Tamil Nadu ವಿಧಾನಸಭೆ | DMK ವಿರುದ್ಧ ಸಿಎಂ ವಿಜಯ್ ವಾಗ್ದಾಳಿ, ಸ್ಟಾಲಿನ್ ಕೈಸನ್ನೆ ಅನುಕರಣೆ: ಪ್ರತಿಪಕ್ಷದಿಂದ ಸಭಾತ್ಯಾಗ
ಮುಖ್ಯಮಂತ್ರಿ ವಿಜಯ್ | Photo Credit : ANI
ಚೆನ್ನೈ, ಜೂ. 23: ತಮಿಳುನಾಡು ವಿಧಾನಸಭೆಯು ಮಂಗಳವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ವಿಜಯ್ ಅವರು ‘ಪಕ್ಷದ ನಿಧಿಗಳ’ ಕುರಿತು ಡಿಎಂಕೆ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಇದು ಪ್ರತಿಪಕ್ಷ ಶಾಸಕರ ಸಭಾತ್ಯಾಗಕ್ಕೆ ಕಾರಣವಾಯಿತು. ಇದೇ ವೇಳೆ, ವಿಜಯ್ ಅವರು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವೈರಲ್ ಕೈಸನ್ನೆಯನ್ನು ಅನುಕರಿಸಿದರು.
ರಾಜಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಸಂದರ್ಭದಲ್ಲಿ ಈ ಜಟಾಪಟಿ ನಡೆಯಿತು. ವಿಜಯ್ ಅವರ ಭಾಷಣಕ್ಕೆ ಪದೇಪದೇ ಅಡ್ಡಿಪಡಿಸಿದ ಡಿಎಂಕೆ ಶಾಸಕರು, ಆಡಳಿತಾರೂಢ ಟಿವಿಕೆ ವಿರುದ್ಧ ರಾಜಕೀಯ ಅವಕಾಶವಾದದ ಆರೋಪ ಮಾಡಿದರು. ಘೋಷಣೆಗಳ ನಡುವೆಯೇ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಹಾಗೂ ಆಡಳಿತ ಪಕ್ಷದ ಸದಸ್ಯರು, ಮುಖ್ಯಮಂತ್ರಿಯವರು ತಮ್ಮ ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಪ್ರತಿಪಕ್ಷವನ್ನು ವಿನಂತಿಸಿದರು.
‘ಡಿಎಂಕೆ ಪಕ್ಷದ ನಿಧಿಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದೆ. ನಾವು ಎಂದಿಗೂ ಸಾರ್ವಜನಿಕ ಹಣವನ್ನು ಲೂಟಿ ಮಾಡುವುದಿಲ್ಲ. ಬೆಳಕಿಗೆ ಬರುವ ಪ್ರತಿಯೊಂದು ಭ್ರಷ್ಟಾಚಾರ ಪ್ರಕರಣವನ್ನೂ ತನಿಖೆಗೆ ಒಳಪಡಿಸಲಾಗುವುದು. ಅದರಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ’ ಎಂದು ವಿಜಯ್ ಹೇಳಿದರು.
ಸೆಕ್ಯುಲರ್ ಪ್ರೊಗ್ರೆಸಿವ್ ಅಲಯನ್ಸ್‌ನ ಮಾಜಿ ಮಿತ್ರಪಕ್ಷಗಳನ್ನು ಆಡಳಿತ ಪಾಳಯಕ್ಕೆ ಸೆಳೆಯಲು ಟಿವಿಕೆ ಕುದುರೆ ವ್ಯಾಪಾರ ನಡೆಸಿದೆ ಎಂಬ ಡಿಎಂಕೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿಜಯ್, ಸಿಪಿಎಂ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡೂ ಸ್ವತಂತ್ರವಾಗಿ ತಮ್ಮ ನಿರ್ಧಾರಗಳನ್ನು ತೆಗೆದುಕೊಂಡಿವೆ ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆ ಕುರಿತು ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡ ವಿಜಯ್, ಅಪರಾಧ ಮತ್ತು ಮಾದಕ ದ್ರವ್ಯ ಹಾವಳಿ ಕುರಿತು ಪ್ರತಿಪಕ್ಷದ ಟೀಕೆ ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಪಾದಿಸಿದರು. ಮಹಿಳೆಯರ ರಕ್ಷಣೆ ಹಾಗೂ ಮಾದಕ ದ್ರವ್ಯ ಹಾವಳಿಗೆ ಕಡಿವಾಣ ಹಾಕಲು ಟಿವಿಕೆ ಬದ್ಧವಾಗಿದೆ ಎಂದ ಅವರು, ತಮ್ಮ ಪಕ್ಷ ಅಧಿಕಾರಕ್ಕೆ ಬರುವ ಮುನ್ನವೇ ಈ ಸಮಸ್ಯೆಗಳು ಅಸ್ತಿತ್ವದಲ್ಲಿದ್ದವು ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ವಿಜಯ್, ಸ್ಟಾಲಿನ್ ಅವರ ವೈರಲ್ ಕೈಸನ್ನೆಯನ್ನು ಅನುಕರಿಸುತ್ತಿರುವುದು ಕಂಡುಬಂದಿದ್ದು, ಇದು ಶಾಸಕರಿಂದ ಚಪ್ಪಾಳೆ ಗಿಟ್ಟಿಸಿತು. ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆಯ ಬಳಿಕ ಡಿಎಂಕೆಯ ಪ್ರಧಾನ ಕಚೇರಿಯಿಂದ ಹೊರಬರುವಾಗ ಸ್ಟಾಲಿನ್ ಕೈ ಎತ್ತಿ ಸನ್ನೆ ಮಾಡಿರುವ ವೀಡಿಯೊ ವೈರಲ್ ಆಗಿತ್ತು. ಆ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಎಲ್ಲವೂ ಇತ್ಯರ್ಥವಾಗಿದೆ ಎಂಬ ಸಂಕೇತವಾಗಿ ಅದನ್ನು ಅರ್ಥೈಸಲಾಗಿತ್ತು.