ನಿಂದಿಸಿದವರನ್ನು ಕ್ಷಮಿಸಲು ಬಯಸುತ್ತೇನೆ; ವಿದ್ಯಾರ್ಥಿಗಳಿಗೆ ಶಿಕ್ಷೆಯಲ್ಲ, ಮಾರ್ಗದರ್ಶನ ನೀಡಿ: ಪ್ರಧಾನಿ ಮೋದಿ

Update: 2026-07-31 23:37 IST

Photo : X@narendramodi

ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್‌ ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ತಾವು ಕ್ಷಮಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಿಕ್ಷೆ ವಿಧಿಸುವ ಬದಲು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಸಮಾಜಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸಂದೇಶ ಬಿಡುಗಡೆ ಮಾಡಿದ ಮೋದಿ, ಜಂತರ್ ಮಂತರ್‌ನಲ್ಲಿ ನಡೆದ ಘಟನೆ ತಮ್ಮನ್ನು ತೀವ್ರವಾಗಿ ನೋಯಿಸಿದೆ ಎಂದು ಹೇಳಿದರು.

"ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ದೇಶವೇ ನೋಡಿದೆ. ದೇಶದ ವಿವಿಧ ಭಾಗಗಳಿಂದ ಬಂದ ಕೆಲ ವಿದ್ಯಾರ್ಥಿಗಳು ಅತ್ಯಂತ ನಿಂದನೀಯ ಭಾಷೆಯನ್ನು ಬಳಸಿದರು. ಅವರು ನನ್ನನ್ನು ನಿಂದಿಸಿದರು. ನನ್ನ ದಿವಂಗತ ತಾಯಿಯ ವಿರುದ್ಧವೂ ನಿಂದನೀಯ ಪದಗಳನ್ನು ಬಳಸಿದರು. ಇದು ನನಗೆ ತೀವ್ರ ನೋವುಂಟು ಮಾಡಿತು," ಎಂದು ಹೇಳಿದರು.

ಆದರೂ, ಇಂತಹ ಘಟನೆಗಳಿಗೆ ಶಿಕ್ಷೆ ಅಥವಾ ದೀರ್ಘಕಾಲದ ಕಾನೂನು ಕ್ರಮ ಪರಿಹಾರವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

"ಮಕ್ಕಳು ತಪ್ಪುಗಳನ್ನು ಮಾಡುತ್ತಾರೆ. ಬಾಲ್ಯ ಮತ್ತು ಯೌವನವೆಂದರೆ ಆ ತಪ್ಪುಗಳನ್ನು ತಿದ್ದಿಕೊಳ್ಳುವ ಕಾಲ. ಅವರಿಗೆ ತಮ್ಮ ತಪ್ಪುಗಳಿಂದ ಕಲಿಯಲು ಅವಕಾಶ ನೀಡಬೇಕು," ಎಂದು ಹೇಳಿದರು.

ತಮ್ಮನ್ನು ನಿಂದಿಸಿದವರನ್ನು ಕ್ಷಮಿಸುವ ನಿರ್ಧಾರವನ್ನು ಸಮಾಜವೂ ಒಪ್ಪಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

"ನನ್ನನ್ನು ನಿಂದಿಸಿದವರನ್ನು ನಾನು ಕ್ಷಮಿಸಲು ಬಯಸುತ್ತೇನೆ. ನನ್ನ ಈ ನಿರ್ಧಾರವನ್ನು ಸಮಾಜವೂ ಒಪ್ಪಿಕೊಳ್ಳಬೇಕು ಎಂದು ವಿನಂತಿಸುತ್ತೇನೆ," ಎಂದರು.

ತಮ್ಮ ನಿಲುವನ್ನು ವಿವರಿಸಲು ರೂಪಕವೊಂದನ್ನು ಬಳಸಿದ ಅವರು, "ಕೆಲವೊಮ್ಮೆ ನಮ್ಮ ಹಲ್ಲಿನಿಂದ ನಮ್ಮ ನಾಲಿಗೆಗೆ ಗಾಯವಾಗಿ ರಕ್ತ ಬರುತ್ತದೆ. ಆದರೆ ಅದಕ್ಕಾಗಿ ನಾವು ನಮ್ಮ ಹಲ್ಲುಗಳನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮದೇ. ಅದೇ ರೀತಿ, ದಾರಿ ತಪ್ಪಿದವರನ್ನು ದೂರ ತಳ್ಳುವ ಬದಲು ಅವರನ್ನು ಸರಿದಾರಿಗೆ ತರಬೇಕು," ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಬಹಿಷ್ಕರಿಸುವುದು, ನ್ಯಾಯಾಲಯಗಳಿಗೆ ಅಲೆದಾಡಿಸುವುದು ಅಥವಾ ಸಾಮಾಜಿಕ ಕಿರುಕುಳಕ್ಕೆ ಒಳಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದೂ ಅವರು ಹೇಳಿದರು.

"ಅವರು ದಾರಿ ತಪ್ಪಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯಗಳ ಮೂಲಕ ಎಳೆದುಕೊಂಡು ಹೋಗುವುದು ಅಥವಾ ಸಾಮಾಜಿಕ ಕಿರುಕುಳಕ್ಕೆ ಒಳಪಡಿಸುವುದರಿಂದ ಏನೂ ಬದಲಾಗುವುದಿಲ್ಲ," ಎಂದು ಹೇಳಿದರು.

ಈ ನಡುವೆ, ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಯ ವೇಳೆ ಪ್ರಧಾನಿ ವಿರುದ್ಧ ನಿಂದನೀಯ ಹೇಳಿಕೆಗಳನ್ನು ನೀಡಿದ ಆರೋಪದಡಿ ನೋಯ್ಡಾದ ಮಹಿಳೆಯೊಬ್ಬರ ವಿರುದ್ಧ ಝೀರೋ ಎಫ್‌ಐಆರ್ ದಾಖಲಾಗಿದೆ.

ಗಾಝಿಯಾಬಾದ್ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ, ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ಪ್ರಚೋದಿಸುವ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಪ್ರಧಾನಿ ವಿರುದ್ಧ "ನಿಂದನೀಯ ಮತ್ತು ಆಕ್ಷೇಪಾರ್ಹ" ಭಾಷೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 353(1) (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಹಾಗೂ 356(1) (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಗಾಗಿ ಪ್ರಕರಣವನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ವಿದ್ಯಾರ್ಥಿಗಳನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.

"ಬನ್ನಿ, ದೇಶಕ್ಕಾಗಿ ನಾವು ಎಲ್ಲರೂ ಒಟ್ಟಾಗಿ ಮುಂದೆ ಸಾಗೋಣ. ನಮ್ಮ ತಪ್ಪುಗಳಿಂದ ಪಾಠ ಕಲಿಯೋಣ. ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳೋಣ. ಭಾರತ ವೇಗವಾಗಿ ಪ್ರಗತಿ ಹೊಂದುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಪ್ರಗತಿ ಸಾಧಿಸಬೇಕು ಎಂಬುದು ನನ್ನ ಆಶಯ," ಎಂದು ಹೇಳಿದರು.

"ನಿಂದನೆಗಳು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ದಾರಿ ತಪ್ಪಿದವರಿಗೆ ಮಾರ್ಗದರ್ಶನ ನೀಡೋಣ. ಒಟ್ಟಾಗಿ ಕೆಲಸ ಮಾಡೋಣ. ಭಾರತಕ್ಕಾಗಿ ಕೆಲಸ ಮಾಡೋಣ," ಎಂಬ ಸಂದೇಶವನ್ನು ತಮ್ಮ  ವೀಡಿಯೊದಲ್ಲಿ ಅವರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News