Photo: x.com/ndtv

ಚೆನ್ನೈ: ರವಿವಾರ ದೀಪಾವಳಿಯಂದು ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 300ರ ಗಡಿ ದಾಟಿದ್ದು, 'ಅತ್ಯಂತ ಕಳಪೆ' ಮಟ್ಟಕ್ಕೆ ತಲುಪಿದೆ. ಪ್ರಮುಖ ಜನವಸತಿ ಪ್ರದೇಶವಾದ ವಲಸರವಕ್ಕಂನಲ್ಲಿ ಅತಿಹೆಚ್ಚು ಅಂದರೆ 343 AQI ದಾಖಲಾಗಿದೆ. ನಂತರದಲ್ಲಿ ನುಂಗಂಬಕ್ಕಂ (332), ಸೌಕಾರ್‌ಪೇಟೆ (311) ಹಾಗೂ ಟಿ.ನಗರ (306) ಇದೆ. ಈ ಪ್ರಮಾಣವು ಸ್ವಚ್ಛ ಗಾಳಿಯ ಗರಿಷ್ಠ ಮಿತಿಗಿಂತ ಸುಮಾರು 7 ಪಟ್ಟು ಹೆಚ್ಚಾಗಿದೆ.

ತಮಿಳುನಾಡು ರಾಜ್ಯಾದ್ಯಂತ ವಾಯು ಗುಣಮಟ್ಟ ಸೂಚ್ಯಂಕವು ಏರಿಕೆಯಾಗಿದೆ. ಈ ವರ್ಷ 168.97 AQIಗೆ ತಲುಪಿದೆ. 2024ರಲ್ಲಿ 143.46 ಮತ್ತು 2025ರಲ್ಲಿ 161.69 ಇತ್ತು.

ಕಾಂಚೀಪುರಂ (250), ತಿರುಚಿ (240), ತಿರುಪ್ಪೂರ್ (223) ಮತ್ತು ತಂಜಾವೂರು (210) ನಗರಗಳಲ್ಲೂ ವಾಯು ಗುಣಮಟ್ಟವು ಹದಗೆಟ್ಟಿದೆ. ನಾಗಪಟ್ಟಣಂನಲ್ಲಿ ತೃಪ್ತಿದಾಯಕ ಮಟ್ಟದಲ್ಲಿದೆ.

ವಾಯು ಮಾಲಿನ್ಯ ಮಾತ್ರವಲ್ಲದೆ, ಶಬ್ದ ಮಾಲಿನ್ಯವು ಆತಂಕಕಾರಿಯಾಗಿ ಏರಿಕೆಯಾಗಿದೆ. 2025ರಲ್ಲಿ 75.70 ಇದ್ದ ಸರಾಸರಿ ಶಬ್ದ ಮಟ್ಟವು 76.73 dB(A)ಗೆ ತಲುಪಿದೆ. 

ಪಟಾಕಿ ಸಿಡಿಸಲು ರಾಜ್ಯ ಸರ್ಕಾರವು ನಿರ್ದಿಷ್ಟ ಸಮಯ ನಿಗದಿಪಡಿಸಿತ್ತು. ಬೆಳಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿತ್ತು. ಆದರೂ ನಿಯಮಗಳನ್ನು ಗಾಳಿಗೆ ತೂರಿ, ದಿನವಿಡೀ ಪಟಾಕಿಗಳನ್ನು ಸಿಡಿಸಲಾಗಿದೆ.

ದೀಪಾವಳಿಯ ಮುನ್ನಾದಿನ ಬಿಜೆಪಿ ಮಾಜಿ ನಾಯಕ ಹಾಗೂ 'ವೀ ದಿ ಲೀಡರ್ಸ್' ಸಂಸ್ಥಾಪಕ ಕೆ.ಅಣ್ಣಾಮಲೈ, ಪಟಾಕಿ ಉದ್ಯಮವು ಶಿವಕಾಶಿಯಲ್ಲಿ3 ಲಕ್ಷ ಜನರಿಗೆ ನೇರ ಹಾಗೂ 5 ಲಕ್ಷ ಕಾರ್ಮಿಕರಿಗೆ ಪರೋಕ್ಷ ಉದ್ಯೋಗ ನೀಡಿದೆ. ಜನರು ಪಟಾಕಿಗಳನ್ನು ಖರೀದಿಸಿ, ಸಿಡಿಸುವಂತೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor