ಸಾಂದರ್ಭಿಕ ಚಿತ್ರ (Photo: PTI)

ಬೆಂಗಳೂರು: ಹೆಸರಿನಲ್ಲಿ ವ್ಯತ್ಯಾಸದ ಕಾರಣಕ್ಕೆ ನೆವಾರ್ಕ್‌ನಿಂದ ದಿಲ್ಲಿಗೆ ಮರಳುವ ವಿಮಾನವನ್ನೇರಲು ಅವಕಾಶ ನಿರಾಕರಿಸಿದ ಕಾರಣ ಪ್ರಯಾಣಿಕರೋರ್ವರಿಗೆ 78,920ರೂ. ಪಾವತಿಸುವಂತೆ ಟ್ರಾವೆಲ್ ಸಂಸ್ಥೆ ಮತ್ತು ಏರ್‌ಲೈನ್‌ಗೆ ಬೆಂಗಳೂರಿನ ಗ್ರಾಹಕ ಆಯೋಗ ನಿರ್ದೇಶನ ನೀಡಿದೆ.

ಗ್ರಾಹಕ ಆಯೋಗದ ಪ್ರಭಾರ ಅಧ್ಯಕ್ಷೆ ವಿ. ಅನುರಾಧಾ ಹಾಗೂ ಸದಸ್ಯರಾದ ಎಚ್. ಜನಾರ್ದನ್ ಮತ್ತು ಶರವತಿ ಎಸ್.ಎಂ. ಅವರನ್ನೊಳಗೊಂಡ ಪೀಠವು, ಪ್ರಯಾಣಿಕರಿಗೆ ಮರುಪಾವತಿ ನೀಡದೆ ಹಣವನ್ನು ತಡೆಹಿಡಿದಿರುವುದು ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯವಹಾರ ಪದ್ಧತಿಗೆ ಸಮಾನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಆದೇಶದಲ್ಲಿ, ಅದೇ ಟಿಕೆಟ್, ಅದೇ PNR ಮತ್ತು ಅದೇ ಪ್ರಯಾಣಿಕ 8/6/2024ರಂದು ದಿಲ್ಲಿಯಿಂದ ಅಮೆರಿಕಕ್ಕೆ ಪ್ರಯಾಣಿಸಲು ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ವಾಪಸ್ ಪ್ರಯಾಣದ ವೇಳೆ ವಿಮಾನಯಾನ ಸಂಸ್ಥೆಯ ಕೌಂಟರ್‌ನಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.

"ತಮ್ಮ ತಂದೆ-ತಾಯಿಗಾಗಿ ದಿಲ್ಲಿ–ನೆವಾರ್ಕ್ ನಡುವೆ ಪ್ರಯಾಣ ಟಿಕೆಟ್‌ ಬುಕ್‌ ಮಾಡಿದ್ದರು. ತಂದೆ ಹಿರಿಯ ನಾಗರಿಕರಾಗಿದ್ದು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಹಾಗೂ ವೀಲ್‌ ಚೇರ್‌ ಅವಲಂಬಿತರಾಗಿದ್ದರು. ವಾಪಸ್ ಪ್ರಯಾಣದ ವೇಳೆ ನೆವಾರ್ಕ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಬೋರ್ಡಿಂಗ್ ನಿರಾಕರಿಸಲಾಯಿತು. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಅವರ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ಕಾರಣ ನೀಡಿದ್ದರು. ಬಳಿಕ, ಅನಿವಾರ್ಯವಾಗಿ ವಿಮಾನಯಾನ ಸಂಸ್ಥೆಯ ಕೌಂಟರ್‌ನಲ್ಲೇ 71,241 ಪಾವತಿಸಿ ಮತ್ತೊಂದು ಟಿಕೆಟ್ ಖರೀದಿಸಬೇಕಾಯಿತು" ಎಂದು ದೂರುದಾರರು ಹೇಳಿದ್ದರು.

ಘಟನೆಯ ಬಳಿಕ, ದೂರುದಾರರು ಹೆಚ್ಚುವರಿಯಾಗಿ ಖರೀದಿಸಿದ ಟಿಕೆಟ್‌ನ ವೆಚ್ಚವನ್ನು ಮರುಪಾವತಿಸುವಂತೆ ಮನವಿ ಮಾಡಿದ್ದರು. ದೂರುದಾರರ ಪ್ರಕಾರ, ವಿಮಾನಯಾನ ಸಂಸ್ಥೆ ಮತ್ತು ಟ್ರಾವೆಲ್ ಕಂಪೆನಿ ಎರಡು ಹಂತಗಳಲ್ಲಿ ಹಣ ಮರುಪಾವತಿಸಲು ಒಪ್ಪಿಕೊಂಡಿದ್ದವು. ಟಿಕೆಟ್ ದರಕ್ಕಾಗಿ 65,920 ಹಾಗೂ ದರ ವ್ಯತ್ಯಾಸದ ಮೊತ್ತವಾಗಿ 5,321 ಪಾವತಿಸುವುದಾಗಿ ತಿಳಿಸಿದ್ದವು. ಆದರೆ, ಹಲವು ಬಾರಿ ಸಂಪರ್ಕಿಸಿ ಮನವಿ ಮಾಡಿದರೂ ಮರುಪಾವತಿ ಹಣ ದೊರೆಯಲಿಲ್ಲ ಎಂದು ದೂರುದಾರರು ಆರೋಪಿಸಿದ್ದರು.

ಟ್ರಾವೆಲ್ ಕಂಪೆನಿಯು ಆರೋಪಗಳನ್ನು ನಿರಾಕರಿಸಿದ್ದು, ಕನ್ವೀನಿಯನ್ಸ್ ಶುಲ್ಕ ಕಡಿತಗೊಳಿಸಿದ ಬಳಿಕ 65,490 ಮರುಪಾವತಿಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು ಹಾಗೂ ಬ್ಯಾಂಕ್ ವರ್ಗಾವಣೆ ವಿಫಲವಾದ ಬಳಿಕ ಆ ಮೊತ್ತವನ್ನು ದೂರುದಾರರ 'ವ್ಯಾಲೆಟ್'ಗೆ ಜಮೆ ಮಾಡಲಾಗಿತ್ತು ಎಂದು ವಾದಿಸಿದೆ. ದೂರುದಾರರ ತಂದೆಗೆ ವಿಮಾನಯಾನ ಸಂಸ್ಥೆಯೇ ಬೋರ್ಡಿಂಗ್ ನಿರಾಕರಿಸಿದೆ ಎಂದು ಟ್ರಾವೆಲ್ ಕಂಪನಿ ವಾದಿಸಿದೆ. ವಿಮಾನ ಟಿಕೆಟ್‌ಗಳ ಬುಕ್ಕಿಂಗ್‌ಗೆ ಅನುಕೂಲ ಕಲ್ಪಿಸುವ ಮಧ್ಯವರ್ತಿಯಾಗಿ ತಾನು ಕಾರ್ಯನಿರ್ವಹಿಸುವುದರಿಂದ, ಈ ದೂರು ತನ್ನ ಕಂಪನಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದೆ.

ವಿಮಾನಯಾನ ಸಂಸ್ಥೆಯೂ ಆರೋಪಗಳನ್ನು ನಿರಾಕರಿಸಿದ್ದು, ಪ್ರಯಾಣಿಕರ ಹೆಸರಿನಲ್ಲಿ ಹೊಂದಾಣಿಕೆಯಿಲ್ಲದಿರುವ ಕುರಿತು ಎಚ್ಚರಿಕೆ ಹಿನ್ನೆಲೆಯಲ್ಲಿ ಬೋರ್ಡಿಂಗ್ ನಿರಾಕರಿಸಲಾಯಿತು ಎಂದು ಹೇಳಿದೆ.

ಆಯೋಗದ ಪ್ರಕಾರ, ದಾಖಲೆಗಳನ್ನು ಪರಿಶೀಲಿಸಿದಾಗ ಎರಡೂ ಪ್ರತಿವಾದಿ ಸಂಸ್ಥೆಗಳು ಮರುಪಾವತಿಗೆ ಒಪ್ಪಿಕೊಂಡಿದ್ದರೂ, ವಾಸ್ತವವಾಗಿ ಹಣವನ್ನು ಹಿಂದಿರುಗಿಸಿರಲಿಲ್ಲ ಎಂಬುದು ಕಂಡುಬಂದಿದೆ. ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ ಬಳಿಕವೂ ಹಣವನ್ನು ತಡೆಹಿಡಿದಿರುವುದು ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯವಹಾರ ಪದ್ಧತಿ ಎಂದು ಆಯೋಗ ಹೇಳಿದೆ.

ಆಯೋಗವು ದೂರನ್ನು ಭಾಗಶಃ ಪುರಸ್ಕರಿಸಿ, ಎರಡೂ ಪ್ರತಿವಾದಿ ಸಂಸ್ಥೆಗಳು 65,920 ಮರುಪಾವತಿ ಮಾಡುವಂತೆ ಆದೇಶಿಸಿದೆ. ಇದರ ಜೊತೆಗೆ 10,000ರೂ. ಪರಿಹಾರ ಹಾಗೂ 3,000 ವ್ಯಾಜ್ಯ ವೆಚ್ಚವೂ ಪಾವತಿಸುವಂತೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor