ಇಂಧನಕ್ಕೆ ಕಬ್ಬು, ಗ್ರಾಹಕರಿಗೆ ಕಹಿ; ಸಾರ್ವಕಾಲಿಕ ದಾಖಲೆ ಬರೆದ ಸಕ್ಕರೆ ಬೆಲೆ, ನಿಯಂತ್ರಣಕ್ಕೆ ಕೇಂದ್ರದ ಕಸರತ್ತು!
ಸಾಂದರ್ಭಿಕ ಚಿತ್ರ |Photo Credit : PTI
ಪೆಟ್ರೋಲ್ ದರ ಇಳಿಸಲು ಹೋಗಿ ಸಕ್ಕರೆ ದರ ಹೆಚ್ಚಾಗಿದೆಯೆ? ಹಬ್ಬದ ಸೀಸನ್ನಲ್ಲಿ ಗ್ರಾಹಕರಿಗೆ ದೊಡ್ಡ ಆಘಾತ ತರಲಿದೆ ಸಕ್ಕರೆಯ ಬೆಲೆಯೇರಿಕೆ.
ಭಾರತದ ಹೊಲಗಳಲ್ಲಿ ಕಬ್ಬುಗಳಿಗೇನೂ ಬರವಿಲ್ಲ. ಆದರೂ ಸಕ್ಕರೆ ಮಾರುಕಟ್ಟೆ ಅಸಾಮಾನ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದಕ್ಕೆ ಮುಖ್ಯ ಕಾರಣ ಮಹಾತ್ವಾಕಾಂಕ್ಷೆಯ ಎಥೆನಾಲ್ ತಯಾರಿಗೆ ನೂರಾರು ಡಿಸ್ಟಿಲರಿಗಳನ್ನು ನಿರ್ಮಿಸಿರುವುದು. ದೇಶದ ಸಕ್ಕರೆ ಪೂರೈಕೆಯಲ್ಲಿ ಸಮಸ್ಯೆಯಾಗದೆ ಇರಲು ಈಗಾಗಲೇ ರಫ್ತುಗಳನ್ನೂ ಸರ್ಕಾರ ನಿರ್ಬಂಧಿಸಿದೆ. ಹಾಗಿದ್ದರೂ ಸಕ್ಕರೆಯ ಬೆಲೆಗಳು ದಾಖಲೆಯ ಮಟ್ಟದಲ್ಲಿ ಏರುತ್ತಿವೆ. ಹೀಗಾಗಿ ದಶಕಗಳಿಂದ ಭಾರತ ತಪ್ಪಿಸುತ್ತಿದ್ದ ಒಂದನ್ನು ಈಗ ಮಾಡಲೇಬೇಕಿದೆ. ಅದೆಂದರೆ ಸಕ್ಕರೆಯ ಆಮದು. ಕಬ್ಬನ್ನು ಎಥೆನಾಲ್ ಉತ್ಪಾದನೆ ಕಡೆಗೆ ಬದಲಿಸಿರುವುದೇ ಈಗಿನ ಸಕ್ಕರೆಯ ಬಿಕ್ಕಟ್ಟಿಗೆ ಮುಖ್ಯ ಕಾರಣ ಎಂದು ತಜ್ಞರು ಟೀಕಿಸುತ್ತಿದ್ದಾರೆ.
ಏರುತ್ತಿದೆ ಸಕ್ಕರೆಯ ಬೆಲೆ
ಸಕ್ಕರೆ ಆಮದನ್ನು ಸುಗಮಗೊಳಿಸಲು ಭಾರತ ಇದೀಗ ಸಕ್ಕರೆ ಮೇಲಿನ ಶೇ 100ರಷ್ಟು ಆಮದು ಸುಂಕವನ್ನು ತೆಗೆದು ಹಾಕಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಭಾರತದ ಹಬ್ಬದ ಋತು ಸಮೀಪಿಸುತ್ತಿದ್ದು, ಸಿಹಿ-ತಿನಿಸುಗಳು ಮತ್ತು ಸಂಸ್ಕರಿಸಿದ ಆಹಾರಗಳಿ ಬೇಡಿಕೆ ತೀವ್ರವಾಗಿ ಏರುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಕಬ್ಬನ್ನು ಎಥೆನಾಲ್ ಕಡೆಗೆ ತಿರುಗಿಸುತ್ತಿರುವುದು ಇಂಧನ ಭದ್ರತೆ ಮತ್ತು ಆಹಾರ ಬೆಲೆಗಳ ನಡುವಿನ ದ್ವಂದ್ವಕ್ಕೆ ಕಾರಣವಾಗಿದೆ.
ಭಾರತದ ಪ್ರಮುಖ ಸಕ್ಕರೆ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಗಟು ಸಕ್ಕರೆ ಬೆಲೆಗಳು ಆಗಸ್ಟ್ ಆರಂಭದಿಂದ ಸುಮಾರು ಶೇ 20ರಷ್ಟು ಏರಿಕೆಯಾಗಿ 100 ಕೆಜಿಗೆ ದಾಖಲೆಯ 5,350 ರೂ.ಗೆ ಏರಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ದತ್ತಾಂಶದ ಪ್ರಕಾರ ಮಂಗಳವಾರದಂದು (ಆಗಸ್ಟ್ 18) ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 52.3 ರೂ.ಗಳಷ್ಟಿತ್ತು.
ಕೆಲವು ಮಾರುಕಟ್ಟೆಗಳಲ್ಲಿ ಗಣನೀಯ ಏರಿಕೆ ಕಂಡಿದೆ. ರಿಟೇಲ್ ಸಕ್ಕರೆ ಬೆಲೆಗಳು ಪಂಜಾಬ್ನಲ್ಲಿ ಕೇಜಿಗೆ 64 ರೂ. ಇದ್ದರೆ ಮುಂಬೈ, ಭೋಪಾಲ್ ಮತ್ತು ಇತರ ಸಮೀಪದ ಮಾರುಕಟ್ಟೆಗಳಲ್ಲಿ ಕೇಜಿಗೆ 58–63 ರೂ.ಗಳಿಗೆ ಏರಿದೆ. ಮುಂದಿನ ತಿಂಗಳುಗಳಲ್ಲಿ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಬರಲಿರುವ ಕಾರಣದಿಂದ ಸಕ್ಕರೆ ಕೊರತೆ ಹಬ್ಬದ ಋತುವಿನ ಹಣದುಬ್ಬರ ಸಮಸ್ಯೆಯಾಗದಂತೆ ಗಮನಿಸಲು ಸರ್ಕಾರ ಹರಸಾಹಸಪಡುತ್ತಿದೆ.
ಪೂರೈಕೆಯ ಕೊರತೆಯಿಂದ ಬೆಲೆ ಏರಿಕೆ
ಸಕ್ಕರೆಯ ಬೆಲೆಯೇರಿಕೆ ಸಮಸ್ಯೆಯು ಮೂಲ ಪೂರೈಕೆಯ ಕೊರತೆಯಿಂದ ಉದ್ಭವಿಸಿದೆ. ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ತನ್ನ E20 ಗುರಿಗಳನ್ನು ಸಾಧಿಸಲು ಭಾರತ ಕಬ್ಬನ್ನು ಎಥೆನಾಲ್ ಉತ್ಪಾದನೆ ಕಡೆಗೆ ತಿರುಗಿಸಿದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ಉದ್ದೇಶಕ್ಕಾಗಿ ಡಜನ್ಗಟ್ಟಲೆ ಡಿಸ್ಟಿಲರಿ ನಿರ್ಮಿಸಲು ಒತ್ತು ನೀಡಿದೆ. 2025ರ ಮಧ್ಯಭಾಗದ ವೇಳೆಗೆ 499 ತಾಣಗಳಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ ಸುಮಾರು 1,822 ಕೋಟಿ ಲೀಟರ್ಗಳಿಗೆ ಏರಿಸಲಾಗಿದೆ. ಎಥೆನಾಲ್ ಫೀಡ್ಸ್ಟಾಕ್ನ ಶೇ 30–35 ರಷ್ಟನ್ನು ಕಬ್ಬು ಪೂರೈಸುತ್ತದೆ. ಉಳಿದವು ಮೆಕ್ಕೆ ಜೋಳ ಮತ್ತು ಅಕ್ಕಿಯಿಂದ ಬರುತ್ತದೆ ಎಂದು ಅಖಿಲ ಭಾರತ ಡಿಸ್ಟಿಲರ್ಸ್ ಅಸೋಸಿಯೇಶನ್ ತಿಳಿಸಿರುವುದಾಗಿ ವರದಿಯಾಗಿದೆ.
ಎಥೆನಾಲ್ಗೆ ಕಬ್ಬು ಬಳಕೆಯಿಂದ ಬೆಲೆಯೇರಿಕೆ
“ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ಬಳಸುವುದರಿಂದ ಸಕ್ಕರೆ ಮಾರುಕಟ್ಟೆಯ ಮೇಲೆ ಪರಿಣಾಮವಾಗುತ್ತಿದೆ. ಇದನ್ನು ಮೀರಿ ಸಕ್ಕರೆ ದಾಸ್ತಾನುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಮಾರುಕಟ್ಟೆ ಕುಶಲತೆಯನ್ನೂ ಸೂಚಿಸುತ್ತದೆ. ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸದೆ ಇದ್ದಲ್ಲಿ ಬೆಲೆಗಳು ನಿಯಂತ್ರಣದಲ್ಲಿರುತ್ತಿದ್ದವು” ಎಂದು ಕೃಷಿ ತಜ್ಞ ಮತ್ತು ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಧೀರ್ ಪನ್ವರ್ ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ, ಭಾರತದ ಇಂಧನ ನೀತಿಯು ಆಹಾರದ ಬೆಲೆಗಳ ವೆಚ್ಚದ ಮೇಲೆ ಪರಿಣಾಮ ಬೀರಬಾರದು. ಕಬ್ಬನ್ನು ಎಥೆನಾಲ್ಗೆ ತಿರುಗಿಸುವುದರಿಂದ ಸಕ್ಕರೆ ವೆಚ್ಚ ಏರಬಾರದು. ಆಹಾರದ ಬೆಲೆಗಳು ಏರಬಾರದು. ಭಾರತದಲ್ಲಿ ಕಬ್ಬಿನ ಉತ್ಪಾದನೆ ಸಂದರ್ಭದಲ್ಲಿ ಸಕ್ಕರೆಯ ಅವಶ್ಯಕತೆಗಳು ಮತ್ತು ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಸಕ್ಕರೆ ಬೆಲೆಗಳ ಸರಿಯಾದ ಅಂದಾಜುಗಳು ಬೇಕು.
ಆಮದು ಸುಂಕ ಕಡಿತಗೊಳಿಸುತ್ತಿರುವುದೇಕೆ?
ಇದೀಗ ಆಮದು ಸುಂಕವನ್ನು ಏಕೆ ಕಡಿತಗೊಳಿಸಲಾಗುತ್ತಿದೆ? ಬ್ರೆಝಿಲ್ ನಂತರ ಭಾರತ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ರಫ್ತುದಾರ. 1960ರಿಂದ ಭಾರತ ಸಕ್ಕರೆ ರಫ್ತು ಮಾಡುತ್ತಿದೆ. 2021-22ರಲ್ಲಿ 12 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಸಕ್ಕರೆ ರಫ್ತು ಮಾಡಲಾಗಿದೆ. ಆದರೆ ಸರ್ಕಾರ ದೇಶೀಯ ಲಭ್ಯತೆಗೆ ಆದ್ಯತೆ ನೀಡಿದ್ದರಿಂದ ದೇಶದ ರಫ್ತು ನೀತಿಯು ಸ್ಥಿರವಾಗಿ ಬಿಗಿಯಾಗಿದೆ. 2025-26ರ ಸಕ್ಕರೆ ಋತುವಿನಲ್ಲಿ ಭಾರತ ಸುಮಾರು 2 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು ರಫ್ತಿಗೆ ಅನುಮತಿಸಿತು. 2021-22ಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ.
