‘ಅಪಾರ ಧೈರ್ಯ ತೋರಿಸಿದರು’: ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚರ್ ರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
Photo: x.com/NDTVProfit
ಹೊಸದಿಲ್ಲಿ: ದುಬೈ–ಟೆಲ್ ಅವಿವ್ ಮಾರ್ಗದ ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ ಸಹಪೈಲಟ್‌ನೊಂದಿಗೆ ಹೋರಾಡಿ, ನೂರಾರು ಪ್ರಯಾಣಿಕರ ಜೀವ ಉಳಿಸಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಕ್ಯಾಪ್ಟನ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅತ್ಯಂತ ಗಂಭೀರ ಅಪಾಯ ಎದುರಿಸುತ್ತಿದ್ದರೂ, ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅಪಾರ ಧೈರ್ಯ ಮತ್ತು ಇತರರ ಜೀವಗಳನ್ನು ರಕ್ಷಿಸುವ ಅಚಲ ಸಂಕಲ್ಪ ತೋರಿಸಿದ್ದಾರೆ. ಅವರ ಶೌರ್ಯವು ನೂರಾರು ಜೀವಗಳನ್ನು ಉಳಿಸಲು ಹಾಗೂ ದೊಡ್ಡ ದುರಂತವನ್ನು ತಪ್ಪಿಸಲು ನೆರವಾಗಿದೆ. ಕ್ಯಾಪ್ಟನ್ ಮಚ್ಚರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ’ ಎಂದು ಮೋದಿ Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಚ್ಚರ್ ಅವರು ಶೀಘ್ರ ಚೇತರಿಸಿಕೊಂಡು, ಉತ್ತಮ ಆರೋಗ್ಯ ಹೊಂದಲಿ ಎಂದು ಮೋದಿ ಹಾರೈಸಿದ್ದಾರೆ.
ಭಾರತೀಯ ಪ್ರಜೆಯಾಗಿರುವ ಮಚ್ಚರ್ ಅವರು ಎಮಿರಾತಿ ಸರಕಾರದ ಒಡೆತನದ ಕಡಿಮೆ ವೆಚ್ಚದ ವಿಮಾನಯಾನ ಕಂಪೆನಿ ಫ್ಲೈದುಬೈನಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು 10 ವರ್ಷಗಳ ಕಾಲ ಸ್ಪೈಸ್‌ಜೆಟ್‌ನಲ್ಲಿ ಕೆಲಸ ಮಾಡಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬೋಯಿಂಗ್ 737 ವಿಮಾನಗಳ ವಿಭಾಗದಲ್ಲಿ ಅವರಿಗೆ 13 ವರ್ಷಗಳಿಗೂ ಹೆಚ್ಚು ವಾಣಿಜ್ಯ ಹಾರಾಟದ ಅನುಭವವಿದೆ. ಲೈನ್ ತರಬೇತಿ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿರುವ ಅವರು 9,750ಕ್ಕೂ ಹೆಚ್ಚು ಹಾರಾಟದ ಗಂಟೆಗಳ ಅನುಭವ ಹೊಂದಿದ್ದಾರೆ.
ಬುಧವಾರ ಬೆಳಿಗ್ಗೆ, 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತಿದ್ದ ಫ್ಲೈದುಬೈ ವಿಮಾನದ ಸಹಪೈಲಟ್ ವಿಮಾನವನ್ನು ಧ್ವಂಸಗೊಳಿಸಲು ಯತ್ನಿಸಿದರು. ಅದನ್ನು ತಡೆಯಲು ಮಚ್ಚರ್ ಪ್ರಯತ್ನಿಸಿದಾಗ ಸಹಪೈಲಟ್ ಅವರಿಗೆ ಚಾಕುವಿನಿಂದ ಇರಿದಿದ್ದಾರೆ.
ಸುಮಾರು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ಬೋಯಿಂಗ್ 737 ವಿಮಾನವು 10.51ರ ಸುಮಾರಿಗೆ (IST) ಏಕಾಏಕಿ ಕೆಳಮುಖವಾಗಿ ಇಳಿಯಲು ಆರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ ನಿಮಿಷಕ್ಕೆ ಸುಮಾರು 23,000 ಅಡಿ ವೇಗದಲ್ಲಿ ಇಳಿದ ವಿಮಾನವು ಸುಮಾರು 15,600 ಅಡಿ ಎತ್ತರಕ್ಕೆ ತಲುಪಿತು.
ಸಹಪೈಲಟ್ ಮಚ್ಚರ್ ಅವರಿಗೆ ಇರಿದ ಕೆಲವೇ ಸೆಕೆಂಡುಗಳ ಬಳಿಕ ಪ್ರಯಾಣಿಕರು ಆತನನ್ನು ಹಿಡಿದು ನಿಯಂತ್ರಣಕ್ಕೆ ತಂದರು.