ಸಂಜಯ್ ಮಿಶ್ರಾ | Photo Credit : BJP

ಬಲ್ಲಿಯಾ (ಉತ್ತರ ಪ್ರದೇಶ): ಖಾಸಗಿ ಫೋಟೊಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಲ್ಲಿ ವೈರಲ್ ಮಾಡಿದ ಆರೋಪಕ್ಕೆ ಸಂಬಂಧಿಸಿ ನೀಡಿದ್ದ ದೂರಿನಿಂದ ಬಲ್ಲಿಯಾ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿರುವ 35 ವರ್ಷದ ಬಿಜೆಪಿ ಕಾರ್ಯಕಾರಿಣಿ ಸದಸ್ಯೆಯೊಬ್ಬರು, ಮಿಶ್ರಾ ತಮ್ಮ ಮೇಲೆ ಪದೇಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಪ್ಟೆಂಬರ್ 28ರಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಹಿಳೆ ಈ ಆರೋಪ ಮಾಡಿದ್ದಾರೆ.

ಪೊಲೀಸರು ಮಹಿಳೆ ನೀಡಿದ ದೂರಿನಲ್ಲಿ ಬದಲಾವಣೆ ಮಾಡಿದ್ದಾರೆ ಎಂಬ ಆರೋಪವನ್ನು ಬನ್ಸ್‌ಡಿಹ್ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಜೈ ಶಂಕರ್ ಮಿಶ್ರಾ ತಳ್ಳಿಹಾಕಿದ್ದಾರೆ. ‘ಅಫಿಡವಿಟ್ ಸ್ವೀಕರಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು ಪ್ರಕರಣದ ಸತ್ಯಾಸತ್ಯತೆಯ ಆಧಾರದ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಶನಿವಾರ ಪಿಟಿಐಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆಯ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 15ರಂದು ಬನ್ಸ್‌ಡಿಹ್ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳಾದ ಅಲೋಕ್ ಸಿಂಗ್, ಗಣೇಶ್ ಗುಪ್ತಾ ಮತ್ತು ಅಜಿತ್ ಮಿಶ್ರಾ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಮ್ಮ ಖಾಸಗಿ ವೀಡಿಯೊವನ್ನು ವಾಟ್ಸಾಪ್‌ನಲ್ಲಿ ವೈರಲ್ ಮಾಡಿದ್ದು, ಇದರಿಂದ ತಮ್ಮ ಗೌಪ್ಯತೆ, ಘನತೆ ಮತ್ತು ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಬಳಿಕ ಸಲ್ಲಿಸಿದ ಅಫಿಡವಿಟ್‌ ನಲ್ಲಿ ಪೊಲೀಸರು ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ. ಆದ್ದರಿಂದ, ತನಿಖೆಯ ಭಾಗವಾಗಿ ಪರಿಗಣಿಸುವಂತೆ ತಮ್ಮ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಅಲೋಕ್ ಸಿಂಗ್ ಅವರಿಗೆ ಸಂಜಯ್ ಮಿಶ್ರಾ ಅವರ ರಕ್ಷಣೆ ಇದೆ. ಮಿಶ್ರಾ ಮತ್ತು ಅಲೋಕ್ ಸಿಂಗ್ ಇಬ್ಬರೂ ತಮ್ಮ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಆರಂಭದಲ್ಲಿ ಬನ್ಸ್‌ಡಿಹ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಅವರ ಹೆಸರನ್ನೂ ಉಲ್ಲೇಖಿಸಿದ್ದೆ. ಆದರೆ, ಮತ್ತೊಂದು ದೂರು ನೀಡುವಂತೆ ತಮ್ಮ ಮೇಲೆ ಒತ್ತಡ ಹೇರಲಾಯಿತು. ಪರಿಣಾಮವಾಗಿ ಅವರ ಹೆಸರನ್ನು ಕೈಬಿಟ್ಟು, ಸಾಮಾನ್ಯ ಸೆಕ್ಷನ್‌ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ತಮಗೆ ಬೆದರಿಕೆ ಮತ್ತು ಕಿರುಕುಳ ಎದುರಾಗಿದೆ ಎಂದಿರುವ ಮಹಿಳೆ, ಪ್ರಕರಣವನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳುವ ಮುನ್ನ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸಿದ್ದಾಗಿ ತಿಳಿಸಿದ್ದಾರೆ.

ಆರೋಪ ನಿರಾಕರಣೆ

ಸಂಜಯ್ ಮಿಶ್ರಾ ಆರೋಪಗಳನ್ನು ನಿರಾಕರಿಸಿದ್ದಾರೆ. ಆರೋಪಗಳು ಆಧಾರರಹಿತವಾಗಿದ್ದು, ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಸಂಚಿನ ಭಾಗವಾಗಿವೆ ಎಂದು ಅವರು ಹೇಳಿದ್ದಾರೆ.

‘ಈ ಆರೋಪಗಳನ್ನು ಮಾಡಲು ಮಹಿಳೆಯನ್ನು ದಾರಿ ತಪ್ಪಿಸಲಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ. ನಾನು ಏನಾದರೂ ತಪ್ಪು ಮಾಡಿದ್ದರೆ, ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧನಿದ್ದೇನೆ’ ಎಂದು ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಪಕ್ಷದ ಹಿರಿಯ ಮುಖಂಡರಿಗೆ ಮಾಹಿತಿ ನೀಡಿರುವುದಾಗಿಯೂ ಅವರು ಹೇಳಿದ್ದಾರೆ. ಆರೋಪ ಮಾಡಿರುವ ಮಹಿಳೆ ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆಯಾಗಿದ್ದರು. ಅವರು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆಯಾಗಲು ಬಯಸಿದ್ದರು ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor