ʼಸಂಪ್ರದಾಯಕ್ಕೆ ಆದ್ಯತೆ ನೀಡಲಾಗಿದೆʼ: ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ ಮಂಟಪದಲ್ಲಿ ದೀಪ ಬೆಳಗಿಸಿದ್ದನ್ನು ಸಮರ್ಥಿಸಿಕೊಂಡ ತಿರುಪ್ಪರಂಕುಂದ್ರಂ ದೇವಸ್ಥಾನ
Photo: PTI
ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ದೇವಸ್ಥಾನದ ಟ್ರಸ್ಟಿಗಳ ಮಂಡಳಿ, ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿ ʼಕಲ್ಲಿನ ಕಂಬʼದ ಮೇಲೆ ದೀಪವನ್ನು ಬೆಳಗಿಸುವ ಬದಲು ಮಂಗಳವಾರ ಬೆಟ್ಟದ ಮೇಲಿರುವ 'ದೀಪ ಮಂಟಪ'ದಲ್ಲಿ ದೀಪ ಬೆಳಗಿಸಿದ್ದು, ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದೆ.
ಮಂಗಳವಾರ ಸಂಜೆ 6 ಗಂಟೆಗೆ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಉಚ್ಚಿಪಿಲ್ಲಯಾರ್ ದೀಪ ಮಂಟಪದ ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಿಸಲಾಗಿದೆ. ಸಾಂಪ್ರದಾಯಿಕ ಪೂಜಾ ಪದ್ಧತಿಗಳನ್ನು ಮುಂದುವರಿಸುವ ಉದ್ದೇಶದಿಂದ ಸರ್ವಾನುಮತದಿಂದ ಅಂಗೀಕರಿಸಲಾದ ನಿರ್ಣಯದ ಅನುಸಾರ ಈ ಆಚರಣೆ ನಡೆಸಲಾಗಿದೆ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ವಿ. ಷಣ್ಮುಗಸುಂದರಂ, ದೇವಸ್ಥಾನದ ಧಾರ್ಮಿಕ ಆಚರಣೆಗಳ ಮೂಲಾಧಾರವಾಗಿರುವ 'ಆಗಮ' ನಿಯಮಗಳ ಪ್ರಕಾರ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಈ ನಿಯಮಗಳನ್ನು ಪಾಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಹಬ್ಬಗಳು ಮತ್ತು ಪ್ರಾರ್ಥನೆಗಳು ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವುದನ್ನು ಮಂಡಳಿಯು ಉಲ್ಲೇಖಿಸಿದೆ. ಕಾರ್ತಿಕೈ ದೀಪಂ ಉತ್ಸವವನ್ನು ಸಂಪ್ರದಾಯಗಳ ಪ್ರಕಾರವೇ ಆಚರಿಸಲಾಗಿದೆ ಎಂದು ತಿಳಿಸಿದೆ.
ಟ್ರಸ್ಟಿಗಳ ಮಂಡಳಿಯು, ಈ ಮೂಲಭೂತ ಸಂಪ್ರದಾಯಗಳನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ಔಪಚಾರಿಕವಾಗಿ ತರಬೇಕಾಗಿದೆ ಎಂದು ತಿಳಿಸಿದೆ. ಸಾಂಪ್ರದಾಯಿಕ ಸ್ಥಳದ ಮಹತ್ವದ ಕುರಿತು ವಿವರಿಸಿರುವ ಮಂಡಳಿಯು, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪವಿರುವ 'ದೀಪ ಮಂಟಪ'ದಲ್ಲಿಯೇ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಲಾಗುತ್ತದೆ ಎಂದು ಹೇಳಿದೆ.
ಬೆಟ್ಟದಲ್ಲಿರುವ ಸಿಕ್ಕಂದರ್ ಬಾದುಷಾ ದರ್ಗಾಕ್ಕೆ ಅತ್ಯಂತ ಸಮೀಪದಲ್ಲಿರುವ 'ದೀಪತ್ತೂನ್' (ಕಲ್ಲಿನ ಕಂಬ) ಮೇಲೆ ದೀಪ ಬೆಳಗಿಸುವ ಮೂಲಕ ಸಂಪ್ರದಾಯ ಬದಲಿಸಲು ತಮಿಳುನಾಡಿದನ ಟಿವಿಕೆ ಸರಕಾರ ನಿರಾಕರಿಸಿದೆ. ಸುಪ್ರೀಂ ಕೋರ್ಟ್ನ ಆದೇಶಗಳನ್ನು ಪಾಲಿಸುವಂತೆ ಮಂಗಳವಾರ ಸಂಜೆ ಮದ್ರಾಸ್ ಹೈಕೋರ್ಟ್ ಮದುರೈ ಪೀಠವು ಆಡಳಿತಕ್ಕೆ ಮತ್ತೊಮ್ಮೆ ಸೂಚನೆ ನೀಡಿದ್ದರೂ, ಸರಕಾರ ತನ್ನ ನಿರ್ಧಾರದಲ್ಲಿ ದೃಢವಾಗಿ ನಿಂತಿದೆ.