ವಿ.ಡಿ.ಸತೀಶನ್ (Photo: PTI)

ಕೊಲ್ಲಂ: ಹಿರಿಯ ನಾಗರಿಕರ ಕಾಳಜಿ ಮತ್ತು ರಕ್ಷಣೆಗಾಗಿ ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಹೊಸ ಮಸೂದೆಯಡಿ ಪೋಷಕರ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಬಳಿಕ ಅವರನ್ನು ನಿರ್ಲಕ್ಷಿಸುವ ಅಥವಾ ಹಿಂಸಿಸುವ ಮಕ್ಕಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯ ಪಟ್ಟಣಪುರಂನ ಗಾಂಧಿ ಭವನದಲ್ಲಿ ವೃದ್ಧ ಪುರುಷರಿಗಾಗಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ವಸತಿ ಸೌಲಭ್ಯವನ್ನು (ಪಿತೃಮಂದಿರಂ) ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಗಳು ಅಕ್ಟೋಬರ್‌ನಲ್ಲಿ ಅಂಗೀಕರಿಸಲಾದ ಮಸೂದೆಯಲ್ಲಿನ ಈ ಪ್ರಮುಖ ನಿಬಂಧನೆಯನ್ನು ವಿವರಿಸಿದರು.

ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ ಮೊದಲ ನಿರ್ಧಾರವೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿತ್ತು ಎಂದು ತಿಳಿಸಿದ ಅವರು, ‘ಹಿರಿಯ ನಾಗರಿಕರಿಗೆ ಹಲವಾರು ಹಕ್ಕುಗಳನ್ನು ನೀಡುವ, ವಿಶ್ವದಲ್ಲೇ ಎಲ್ಲೂ ಕಾಣಸಿಗದ ವಿಶೇಷ ಶಾಸನವನ್ನು ನಮ್ಮ ಸರಕಾರವು ಅಂಗೀಕರಿಸಿದೆ. ನೀವ್ಯಾರೂ ಆತಂಕಪಡುವ ಅಗತ್ಯವಿಲ್ಲ. ಪೋಷಕರ ಎಲ್ಲ ಆಸ್ತಿಯನ್ನು ಪಡೆದ ನಂತರ ಅವರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ನಿಯಮವನ್ನು ನಾನು ಉದ್ದೇಶಪೂರ್ವಕವಾಗಿಯೇ ಈ ಕಾಯ್ದೆಯಲ್ಲಿ ಸೇರಿಸಿದ್ದೇನೆ’ ಎಂದು ಹೇಳಿದರು.

ರಾಜ್ಯಪಾಲರ ಅಂಕಿತ ದೊರೆತ ನಂತರ ಈ ಮಸೂದೆಯು ಕಾನೂನಾಗಿ ಜಾರಿಗೆ ಬರಲಿದ್ದು, ಆ ಬಳಿಕ ಪೋಷಕರ ಆಸ್ತಿ ಕಬಳಿಸಿ ಅವರನ್ನು ಬೀದಿಗೆ ತಳ್ಳುವವರನ್ನು ಖಂಡಿತವಾಗಿಯೂ ಜೈಲಿಗೆ ಕಳುಹಿಸಲಾಗುವುದು. ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ದೃಢವಾಗಿ ಹೇಳಿದರು.

ಮಕ್ಕಳನ್ನು ಬೆಳೆಸಲು ಪೋಷಕರು ತಮ್ಮ ಜೀವನದುದ್ದಕ್ಕೂ ಎಷ್ಟು ಕಷ್ಟಪಡುತ್ತಾರೆ ಎನ್ನುವುದನ್ನು ರಾಜ್ಯ ಮತ್ತು ಅದರ ಮುಂದಿನ ಪೀಳಿಗೆಗಳು ಅರಿತುಕೊಳ್ಳಬೇಕು. ತಾಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಪಾರ ನೋವು ಮತ್ತು ಕಷ್ಟಗಳನ್ನು ಅನುಭವಿಸುವುದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದ ಅವರು, ‘ಮಕ್ಕಳು ದೊಡ್ಡ ವ್ಯಕ್ತಿಗಳಾದ ಮೇಲೆ ತಮ್ಮ ಪೋಷಕರನ್ನೇ ನಿರ್ಲಕ್ಷಿಸುತ್ತಾರೆ. ಇಂತಹ ಬೆಳವಣಿಗೆ ನಡೆಯಬಾರದು ಮತ್ತು ಅಂತಹ ಸಂಸ್ಕೃತಿ ಕೇರಳದಲ್ಲಿ ಇರಬಾರದು. ಪೋಷಕರನ್ನು ನಮ್ಮ ಹತ್ತಿರವೇ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುವ ಹೊಸ ಸಂಸ್ಕೃತಿ ನಮಗೆ ಬೇಕಾಗಿದೆ. ಕೇರಳದಲ್ಲಿ ಯಾವೊಬ್ಬ ಹಿರಿಯ ನಾಗರಿಕರೂ ಏಕಾಂಗಿಯಾಗಬಾರದು ಎಂಬುದೇ ನನ್ನ ಅತಿದೊಡ್ಡ ಕನಸಾಗಿದೆ ’ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಂದಕುಮಾರ್ , ವಾರ್ತಾಭಾರತಿ

contributor