Madhya Pradesh | ಸೀತೆಯನ್ನು ‘ಮೃತ್ಯುವಿಗೆ ಸಮಾನ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ BJP ಶಾಸಕ; ವೇದಿಕೆಯಲ್ಲೇ ಆಕ್ಷೇಪಿಸಿದ ಶಾಸಕಿ!
ಪನ್ನಾ ಲಾಲ್ ಶಕ್ಯ | Photo Credit : Facebook@ Pannalal Shakya
ಹೊಸದಿಲ್ಲಿ: ಮಧ್ಯಪ್ರದೇಶದ BJP ಶಾಸಕ ಪನ್ನಾ ಲಾಲ್ ಶಕ್ಯ ಅವರು ರಾಮಾಯಣ ಮತ್ತು ಮಹಾಭಾರತದ ಉದಾಹರಣೆಗಳನ್ನು ನೀಡಿ ಮಾತನಾಡುವ ವೇಳೆ ಸೀತೆಯನ್ನು ‘ಮೌತ್ ಕಾ ಸಮಾನ್’ (ಮೃತ್ಯುವಿಗೆ ಸಮಾನ) ಎಂದು ಉಲ್ಲೇಖಿಸಿ, ಹಲವು ಯುದ್ಧಗಳಲ್ಲಿ ಪುರುಷರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಗುಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಕ್ಯ ಅವರು ಮಂಗಳವಾರ ಗುಣಾದ ನಾನಾಖೇಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದ ರಾಜ್ಯಮಟ್ಟದ ಬಲರಾಮ ಮಹೋತ್ಸವದಲ್ಲಿ ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಗುಣಾ ಸೇರಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ರಾವಣ ಸೀತೆಯನ್ನು ಅಪಹರಿಸಿದ ಘಟನೆಯನ್ನು ಉದಾಹರಣೆಯಾಗಿ ನೀಡಿದ ಶಕ್ಯ, “ಅನೇಕ ಜನರು ರಾವಣನಿಗೆ, ‘ನೀವು ಇನ್ನೊಬ್ಬ ಪುರುಷನ ಹೆಂಡತಿಯನ್ನು ಇಲ್ಲಿಗೆ ಏಕೆ ಕರೆತಂದಿದ್ದೀರಿ?’ ಎಂದು ಕೇಳಿದರು. ಇದು ಅನಾಹುತಕ್ಕೆ ಕಾರಣವಾಗುತ್ತದೆ, ‘ಮೌತ್ ಕಾ ಸಮಾನ್’ (ಮೃತ್ಯುವಿಗೆ ಸಮಾನ’) ಎಂದು ಅರ್ಥಮಾಡಿಸಲು ಪ್ರಯತ್ನಿಸಿದರು. ಆದರೆ ಆತ ಕೇಳಲಿಲ್ಲ” ಎಂದು ಹೇಳಿದರು.
“ಆ ಯುದ್ಧವನ್ನು ನೋಡಿ. ಒಬ್ಬ ಮಹಿಳೆಯೂ ಸಾಯಲಿಲ್ಲ. ಎಲ್ಲ ಪುರುಷರೂ ಸತ್ತರು. ಆದರೆ ಒಬ್ಬ ಮಹಿಳೆಯೂ ಸಾಯಲಿಲ್ಲ” ಎಂದರು.
ಮಹಾಭಾರತದ ಉದಾಹರಣೆಯನ್ನೂ ನೀಡಿದ ಅವರು, “ಮಹಾಭಾರತದಲ್ಲೂ ಇದೇ ರೀತಿ ನಡೆಯಿತು. ಒಬ್ಬ ಪಾಂಚಾಲಿ (ದ್ರೌಪದಿ)ಗಾಗಿ ಒಂದು ಕೋಟಿ ಪುರುಷರು ಕೊಲ್ಲಲ್ಪಟ್ಟರು. ಯಾವುದೇ ಮಹಿಳೆಯರು ಕೊಲ್ಲಲ್ಪಟ್ಟಿಲ್ಲ. ಇಲ್ಲಿನ ವಿಪರ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಒಂದು ಸಂದರ್ಭದಲ್ಲಿ ಅನೇಕ ಪುರುಷರು ಕೊಲ್ಲಲ್ಪಟ್ಟರು; ಇನ್ನೊಂದು ಸಂದರ್ಭದಲ್ಲಿ ಒಬ್ಬ ಮಹಿಳೆಗಾಗಿ ಜೀವಗಳು ಬಲಿಯಾದವು. ಸತ್ತದ್ದು ಮಹಿಳೆಯರಲ್ಲ; ಅದು ಪುರುಷರೇ” ಎಂದು ಹೇಳಿದರು.
“ನಾವು ಈ ವಿಚಾರವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಪೃಥ್ವಿರಾಜ್ ಚೌಹಾಣ್ ಅವರು ಸಂಯೋಗಿತಾಳಿಗಾಗಿ ಹೋರಾಡುವ ವೇಳೆ ತಮ್ಮ 55 ಪ್ರಮುಖ ನಾಯಕರನ್ನು ಕಳೆದುಕೊಂಡರು. ಅದರ ಪರಿಣಾಮವನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ” ಎಂದು ಶಕ್ಯ ಹೇಳಿದರು.