ನಂತರ ಭಾರತ 2026ರಲ್ಲಿ ಮೇ 13ರಿಂದ ಸೆಪ್ಟೆಂಬರ್ 30ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತುಗಳನ್ನು ನಿಷೇಧಿಸಿದೆ. ದೇಶೀಯ ಸರಬರಾಜುಗಳನ್ನು ರಕ್ಷಿಸಲು, ಬೆಲೆ ನಿಯಂತ್ರಿಸಲು ಮತ್ತು ಉತ್ಪಾದನೆ ಮತ್ತು ಜಾಗತಿಕ ಸರಕು ಮಾರುಕಟ್ಟೆಗಳ ಮೇಲಿನ ಅನಿಶ್ಚಿತತೆಗೆ ಸಿದ್ಧವಾಗಲು ಪ್ರಯತ್ನಿಸಿತು.
ಈಗಿನ ನಿಷೇಧವು ಬಹಳ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಭಾರತ ಈ ಹಿಂದೆ ಸಾಮಾನ್ಯ ಸಾಗಣೆಗಳ ಮೇಲೆ ವಿಸ್ತೃತ ಅವಧಿಗೆ ಸಂಪೂರ್ಣ ನಿಷೇಧ ವಿಧಿಸುವ ಬದಲಿಗೆ ರಫ್ತು ನಿರ್ಬಂಧಗಳು, ಕೋಟಾಗಳು (ರಫ್ತು ಮಾಡಬಹುದಾದ ಸ್ಥಿರ ಗರಿಷ್ಠ ಪ್ರಮಾಣ) ಮತ್ತು ಪರಿಮಾಣಾತ್ಮಕ ಮಿತಿಗಳನ್ನು (ವ್ಯಾಪಾರದ ಮೇಲಿನ ಸಂಖ್ಯಾತ್ಮಕ ಮಿತಿಗಳು, ಕೋಟಾಗಳಿಗೆ ಭಿನ್ನವಾದ ರೂಪಗಳಲ್ಲಿ ಅನ್ವಯಿಸಬಹುದು. ಅಂದರೆ ಪ್ರತಿ ಕಂಪನಿಗೆ, ಪ್ರತಿ ತಿಂಗಳಿಗೆ ಅಥವಾ ಪ್ರತಿ ಗಮ್ಯಸ್ಥಾನಕ್ಕೆಇತ್ಯಾದಿ) ಅವಲಂಬಿಸಿತ್ತು. ಹಿಂದಿನ ನಿರ್ಬಂಧಗಳ ಸಮಯದಲ್ಲಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಸರಕುಗಳು ಸಾಗಣೆ ಮುಂದುವರಿದಿದ್ದವು.
ಕ್ರಮಗಳ ಹೊರತಾಗಿಯೂ ಏರುತ್ತಿರುವ ಬೆಲೆ
ಆದರೆ ಈ ಬಾರಿ ಸಂಪೂರ್ಣ ನಿಷೇಧದಂತಹ ಕ್ರಮಗಳ ಹೊರತಾಗಿಯೂ ದೇಶೀಯ ಬೆಲೆಗಳು ಏರುತ್ತಲೇ ಇವೆ. 2025-26ರ ಮಾರುಕಟ್ಟೆ ವರ್ಷದಲ್ಲಿ ಫೆಬ್ರವರಿಯವರೆಗೆ ಭಾರತ 2,01,547 ಟನ್ಗಳಷ್ಟು ಸಕ್ಕರೆ ರಫ್ತು ಮಾಡಿದೆ. ಮುಖ್ಯವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಹೆಚ್ಚು ರಫ್ತಾಗಿದೆ.
ಆದರೆ ಇದೀಗ ಸರ್ಕಾರ ಹೊಸ ಕ್ರಮವಾಗಿ ಆಮದು ಸುಂಕವನ್ನು ಕಡಿತಗೊಳಿಸಲು ನಿರ್ಧರಿಸುತ್ತಿದೆ. ಹೀಗಾಗಿ ದಶಕಗಳ ನಂತರ ಮೊದಲ ಬಾರಿಗೆ ವಿದೇಶಿ ಸಕ್ಕರೆ ಭಾರತೀಯ ನೆಲವನ್ನು ತಲುಪಲಿದೆ. ಹೀಗಾಗಿ ಹಬ್ಬದ ಋತುವಿನಲ್ಲಿ ದೇಶೀಯ ಪೂರೈಕೆ ಸರಾಗಗೊಳ್ಳಬಹುದು. ಅದೇ ರೀತಿಯಲ್ಲಿ ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಸಕ್ಕರೆಯ ಬೆಲೆಗಳಿಗೆ ಬೆಂಬಲ ನೀಡಬಹುದು.
ಸಕ್ಕರೆ ಬೆಲೆ ಬಗ್ಗೆ ಆತಂಕವೇಕೆ?
ಸರ್ಕಾರವು ಆಮದು ಮಾಡಿಕೊಳ್ಳುವಷ್ಟು ಸಕ್ಕರೆಯ ಬೆಲೆಯ ಬಗ್ಗೆ ಭಯ ಬೀಳಲು ಕಾರಣವೇನು? ಪ್ರಸ್ತುತ ಏರಿಕೆ ರಾತ್ರೋರಾತ್ರಿ ಸಂಭವಿಸಿಲ್ಲ. ಭಾರತದ ಚಿಲ್ಲರೆ ವ್ಯಾಪಾರದ ಸಕ್ಕರೆ ಬೆಲೆಗಳು 2023ರ ಆರಂಭದಲ್ಲಿ ಪ್ರತಿ ಕೆಜಿಗೆ ಸುಮಾರು 40–45 ರೂ.ಗಳಿಂದ 2026 ಆಗಸ್ಟ್ ವೇಳೆಗೆ 50 ರೂ.ಗಳಿಗಿಂತ ಹೆಚ್ಚಾಗಿದೆ. ಆದರೂ ಬೆಲೆಗಳು ರಾಜ್ಯ, ಗುಣಮಟ್ಟ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತವೆ.
ಇತ್ತೀಚೆಗಿನ ತಿಂಗಳುಗಳಲ್ಲಿ ಬೆಲೆಯಲ್ಲಿ ವೇಗವಾದ ಏರಿಕೆ ಕಂಡುಬಂದಿದೆ. 2025 ಆಗಸ್ಟ್ ಮಧ್ಯಭಾಗದ ವೇಳೆಗೆ ಸರಾಸರಿ ಕೇಜಿಗೆ 51.7–52.3 ರೂ.ಗೆ ತಲುಪಿತ್ತು. ಅಂದರೆ ಒಂದು ತಿಂಗಳಲ್ಲಿ ಶೇ 7–8 ರಷ್ಟು ಏರಿಕೆಯಾಗಿದೆ. 2025 ಆಗಸ್ಟ್ ಮಧ್ಯದಿಂದ ಈ ವರ್ಷದ ಆಗಸ್ಟ್ ಮಧ್ಯಭಾಗಕ್ಕಾಗುವಾಗ ಶೇ 12-13ರಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವ ಒತ್ತಡಕ್ಕೆ ಬಿದ್ದಿದೆ.
ಕೃಪೆ: indiatoday.in