಿಯಲ್ಲಿ ಇಲ್ಲದ ಹೊಸ ಷರತ್ತನ್ನು ವಿಧಿಸಲು ಬರುವುದಿಲ್ಲ" ಎಂದು ಸ್ಪಷ್ಟಪಡಿಸಿತ್ತು. ಕೇವಲ ಸಂಬಳದ ಆದಾಯವನ್ನೇ ಕ್ರೀಮಿ ಲೇಯರ್ ನಿರ್ಧರಿಸುವ ಏಕೈಕ ಮಾನದಂಡವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿತ್ತು.
ಸರ್ಕಾರಿ ನೌಕರರ ಮಕ್ಕಳಿಗಿಂತ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳ ಮಕ್ಕಳನ್ನು ಭಿನ್ನವಾಗಿ ನೋಡುವುದು ತಾರತಮ್ಯಕ್ಕೆ ಸಮಾನ ಎಂದು ನ್ಯಾಯಾಲಯ ಹೇಳಿತ್ತು.
ಅಲ್ಲದೆ, ಈ ತತ್ವಗಳನ್ನು ಆರು ತಿಂಗಳೊಳಗೆ ಜಾರಿಗೆ ತರುವಂತೆ ಮತ್ತು ನಾನ್-ಕ್ರೀಮಿ ಲೇಯರ್ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಅಗತ್ಯವಿರುವಂತೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
►ಕೇಂದ್ರ ಸರ್ಕಾರಕ್ಕೆ ಸ್ಪಷ್ಟನೆಯ ಅಗತ್ಯವಿದ್ದಿದ್ದು ಏಕೆ?
ಮಾರ್ಚ್ ತಿಂಗಳ ತೀರ್ಪು ಪ್ರಕಟವಾಗುವುದಕ್ಕೆ ಐದು ದಿನಗಳ ಮುಂಚೆಯಷ್ಟೇ 2025ರ CSE ಅಂತಿಮ ಫಲಿತಾಂಶ ಪ್ರಕಟವಾಗಿತ್ತು. ತೀರ್ಪನ್ನು ಪೂರ್ವಾನ್ವಯವಾಗಿ ಜಾರಿಗೆ ತಂದರೆ, ಹಿಂದಿನ CSE ಸೇರಿದಂತೆ ಈಗಾಗಲೇ ಪೂರ್ಣಗೊಂಡಿರುವ ಆಯ್ಕೆ ಮತ್ತು ಹುದ್ದೆಗಳ ಹಂಚಿಕೆ ಪ್ರಕ್ರಿಯೆಗಳು ಗೊಂದಲಕ್ಕೀಡಾಗುತ್ತವೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿತ್ತು.
ಕಳೆದ 10 ವರ್ಷಗಳಲ್ಲಿ ಭರ್ತಿ ಮಾಡಲಾದ 3.70 ಲಕ್ಷ ಒಬಿಸಿ ಹುದ್ದೆಗಳು ಸೇರಿದಂತೆ ಒಟ್ಟು 6.69 ಲಕ್ಷಕ್ಕೂ ಹೆಚ್ಚು ಮೀಸಲಾತಿ ಹುದ್ದೆಗಳ ಬಗ್ಗೆ ಸರ್ಕಾರ ನ್ಯಾಯಾಲಯದ ಗಮನ ಸೆಳೆದಿತ್ತು.
ಈ ತೀರ್ಪು ಮುಂದಿನ ನೇಮಕಾತಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೋರಿದ್ದ ಸರ್ಕಾರ, ಭವಿಷ್ಯದ ಪ್ರಕರಣಗಳಿಗೆ ಮಾತ್ರ ಅನ್ವಯಿಸುವ ನಿಯಮ ಜಾರಿಗೆ ತರಲು ವಾದಿಸಿತ್ತು. ಜೊತೆಗೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸಿ ಹುದ್ದೆಗಳ ಸಮಾನತೆಯನ್ನು ನಿರ್ಧರಿಸಲು ಎರಡು ವರ್ಷಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿತ್ತು.
►ಸುಪ್ರೀಂ ಕೋರ್ಟ್ ಏನು ಹೇಳಿತು?
1993ರ ಸುತ್ತೋಲೆ ಮತ್ತು 2004ರ ಸ್ಪಷ್ಟೀಕರಣ ಪತ್ರದ ವಿಶ್ಲೇಷಣೆ ಹಾಗೂ "ಸಂಬಳದ ಆದಾಯವನ್ನಷ್ಟೇ ಆಧಾರವಾಗಿಟ್ಟುಕೊಂಡು ನೇರವಾಗಿ ಕ್ರೀಮಿ ಲೇಯರ್ನಿಂದ ಹೊರಗಿಡುವುದನ್ನು ನಿರಾಕರಿಸುವುದು" ಮರುಪರಿಶೀಲನೆಗೆ ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಸ್ಪಷ್ಟೀಕರಣ ಕೋರುವ ನೆಪದಲ್ಲಿ ತೀರ್ಪಿನ ಗುಣಾವಗುಣಗಳನ್ನು ಮತ್ತೆ ಪರಿಶೀಲಿಸಲು ಅರ್ಜಿಗಳನ್ನು ಅಸ್ತ್ರವಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಮೂಲ ಪ್ರಕರಣವು ನ್ಯಾಯಾಲಯದ ಮುಂದಿದ್ದ ಅಭ್ಯರ್ಥಿಗಳಿಗೆ ಮಾತ್ರ ಸಂಬಂಧಿಸಿದ್ದು, ನೀಡಲಾದ ಪರಿಹಾರವೂ ಅವರಿಗೆ ಮಾತ್ರ ಸೀಮಿತವಾಗಿದೆ ಎಂದು ಪೀಠ ತಿಳಿಸಿತು.
"ಈಗಾಗಲೇ ಮಾಡಲಾದ ನೇಮಕಾತಿಗಳನ್ನು ಮರುಪರಿಶೀಲಿಸಲು, ಯಾರದ್ದೇ ಹಿರಿತನವನ್ನು ತಿದ್ದುಪಡಿ ಮಾಡಲು ಅಥವಾ ಯಾವುದೇ ಆಯ್ಕೆ, ನೇಮಕಾತಿ ಹಾಗೂ ಹುದ್ದೆ ಹಂಚಿಕೆ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವ ಯಾವುದೇ ಆದೇಶವನ್ನು ನಾವು ನೀಡಿಲ್ಲ" ಎಂದು ಪೀಠ ಸ್ಪಷ್ಟಪಡಿಸಿತು.
ಈ ತೀರ್ಪು ಪೂರ್ವಾನ್ವಯವಾಗಿ ಜಾರಿಯಾಗುತ್ತದೆ ಎಂಬ ಕೇಂದ್ರ ಸರ್ಕಾರದ ಅರ್ಜಿ "ತಪ್ಪು ಕಲ್ಪನೆ"ಯಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿತು.
"ಈಗಾಗಲೇ ಪೂರ್ಣಗೊಂಡಿರುವ ಆಯ್ಕೆಗಳು, ನೇಮಕಾತಿಗಳು, ಹಿರಿತನ ಅಥವಾ ಹುದ್ದೆ ಹಂಚಿಕೆಯನ್ನು ಪೂರ್ವಾನ್ವಯವಾಗಿ ಮರುಪರಿಶೀಲಿಸುವಂತೆ ನ್ಯಾಯಾಲಯ ಎಲ್ಲೂ ನಿರ್ದೇಶಿಸಿಲ್ಲ" ಎಂದು ಸ್ಪಷ್ಟಪಡಿಸಿತು.
ಮಾರ್ಚ್ ತೀರ್ಪಿನಲ್ಲಿ ನೀಡಿದ್ದ ಆರು ತಿಂಗಳ ಗಡುವು ಆ ಪ್ರಕರಣದ ಅರ್ಜಿದಾರರ ಮನವಿಗಳನ್ನು ಪರಿಶೀಲಿಸಲು ಮಾತ್ರ ಅನ್ವಯಿಸುತ್ತದೆ. ಇದು ಎಲ್ಲ ನೇಮಕಾತಿ ವರ್ಷಗಳನ್ನು ಒಳಗೊಳ್ಳುವ ಸಾಮಾನ್ಯ ಪ್ರಕ್ರಿಯೆಯಲ್ಲ ಎಂದು ನ್ಯಾಯಾಲಯ ತಿಳಿಸಿತು.
ಮಾರ್ಚ್ ತೀರ್ಪಿನಲ್ಲಿ ವಿಶ್ಲೇಷಿಸಿದಂತೆ, ಇನ್ನು ಮುಂದೆ ನಡೆಯುವ ಎಲ್ಲ ಆಯ್ಕೆಗಳು, ನೇಮಕಾತಿಗಳು ಮತ್ತು ರೋಸ್ಟರ್ ಹಂಚಿಕೆಗಳು 1993ರ ಸುತ್ತೋಲೆಯನ್ನೇ ಅನುಸರಿಸುತ್ತವೆ ಎಂದು ಪೀಠ ಹೇಳಿತು. ಅಂದರೆ, 2004ರ ಸ್ಪಷ್ಟೀಕರಣ ಪತ್ರದಂತಹ ಆದೇಶಗಳು ಮೂಲ ಸುತ್ತೋಲೆಯನ್ನು ಮೀರುವಂತಿಲ್ಲ.
ಹುದ್ದೆಗಳ ಸಮಾನತೆ ನಿರ್ಧಾರವಾಗದಿದ್ದಾಗ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ನೌಕರರ ಮಕ್ಕಳನ್ನು ಆದಾಯ ಮತ್ತು ಸಂಪತ್ತಿನ ಪರೀಕ್ಷೆಯಡಿಯಲ್ಲಷ್ಟೇ ಪರಿಶೀಲಿಸಬೇಕು. ಇದರಲ್ಲಿ ಸಂಬಳದ ಆದಾಯ ಸೇರುವುದಿಲ್ಲ. ಪೋಷಕರ ಹುದ್ದೆಯ ಮಟ್ಟ ಹಾಗೂ ವರ್ಗವೂ ಪ್ರಮುಖವಾಗಿರುವುದರಿಂದ, ಕೇವಲ ಸಂಬಳದ ಆದಾಯವನ್ನೇ ಕ್ರೀಮಿ ಲೇಯರ್ ನಿರ್ಧರಿಸುವ ಏಕೈಕ ಮಾನದಂಡವನ್ನಾಗಿ ಮಾಡಲು ಬರುವುದಿಲ್ಲ.
ಕ್ರೀಮಿ ಲೇಯರ್ ಮಾನದಂಡಗಳ ಬಗ್ಗೆ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ ನ್ಯಾಯಾಲಯ, ಹುದ್ದೆಗಳ ಸಮಾನತೆಯನ್ನು ನಿಗದಿಪಡಿಸುವುದು "ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುವ ವಿಚಾರ"ವಾದ್ದರಿಂದ ಅದಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಲು ನಿರಾಕರಿಸಿತು.
ಸೌಜನ್ಯ: indianexpress.com