ಜೈರಾಮ್ ರಮೇಶ್ | Photo Credit: PTI

ಹೊಸದಿಲ್ಲಿ: ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದರೂ ಅಧಿಕೃತವಾಗಿ ಮುಕ್ತಾಯಗೊಳಿಸದಿರುವ 88 ದಿನಗಳ ದಾಖಲೆಯ ವಿಳಂಬವನ್ನು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳ ಅಂಗೀಕಾರಕ್ಕೆ ಅಗತ್ಯವಿರುವ 3ನೇ ಎರಡರಷ್ಟು ಬಹುಮತವನ್ನು ಸಂಗ್ರಹಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸಮಯಾವಕಾಶ ನೀಡುವ ಉದ್ದೇಶದಿಂದ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸೋಮವಾರ ಆರೋಪಿಸಿದ್ದಾರೆ.

‘ಕೌಲ್ ಮತ್ತು ಶಖ್ಧರ್’ ಎಂದೇ ಪ್ರಸಿದ್ಧವಾಗಿರುವ ಸಂಸತ್ ಕಾರ್ಯವಿಧಾನ ಕುರಿತು ಪುಸ್ತಕದ ಪುಟ 192ರ ಪ್ರಕಾರ ಲೋಕಸಭೆಯ ಮುಂದೂಡಿಕೆ ಮತ್ತು ಮುಕ್ತಾಯದ ನಡುವಿನ ಅಂತರವು ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ದಿನಗಳಾಗಿರುತ್ತದೆ ಎಂದು ರಮೇಶ್‌ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಕೇಂದ್ರ ಸಚಿವ ಕಿರಣ ರಿಜಿಜು ಅವರು 2008ರ ಮನ್ಸೂನ್ ಅಧಿವೇಶನವು 87 ದಿನಗಳವರೆಗೆ ಮುಕ್ತಾಯಗೊಂಡಿರಲಿಲ್ಲ ಎಂದು ಉಲ್ಲೇಖಿಸಿರುವುದನ್ನು ಅವರು ನೆನಪಿಸಿದ್ದಾರೆ.

ಈ ಹಿಂದೆ 2008ರಲ್ಲಿ ಎಲ್ಲ ಪಕ್ಷಗಳ ಒಮ್ಮತದ ಮೂಲಕ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಪ್ರಸ್ತುತ ದಾಖಲೆಯು, ಅಪಾಯಕಾರಿ ಮತ್ತು ವಿನಾಶಕಾರಿ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳನ್ನು ಅಂಗೀಕಾರ ಮಾಡಲು ಗೃಹಸಚಿವರಿಗೆ ಸಮಯಾವಕಾಶ ಕಲ್ಪಿಸುವ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

ಎಪ್ರಿಲ್ 17, 2026ರಂದು ಈ ಮಸೂದೆಗಳ ಅಂಗೀಕಾರಕ್ಕಾಗಿ ಸರಕಾರದ ಪ್ರಯತ್ನಗಳನ್ನು ವಿಫಲಗೊಳಿಸಿದ್ದ ವಿರೋಧ ಪಕ್ಷಗಳ ಒಗ್ಗಟ್ಟು, ಅಮಿತ್ ಶಾ ಅವರ ‘ಬುಲ್ಡೋಝರ್ ತಂತ್ರ’ಗಳನ್ನು ಎದುರಿಸಲು ಮತ್ತೊಮ್ಮೆ ಮುನ್ನಡೆಯಲಿದೆ ಎಂದು ರಮೇಶ್‌ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರಿಗೆ ಕಳೆದ ಆರು ತಿಂಗಳುಗಳಲ್ಲಿ ನಾಲ್ಕು ಸಲ ಪತ್ರಗಳನ್ನು ಬರೆದು ಕ್ಷೇತ್ರ ಪುನರ್‌ವಿಂಗಡಣೆ ಪ್ರಸ್ತಾವಗಳ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಕೋರಿದ್ದರೂ ಪ್ರಧಾನಿ ನಿರಾಕರಿಸುತ್ತಲೇ ಬಂದಿದ್ದಾರೆ ಎಂದು ರಮೇಶ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor