Odisha | ಚರ್ಚ್ ನಲ್ಲಿ ದಾಂಧಲೆ ನಡೆಸಿದವರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಬುಲ್ಡೋಜರ್ ಮೂಲಕ ಚರ್ಚ್ ನೆಲಸಮ!
Photo: Maktoob
ಭುವನೇಶ್ವರ: ಚರ್ಚ್‌ಗೆ ನುಗ್ಗಿ ಧ್ವಂಸಗೊಳಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯ ಕುಟುಂಬಕ್ಕೆ ಮರುದಿನವೇ ಮತ್ತೊಂದು ಆಘಾತ ಎದುರಾಗಿದೆ. ದೂರು ನೀಡಿದ ಒಂದೇ ದಿನದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲೇ ಅದೇ ಚರ್ಚ್ ಅನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ. ಈ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ಪಟ್ರಗುಡಾ ಗ್ರಾಮದಲ್ಲಿ ನಡೆದಿದೆ ಎಂದು indianexpress.com ವರದಿ ಮಾಡಿದೆ.
ನವೆಂಬರ್ 21ರಂದು ಗ್ರಾಮದ ನಿವಾಸಿ ದುರ್ಜನ್ ಹರಿಜನ್ ಎಂಬವರು ತಮ್ಮ ಮನೆಯ ಸಮೀಪ ನಿರ್ಮಿಸಿದ್ದ ಚರ್ಚ್‌ಗೆ ಕೆಲವು ಯುವಕರು ನುಗ್ಗಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪೊಲೀಸರು ಗ್ರಾಮದ ಏಳು ಮಂದಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಆದರೆ, ಮರುದಿನವೇ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಚರ್ಚ್ ಅನ್ನು ಕೆಡವಲಾಗಿದೆ.
ಸುಮಾರು 900 ಜನಸಂಖ್ಯೆಯಿರುವ ಪಟ್ರಗುಡಾ ಗ್ರಾಮದಲ್ಲಿ ದುರ್ಜನ್ ಹರಿಜನ್ ಅವರ ಕುಟುಂಬವೇ ಏಕೈಕ ಕ್ರೈಸ್ತ ಕುಟುಂಬವಾಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಅವರು, ಮೂರು ವರ್ಷಗಳ ಹಿಂದೆ ತಮ್ಮ ಮನೆಯ ಪಕ್ಕದಲ್ಲಿ ಪೆಂಟೆಕೋಸ್ಟಲ್ ಬೀರ್‌ಶೆಬಾ ಚರ್ಚ್ ಮತ್ತು ಪ್ರಾರ್ಥನಾ ಮಂದಿರ ನಿರ್ಮಿಸಿದ್ದರು. ಕುಟುಂಬದ ಏಳು ಮಂದಿ ಪ್ರತಿ ರವಿವಾರ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಗ್ರಾಮದ ಕೆಲವರು ಚರ್ಚ್‌ಗೆ ಭೇಟಿ ನೀಡಲು ಆರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಕೆಲವು ಸ್ಥಳೀಯರು, ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಕುಟುಂಬದ ವಿರುದ್ಧ ಆರೋಪಿಸಿ, ದುರ್ಜನ್ ಮತ್ತು ಅವರ ಕುಟುಂಬದವರನ್ನು ನಿಂದಿಸಿ ಚರ್ಚ್‌ಗೆ ನುಗ್ಗಿ ಧ್ವಂಸಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ.
ಚರ್ಚ್ ಧ್ವಂಸಗೊಳಿಸಿದ ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದರು. ಚರ್ಚ್ ಸರ್ಕಾರಿ ಜಮೀನಿನಲ್ಲಿ ಅಗತ್ಯ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಚರ್ಚ್ ನಿರ್ಮಿಸಿದ ವ್ಯಕ್ತಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ನೋಟಿಸ್ ಬಂದ ಬಳಿಕ ದುರ್ಜನ್ ಅವರೇ ಸ್ವಯಂಪ್ರೇರಿತವಾಗಿ ಚರ್ಚ್ ಕೆಡವಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಚರ್ಚ್ ನಿರ್ಮಾಣವಾಗಿದ್ದ ಜಮೀನು ತಮ್ಮ ತಂದೆಗೆ ಸೇರಿದ್ದು ಎಂದು ದುರ್ಜನ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಚರ್ಚ್ ಕೆಡವಲು ತಾವೇ ಜೆಸಿಬಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಚರ್ಚ್ ಧ್ವಂಸ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದರೂ ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಪೊಲೀಸರು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಚರ್ಚ್ ನೆಲಸಮಗೊಳಿಸಿರುವ ಕ್ರಮದ ವಿರುದ್ಧ ಕಾನೂನು ಸಲಹೆ ಪಡೆದು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ದುರ್ಜನ್ ಹರಿಜನ್ ಹೇಳಿದ್ದಾರೆ.