ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹತ್ಯೆ ಪ್ರಕರಣ: CBI ನಿಂದ ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ
ಆಪ್ತ ಸಹಾಯಕ ಚಂದ್ರನಾಥ್ ರಥ್ | ಮುಖ್ಯಮಂತ್ರಿ ಸುವೇಂದು ಅಧಿಕಾರಿ - Photo Credit : ndtv
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಬಿಜೆಪಿ ಕಾರ್ಯಕರ್ತರಾದ ಇಬ್ಬರು ಸಹೋದರರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬಂಧಿತರನ್ನು ಸಾಗರ್ ಸೋಂಕರ್ ಮತ್ತು ಸಾಹಿಬ್ ಸೋಂಕರ್ ಎಂದು ಗುರುತಿಸಲಾಗಿದೆ. ಇಬ್ಬರೂ ಬಿಜೆಪಿ ಕಾರ್ಯಕರ್ತರಾಗಿದ್ದು, ಚಂದ್ರನಾಥ್ ರಥ್ ಅವರ ರಾಜಕೀಯ ಚಟುವಟಿಕೆಗಳಲ್ಲಿ ಸಹಕರಿಸುತ್ತಿದ್ದರು ಎಂದು ಸಿಬಿಐ ತಿಳಿಸಿದೆ.
ಹತ್ಯೆ ನಡೆಸಲು ಶೂಟರ್‌ಗಳನ್ನು ನೇಮಿಸುವುದು, ಅವರಿಗೆ ಅಗತ್ಯ ವ್ಯವಸ್ಥೆ ಹಾಗೂ ಲಾಜಿಸ್ಟಿಕ್ಸ್ ಒದಗಿಸುವುದು ಮತ್ತು ಹತ್ಯೆಯ ಸಂಚು ರೂಪಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಬೇರೆ ರಾಜಕೀಯ ಪಕ್ಷದ ನಾಯಕರ ಸೂಚನೆಯ ಮೇರೆಗೆ ಇಬ್ಬರೂ ಈ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಶಂಕೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ. ಆದರೆ ಆ ನಾಯಕ ಅಥವಾ ಪಕ್ಷದ ಹೆಸರನ್ನು ಸಿಬಿಐ ಬಹಿರಂಗಪಡಿಸಿಲ್ಲ.
ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದ 41 ವರ್ಷದ ಚಂದ್ರನಾಥ್ ರಥ್ ಅವರನ್ನು ಮೇ 6ರಂದು ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದ ವೇಳೆ, ಅವರ SUV ವಾಹನದೊಳಗೆ ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲೇ ಈ ಹತ್ಯೆ ನಡೆದಿದ್ದು, ರಾಜ್ಯದಲ್ಲಿ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸ್‌ನ ವಿಶೇಷ ತನಿಖಾ ತಂಡ (SIT) ನಡೆಸಿತ್ತು. ಬಳಿಕ ಪ್ರಕರಣದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಇಬ್ಬರನ್ನು ಮೊದಲು ವಿಚಾರಣೆಗಾಗಿ ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿದೆ. ಶುಕ್ರವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಏಳು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಂಗಾಳ ಬಿಜೆಪಿ ವಕ್ತಾರ ದೇಬ್ಜಿತ್ ಸರ್ಕಾರ್, "ಇದು ಅತ್ಯಂತ ದುರದೃಷ್ಟಕರ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ" ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ ಆರು ಶೂಟರ್‌ಗಳು, ಮೂವರು ಮಧ್ಯವರ್ತಿಗಳು ಹಾಗೂ ಇದೀಗ ಬಂಧಿತರಾದ ಇಬ್ಬರು ಸಹೋದರರು ಸೇರಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತ ಶೂಟರ್‌ಗಳು ಮೋನು ಸಿಂಗ್, ರಾಜ್ ಸಿಂಗ್, ಗೋಲು ಸಿಂಗ್, ಮಾಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ ಮತ್ತು ನವೀನ್ ಕುಮಾರ್ ಸಿಂಗ್. ಮಧ್ಯವರ್ತಿಗಳಾದ ವಿನಯ್ ರಾಯ್, ಸಂಜಯ್ ರಾಯ್ ಮತ್ತು ವಿಕಾಸ್ ಮಿಶ್ರಾ ಹತ್ಯೆಯ ಗುತ್ತಿಗೆಯನ್ನು ಪಡೆದಿದ್ದರು ಎಂದು ಸಿಬಿಐ ತಿಳಿಸಿದೆ.
ಪಿಟಿಐ ವರದಿ ಪ್ರಕಾರ, ಸಾಗರ್ ಸೋಂಕರ್ ಅವರ ದೂರವಾಣಿ ಕರೆಗಳ ವಿವರಗಳನ್ನು (Call Detail Records) ಪರಿಶೀಲಿಸಿದ ವೇಳೆ ಎದುರಾಳಿ ರಾಜಕೀಯ ಪಕ್ಷದ ಸ್ಥಳೀಯ ಕಚೇರಿಯೊಂದಿಗೆ ಹಲವು ಬಾರಿ ಸಂಪರ್ಕ ಹೊಂದಿದ್ದ ಮಾಹಿತಿ ಲಭ್ಯವಾಗಿದೆ. ಅವರು ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಗುರುತಿಸಲು ಸಿಬಿಐ ಪ್ರಯತ್ನಿಸುತ್ತಿದೆ.
ಇದಲ್ಲದೆ, ಸಾಗರ್ ಸೋಂಕರ್ 2020ರಲ್ಲಿ ಬಿಜೆಪಿಗೆ ಸೇರುವ ಮೊದಲು ಎದುರಾಳಿ ಪಕ್ಷದ ಒಬ್ಬ ಶಾಸಕರ ರಾಜಕೀಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಬಿಐ ತನಿಖೆಯ ಪ್ರಕಾರ, 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಕೋಲ್ಕತ್ತಾದ ಭಬಾನಿಪುರ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿಯ ಚುನಾವಣಾ ಪ್ರಚಾರದ ಪ್ರಮುಖ ಸಂಘಟಕರಾಗಿದ್ದ ಚಂದ್ರನಾಥ್ ರಥ್ ಅವರನ್ನು ಹತ್ಯೆ ಮಾಡುವ ಸಂಚು 2025ರ ಡಿಸೆಂಬರ್ ನಲ್ಲೇ ರೂಪುಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದ ಆ ಯೋಜನೆಯನ್ನು ಹಲವು ಬಾರಿ ಮುಂದೂಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.