ಪಾಕ್ ಗೆ ಚೀನಾದ J-35A ಯುದ್ಧ ವಿಮಾನಗಳು; ಪೈಲಟ್ ಗಳಿಗೆ ಚೀನಾದಲ್ಲೇ ತರಬೇತಿ: ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಕಳವಳ
Photo: x.com/IndianExpress
ಹೊಸದಿಲ್ಲಿ: ಪಾಕಿಸ್ತಾನವು ಚೀನಾದಿಂದ ಐದನೇ ತಲೆಮಾರಿನ J-35A ‘ಸ್ಟೆಲ್ತ್’ ಯುದ್ಧವಿಮಾನಗಳನ್ನು ಪಡೆಯಲು ಮುಂದಾಗಿರುವುದು ಕಳವಳಕಾರಿ ಬೆಳವಣಿಗೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನ ತನ್ನ ಪೈಲಟ್‌ಗಳಿಗೆ ಚೀನಾದಲ್ಲೇ ತರಬೇತಿ ನೀಡುತ್ತಿರುವುದೂ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಸುಮಾರು ನಲ್ವತ್ತು J-35A ಯುದ್ಧವಿಮಾನಗಳನ್ನು ಪಡೆಯಲು ಸಜ್ಜಾಗಿದೆ ಎಂಬ ವರದಿಗಳಿವೆ. ಚೀನಾ ತನ್ನ ಐದನೇ ತಲೆಮಾರಿನ ಯುದ್ಧವಿಮಾನವನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಿರುವ ಮೊದಲ ನಿದರ್ಶನ ಇದಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನದ ಈ ಬೆಳವಣಿಗೆಯ ನಡುವೆಯೇ ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ಸಂಖ್ಯೆಯಲ್ಲೂ ಕೊರತೆ ಎದುರಾಗಿದೆ. ಮಿಗ್-21 ಯುದ್ಧವಿಮಾನಗಳು ಸೇವೆಯಿಂದ ನಿವೃತ್ತಿಯಾದ ಬಳಿಕ ವಾಯುಪಡೆಯ ಯುದ್ಧವಿಮಾನ ಸ್ಕ್ವಾಡ್ರನ್‌ಗಳ ಸಂಖ್ಯೆ 29ಕ್ಕೆ ಇಳಿದಿದೆ. ಆದರ್ಶಪ್ರಾಯವಾಗಿ 42.5 ಸ್ಕ್ವಾಡ್ರನ್ ಗಳು ಇರಬೇಕು. ದೇಶದ ಭದ್ರತಾ ಅಗತ್ಯಗಳನ್ನು ಗಮನಿಸಿದರೆ 42ಕ್ಕಿಂತಲೂ ಹೆಚ್ಚು ಸ್ಕ್ವಾಡ್ರನ್ ಗಳ ಅಗತ್ಯವಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ಕೊರತೆ ನೀಗಿಸಲು ಮುಂದಿನ ಕೆಲವು ವರ್ಷಗಳವರೆಗೆ ಪ್ರತಿವರ್ಷ 36ರಿಂದ 40 ಯುದ್ಧವಿಮಾನಗಳನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
‘ನಮ್ಮಲ್ಲಿ ವಿಮಾನಗಳ ಸಂಖ್ಯೆ ಕಡಿಮೆಯಿರಬಹುದು. ಆದರೆ ನಾವು ದುರ್ಬಲರಲ್ಲ’ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 31ರಂದು ನಿವೃತ್ತರಾಗಲಿರುವ ಸಿಂಗ್ ಅವರು ವಾಯುಪಡೆ ಮುಖ್ಯಸ್ಥರಾಗಿ ಶನಿವಾರ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯುದ್ಧವಿಮಾನ ಸೇರ್ಪಡೆಯಲ್ಲಿ ವಿಳಂಬ
ಹೊಸ ಯುದ್ಧವಿಮಾನಗಳ ಸೇರ್ಪಡೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಯೋಜನೆಗಳನ್ನು ರೂಪಿಸಿದ ಬಳಿಕ ಅವುಗಳನ್ನು ಜಾರಿಗೊಳಿಸುವಲ್ಲಿ ಕೆಲವೊಮ್ಮೆ ವಿಳಂಬವಾಗುತ್ತದೆ. ಆದರೆ ಈ ಬಾರಿ ವಿಳಂಬ ದೀರ್ಘಕಾಲದ್ದಾಗಿದೆ. ತಂತ್ರಜ್ಞಾನದ ಲಭ್ಯತೆಯಲ್ಲಿ ವಿಳಂಬವಾದರೆ, ಅದು ತಂತ್ರಜ್ಞಾನವನ್ನು ನಿರಾಕರಿಸಿದಂತೆಯೇ’ ಎಂದು ತಾವು ಈ ಹಿಂದೆ ಹೇಳಿದ್ದ ಮಾತನ್ನು ಪುನರುಚ್ಚರಿಸಿದ್ದಾರೆ.
ರಫೇಲ್, LCA MK1A, ಮಾರ್ಕ್-2
ವಾಯುಪಡೆಯ ಯುದ್ಧವಿಮಾನಗಳ ಕೊರತೆ ನೀಗಿಸಲು ಬಹು-ಪಾತ್ರದ ಯುದ್ಧವಿಮಾನಗಳು (MRFA), LCA MK1A ಮತ್ತು ಪ್ರಸ್ತಾವಿತ ಮಾರ್ಕ್-2 ವಿಮಾನಗಳತ್ತ ಗಮನಹರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ವಿಮಾನಗಳು ಈಗಿನ ಕೊರತೆಯನ್ನು ನೀಗಿಸುವುದರ ಜತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಯುದ್ಧವಿಮಾನಗಳು ಸೇವೆಯಿಂದ ನಿವೃತ್ತಿಯಾದಾಗ ಉಂಟಾಗುವ ಕೊರತೆಯನ್ನೂ ತುಂಬಲಿವೆ ಎಂದಿದ್ದಾರೆ.
ಐದನೇ ತಲೆಮಾರಿನ AMCA ಯುದ್ಧವಿಮಾನ ಯೋಜನೆಗೆ ವಾಯುಪಡೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಆದರೆ AMCA ಯೋಜನೆಯಲ್ಲಿ ವಿಳಂಬವಾದರೆ ಬೇರೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಫ್ರಾನ್ಸ್ ನಿಂದ 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಪ್ರಸ್ತಾವಿತ ಒಪ್ಪಂದಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲೇ ಸಹಿ ಹಾಕುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ರಷ್ಯಾ ಭಾರತಕ್ಕೆ Su-57 ಐದನೇ ತಲೆಮಾರಿನ ಯುದ್ಧವಿಮಾನಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
‘ಸಿಂಧೂರ್’ನಲ್ಲಿ ಪಾಕ್ ಗೆ ಸಂಯೋಜನೆಯ ಕೊರತೆ
‘ಆಪರೇಷನ್ ಸಿಂಧೂರ್’ನಲ್ಲಿ ಪಾಕಿಸ್ತಾನದ ಬಳಿ ವಿವಿಧ ರೀತಿಯ ಯುದ್ಧಸಾಮಗ್ರಿ ಮತ್ತು ವ್ಯವಸ್ಥೆಗಳಿದ್ದವು. ಆದರೆ ಅವುಗಳನ್ನು ಸಮರ್ಪಕವಾಗಿ ಸಂಯೋಜಿಸಿ ಬಳಸಲು ಸಾಧ್ಯವಾಗದ ಕಾರಣ ಪಾಕಿಸ್ತಾನ ಹೆಚ್ಚಿನ ಸಾಧನೆ ಮಾಡಲು ವಿಫಲವಾಯಿತು ಎಂದು ಸಿಂಗ್ ಹೇಳಿದ್ದಾರೆ.
ಇದರಿಂದ ವಿವಿಧ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳ ನಡುವಿನ ಸಂಯೋಜನೆ ಎಷ್ಟು ಮುಖ್ಯ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ವಾಯುಪಡೆಯ ಸಾಮರ್ಥ್ಯ ಹೆಚ್ಚಿಸಲು ಕೃತಕ ಬುದ್ಧಿಮತ್ತೆ (AI) ಬಳಕೆಯ ಅಗತ್ಯವಿದೆ. ‘ನಾವು AI-ಸಜ್ಜಿತ ಪಡೆಯನ್ನು ಹೊಂದಿರಬೇಕು’ ಎಂದು ಅವರು ಹೇಳಿದ್ದಾರೆ.
‘ಆತ್ಮನಿರ್ಭರತೆ ಬೇಕು; ಭದ್ರತೆ ಮೊದಲು’
‘ಮೇಕ್-ಇನ್-ಇಂಡಿಯಾ’ ಕುರಿತು ಮಾತನಾಡಿದ ಸಿಂಗ್, ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಅಗತ್ಯ. ಆದರೆ ದೇಶದ ರಕ್ಷಣಾ ಸನ್ನದ್ಧತೆಗೆ ಧಕ್ಕೆಯಾಗುವ ರೀತಿಯಲ್ಲಿ ಆತ್ಮನಿರ್ಭರತೆ ಸಾಧಿಸಲು ಸಾಧ್ಯವಿಲ್ಲ. ‘ಆತ್ಮನಿರ್ಭರತೆ ರಾತ್ರೋರಾತ್ರಿ ಸಾಧ್ಯವಿಲ್ಲ. ಅದಕ್ಕಾಗಿ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸಬೇಕು. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಆದರೆ ಸರಿಯಾದ ವೇಗದಲ್ಲಿ ಸಾಗುತ್ತಿದ್ದೇವೆಯೇ ಎಂಬುದನ್ನು ಹೇಳಲು ನಾನು ಸೂಕ್ತ ವ್ಯಕ್ತಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಾಯುಪಡೆಯು ‘ಥಿಯೇಟರ್ ಕಮಾಂಡ್’ಗಳ ವಿರುದ್ಧವಲ್ಲ ಎಂದು ಸಿಂಗ್ ಇದೇ ವೇಳೆ ಉಲ್ಲೇಖಿಸಿದ್ದಾರೆ.
‘ಆಪರೇಷನ್ ಸಿಂಧೂರ್’ ಬಳಿಕ ಹೊಸ ಪರಿಸ್ಥಿತಿ ಎದುರಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಎಲ್ಲ ಅಂಶಗಳನ್ನು ಪರಿಗಣಿಸಬೇಕು. ಮಾನವರಹಿತ ವ್ಯವಸ್ಥೆಗಳು ಮತ್ತು ‘ಲೋಯ್ಟರಿಂಗ್ ಮ್ಯುನಿಷನ್ಸ್’ಗಳನ್ನು ವಾಯುಪಡೆಯ ಈಗಿರುವ ಶಸ್ತ್ರಾಸ್ತ್ರಗಳು ಮತ್ತು ವೇದಿಕೆಗಳೊಂದಿಗೆ ಸಂಯೋಜಿಸಬೇಕು ಎಂದು ತಿಳಿಸಿದ್ದಾರೆ.
ಗುರಿಯ ಬಳಿ ಕಾಯ್ದು, ಸೂಕ್ತ ಸಮಯದಲ್ಲಿ ದಾಳಿ ಮಾಡುವ ಶಸ್ತ್ರಾಸ್ತ್ರಗಳನ್ನು ‘ಲೋಯ್ಟರಿಂಗ್ ಮ್ಯುನಿಷನ್ಸ್’ ಎಂದು ಕರೆಯಲಾಗುತ್ತದೆ.
ಪ್ರತ್ಯೇಕ ಡ್ರೋನ್ ಪಡೆಯನ್ನು ರಚಿಸುವ ಸಾಧ್ಯತೆಯನ್ನು ಸಿಂಗ್ ತಳ್ಳಿಹಾಕಿದ್ದಾರೆ. ಡ್ರೋನ್‌ಗಳ ಸಂಖ್ಯೆ, ವಿಧಗಳು ಮತ್ತು ಕಾರ್ಯಾಚರಣೆಯ ಬಳಕೆಯನ್ನು ವಾಯುಪಡೆ ವಿಸ್ತರಿಸುತ್ತಿದೆ. ಸಮರ್ಪಕ ಸೇನಾ ಶಕ್ತಿಯಿಲ್ಲದಿದ್ದರೆ ಯಾವುದೇ ರಾಷ್ಟ್ರವು ಒತ್ತಡ ಅಥವಾ ಬಲವಂತಕ್ಕೆ ಒಳಗಾಗುವ ಅಪಾಯವಿರುತ್ತದೆ. ನಾವು ನಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸಲು ಬಲವಾದ ಸೇನಾ ಶಕ್ತಿ ಅಗತ್ಯ’ ಎಂದು ಸಿಂಗ್ ಹೇಳಿದ್ದಾರೆ.
ಇತ್ತೀಚಿನ ಸಂಘರ್ಷಗಳಲ್ಲಿ ವಾಯುಶಕ್ತಿ ಪ್ರಮುಖ ಪಾತ್ರ ವಹಿಸಿದೆ. ಅದು ಸೇನಾ ಶಕ್ತಿಯ ಪ್ರಬಲ ಹಾಗೂ ನಿರ್ಣಾಯಕ ಅಂಶವಾಗಿ ಹೊರಹೊಮ್ಮಿದೆ ಎಂದು ಅವರು ವಿವರಿಸಿದರು.
ಅತ್ಯಾಧುನಿಕ ಯುದ್ಧವಿಮಾನಗಳು, ದೂರಗಾಮಿ ನಿಖರ ದಾಳಿ ಶಸ್ತ್ರಾಸ್ತ್ರಗಳು, ವಾಯು ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಗಳು ಹಾಗೂ ಮಾನವರಹಿತ ವೈಮಾನಿಕ ವ್ಯವಸ್ಥೆಗಳಿಗೆ ವಿಶ್ವದಾದ್ಯಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸೇನಾ ಶಕ್ತಿಯು ವೈಮಾನಿಕ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಳ್ಳುತ್ತಿದೆ ಎಂದು ಏರ್ ಚೀಫ್ ಮಾರ್ಷಲ್ ಅವರು ಹೇಳಿದ್ದಾರೆ.
ವಾಯುಪಡೆಯ ಇತ್ತೀಚಿನ ಸಾಧನೆಗಳಿಗೆ ಇಡೀ ಪಡೆಯೇ ಕಾರಣ. ಯಾವುದೇ ವ್ಯಕ್ತಿಯು ಸಂಸ್ಥೆಗಿಂತ ದೊಡ್ಡವರಲ್ಲ’ ಎಂದ ಅವರು, ಸಂಸ್ಥೆಯ ಮುಖ್ಯಸ್ಥರಾಗಿ ಯಾವುದೇ ಲೋಪದೋಷಗಳಿಗೆ ವೈಯಕ್ತಿಕವಾಗಿ ಹೊಣೆಗಾರಿಕೆ ಹೊರಲು ಸಿದ್ಧ ಎಂದು ಸಿಂಗ್ ತಿಳಿಸಿದ್ದಾರೆ.
ಮಚ್ಚರ್‌ಗೆ ಶ್ಲಾಘನೆ
‘ಫ್ಲೈದುಬೈ’ ಘಟನೆಯಲ್ಲಿ ಸಹ ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾದರೂ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಸಿಂಗ್ ಶ್ಲಾಘಿಸಿದ್ದಾರೆ.
‘ನಮ್ಮ ಭಾರತೀಯ ಪೈಲಟ್ ಮಾಡಿರುವ ಕೆಲಸ ಅತ್ಯಂತ ಶ್ಲಾಘನೀಯ. ಅವರು ಸಂದರ್ಭಕ್ಕೆ ತಕ್ಕಂತೆ ತ್ವರಿತವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ದೈಹಿಕ ದೃಢತೆ ಮತ್ತು ಮಾನಸಿಕ ದೃಢತೆಯನ್ನು ಪ್ರದರ್ಶಿಸಿದ್ದಾರೆ. ಇದು ನಮಗೂ ಒಂದು ಪಾಠ’ ಎಂದು ಸಿಂಗ್ ಹೇಳಿದ್ದಾರೆ.