►ವೇದಿಕೆಯಲ್ಲೇ ಶಾಸಕಿಯಿಂದ ಆಕ್ಷೇಪ
ಶಕ್ಯ ಅವರ ಮಾತಿಗೆ ವೇದಿಕೆಯಲ್ಲಿದ್ದ ಚಾಚೌರಾ ವಿಧಾನಸಭಾ ಕ್ಷೇತ್ರದ BJP ಶಾಸಕಿ ಪ್ರಿಯಾಂಕಾ ಪೆಂಚಿ ಅವರು ಆಕ್ಷೇಪಿಸಿದರು.
“ಭಾಯ್ ಸಾಹಬ್ ಯೇ ಗಲಾತ್ ಬಾತ್ ಹೈ (ಇದು ಸರಿಯಲ್ಲ). ಮಹಿಳೆಯರೂ ತ್ಯಾಗ ಮಾಡಿದ್ದಾರೆ. ನಾನು ಒಬ್ಬ ಮಹಿಳೆ. ನೀವು ಮಹಿಳೆಯರು ಮಾಡಿದ ತ್ಯಾಗಗಳನ್ನು ಕಡೆಗಣಿಸುತ್ತಿದ್ದೀರಿ” ಎಂದು ಅವರು ಹೇಳಿದರು.
ಇದಕ್ಕೆ ಶಕ್ಯ ಅವರು ತಾವು ಅನೇಕ ಪುಸ್ತಕಗಳನ್ನು ಓದಿರುವುದಾಗಿ ಹೇಳಿ, ನಡೆದಿರುವುದರ ಬಗ್ಗೆ ತನಗೆ ನಿಖರವಾಗಿ ತಿಳಿದಿದೆ ಎಂದು ಪ್ರತಿಪಾದಿಸಿದರು. ಬಳಿಕ ಪೆಂಚಿ ಅವರನ್ನು ತಮ್ಮ ಸ್ಥಾನಕ್ಕೆ ಹಿಂತಿರುಗಿ ಕುಳಿತುಕೊಳ್ಳುವಂತೆ ಕೇಳಿದರು.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮದಲ್ಲಿದ್ದ ಕೆಲವರು ನಗುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ. ಶಾಸಕರ ನಡುವಿನ ವೇದಿಕೆಯ ಮೇಲಿನ ಸಾರ್ವಜನಿಕ ಚರ್ಚೆ ಮಧ್ಯಪ್ರದೇಶದ BJP ಘಟಕದಲ್ಲಿ ಚರ್ಚೆಗೆ ಕಾರಣವಾಗಿದೆ.
►‘ಇಂತಹ ಹೇಳಿಕೆ ಸ್ವಾಗತಾರ್ಹವಲ್ಲ’
ಶಕ್ಯ ಅವರ ಹೇಳಿಕೆ ಕುರಿತು The Print ಜೊತೆ ಮಾತನಾಡಿದ BJP ಮಧ್ಯಪ್ರದೇಶದ ವಕ್ತಾರ ಹಿತೇಶ್ ಬಾಜ್ಪೈ, “ಗರೀಬ್–ಯುವ–ಅನ್ನದಾತ–ನಾರಿ (GYAN)ಗೆ ನಮ್ಮ ಬದ್ಧತೆಯನ್ನು ಪೂರ್ಣಗೊಳಿಸುವ ಮೂಲಕ ಯುವಜನರು ಮತ್ತು ದೀನದಲಿತರ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ನಾವು ರೈತ ಮತ್ತು ಮಹಿಳಾ ಕೇಂದ್ರಿತ ರಾಜಕೀಯ ಮಾಡುತ್ತೇವೆ ಎಂದು BJP ಈಗಾಗಲೇ ಸ್ಪಷ್ಟಪಡಿಸಿದೆ. ನಾವು ಆ ಮಾರ್ಗಗಳಲ್ಲಿ ದೃಢವಾಗಿದ್ದೇವೆ. ಈ ಭಾವನೆಗಳನ್ನು ಧಿಕ್ಕರಿಸುವ ಯಾವುದೇ ಹೇಳಿಕೆ ಸ್ವಾಗತಾರ್ಹವಲ್ಲ” ಎಂದು ಹೇಳಿದರು.
► BJP ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಶಕ್ಯ ಅವರ ಹೇಳಿಕೆಯನ್ನು ಪ್ರತಿಪಕ್ಷಗಳು ಟೀಕಿಸಿವೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, “ಈ ನಡವಳಿಕೆಯು BJPಯ ಪಾತ್ರಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ಮಹಿಳೆಯರನ್ನು ಗೌರವಿಸುವ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಆದರೆ ಅವರ ಶಾಸಕರು, ಸಂಸದರು ಮತ್ತು ಸಚಿವರು ಪ್ರತಿದಿನ ಮಹಿಳೆಯರನ್ನು ಅವಮಾನಿಸುತ್ತಾರೆ. ಇದು ಶೇಕಡಾ 50ರಷ್ಟು ಜನಸಂಖ್ಯೆಗೆ ಮಾತ್ರವಲ್ಲದೆ ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ಧರ್ಮಕ್ಕೂ ಅವಮಾನ. ಇದನ್ನು ಸಹಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಶಕ್ಯ ಅವರು ಈ ಹಿಂದೆ ಕೂಡ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗಿದ್ದರು.
ಸೌಜನ್ಯ: theprint.in