ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳಿಂದ ಅರ್ಹರೆಂದು ಪರಿಗಣಿಸಲ್ಪಟ್ಟಿದ್ದರೂ ಮತದಾರರ ಪಟ್ಟಿಗಳಿಂದ ತೆಗೆದುಹಾಕಲು ಬಯಸಿರುವ ಪ್ರತಿ 10 ಮತದಾರರಲ್ಲಿ 9 ಜನರು ಮುಸ್ಲಿಮರಾಗಿದ್ದಾರೆ ಎಂದು ಸುದ್ದಿ ಜಾಲತಾಣ ‘The Wire’ ತನ್ನ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿದೆ.

ಸಿವಿಕ್ ರೀಸರ್ಚ್ ಗ್ರೂಪ್ ಸಂಕಲಿಸಿರುವ ದತ್ತಾಂಶಗಳು ಎಸ್‌ಐಆರ್ ಸಂದರ್ಭದಲ್ಲಿ ನ್ಯಾಯಾಧೀಶರು ಅರ್ಹರೆಂದು ಪರಿಗಣಿಸಿದ್ದ ಮತದಾರರ ಸೇರ್ಪಡೆಯ ವಿರುದ್ಧ ಸಲ್ಲಿಸಲಾಗಿರುವ 16,08,175 ಮೇಲ್ಮನವಿಗಳನ್ನು ಒಳಗೊಂಡಿವೆ. ಇದರಲ್ಲಿ ಶೇ.89.5ರಷ್ಟು (14,39,797) ಹೆಸರುಗಳು ಮುಸ್ಲಿಂ ಸಮುದಾಯಕ್ಕೆ ಸೇರಿವೆ. ಇದು ಕೇವಲ ಮುಸ್ಲಿಂ ಬಾಹುಳ್ಯವಿರುವ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಹಿಂದೂ ಪ್ರಾಬಲ್ಯವಿರುವ ಮತ್ತು ಗಡಿಯಿಂದ ದೂರವಿರುವ ಜಿಲ್ಲೆಗಳಲ್ಲೂ ಮುಸ್ಲಿಂ ಹೆಸರಿನ ಮತದಾರರನ್ನೇ ಹೆಚ್ಚಾಗಿ ಗುರಿಯಾಗಿಸಲಾಗಿದೆ.

2011ರ ಜನಗಣತಿಯ ಪ್ರಕಾರ, ಮುಸ್ಲಿಮರು ರಾಜ್ಯದ ಜನಸಂಖ್ಯೆಯ ಶೇ.27ರಷ್ಟಿದ್ದು, ಒಟ್ಟು ಮತದಾರರಲ್ಲಿ ಶೇ.29ರಷ್ಟಿದ್ದಾರೆ. ಅಲ್ಪಸಂಖ್ಯಾತ ಜನಸಂಖ್ಯೆ ಕಡಿಮೆ ಇರುವ ಕ್ಷೇತ್ರಗಳಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ಉದಾಹರಣೆಗೆ, ಮುಸ್ಲಿಮರು ಶೇ. 6ರಷ್ಟು ಮಾತ್ರ ಇರುವ ಕ್ಷೇತ್ರಗಳಲ್ಲಿ ಮೇಲ್ಮನವಿ ಎದುರಿಸುತ್ತಿರುವವರಲ್ಲಿ ಶೇ.60ಕ್ಕೂ ಹೆಚ್ಚು ಜನ ಮುಸ್ಲಿಂ ಹೆಸರುಗಳನ್ನು ಹೊಂದಿದ್ದಾರೆ. ಇದು ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚಾಗಿದೆ. ರಾಜ್ಯದ 137 ಕ್ಷೇತ್ರಗಳಲ್ಲಿ ತೆಗೆದುಹಾಕಲು ಯತ್ನಿಸುತ್ತಿರುವವರ ಪೈಕಿ ಕನಿಷ್ಠ ಶೇ.90ರಷ್ಟು ಮುಸ್ಲಿಂ ಹೆಸರಿನ ಮತದಾರರಿದ್ದಾರೆ.

ಗಡಿ ಜಿಲ್ಲೆಗಳಿಗಿಂತ ಮುಸ್ಲಿಮರು ಕಡಿಮೆ ಇರುವ ಜಿಲ್ಲೆಗಳಲ್ಲೇ ಈ ಅಂತರ ಹೆಚ್ಚಾಗಿದೆ. ಪೂರ್ವ ಮೇದಿನಿಪುರದ ಎಗ್ರಾ ಕ್ಷೇತ್ರದಲ್ಲಿ ಮುಸ್ಲಿಮರು ಶೇ.8ರಷ್ಟಿದ್ದರೂ, ಮೇಲ್ಮನವಿ ಎದುರಿಸುತ್ತಿರುವವರಲ್ಲಿ ಶೇ.94.9ರಷ್ಟು ಮುಸ್ಲಿಂ ಹೆಸರುಗಳನ್ನು ಹೊಂದಿದ್ದಾರೆ. ಸುಂದರಬನದ ಸಾಗರ್ ಮತ್ತು ಗೋಸಾಬಾದಲ್ಲಿ ಇದು ಶೇ.97 ಮತ್ತು ಶೇ.95ರಷ್ಟಿದೆ. ಮುಸ್ಲಿಮರು ಶೇ.60ರಷ್ಟು ಇರುವ ಮುರ್ಷಿದಾಬಾದ್‌ನಲ್ಲೂ ಶೇ.98.2ರಷ್ಟು ಮೇಲ್ಮನವಿಗಳು ಮುಸ್ಲಿಂ ಮತದಾರರ ವಿರುದ್ಧವಾಗಿವೆ. ಹಲವಾರು ಕಡೆಗಳಲ್ಲೂ ಇದೇ ಪ್ರವೃತ್ತಿ ಕಂಡು ಬಂದಿದೆ.

ನ್ಯಾಯಾಂಗ ಅಧಿಕಾರಿಗಳು ಅಳಿಸಿರುವ 27,06,057 ಮತದಾರರ ಪೈಕಿ ಶೇ 22,17,619 ಜನರು (ಶೇ.82) ಮಂದಿ ಮೇಲ್ಮನವಿ ಸಲ್ಲಿಸಿದ್ದು, ಇವರಲ್ಲಿ ಶೇ.79.3ರಷ್ಟು ಜನರು ಮುಸ್ಲಿಮರಾಗಿದ್ದಾರೆ.

ಸಬರ್ ಇನ್‌ಸ್ಟಿಟ್ಯೂಟ್‌ನ ವರದಿಯ ಪ್ರಕಾರ, ನಿರ್ಣಯದ ಹಂತದಲ್ಲಿದ್ದು ಕೈಬಿಡಲಾಗಿರುವ 27 ಲಕ್ಷಕ್ಕೂ ಹೆಚ್ಚು ಮತದಾರರಲ್ಲಿ ಶೇ.70.17ರಷ್ಟು ಮುಸ್ಲಿಮರು ಮತ್ತು ಶೇ.51ರಷ್ಟು ಮಹಿಳೆಯರಾಗಿದ್ದಾರೆ.

ಚುನಾವಣಾ ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಈ ಮೇಲ್ಮನವಿಗಳನ್ನು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಮ್ಮ ಅಧಿಕಾರದ ಅಡಿಯಲ್ಲಿ ಸಲ್ಲಿಸಿದ್ದು, ಈ ವಿಷಯವನ್ನು ಆಯೋಗಕ್ಕೆ ತಿಳಿಸಿರಲಿಲ್ಲ ಎಂದು ತಿಳಿಸಿದೆ. ನ್ಯಾಯಾಧೀಶರಿಂದ ಅನುಮೋದನೆ ಪಡೆದಿದ್ದರೂ ಈ ಕ್ರಮವು ಮುಸ್ಲಿಂ ಮತದಾರರನ್ನು ದೊಡ್ಡ ಮಟ್ಟದಲ್ಲಿ ಗುರಿಯಾಗಿಸಿದೆ ಎನ್ನುವುದನ್ನು ಈ ದತ್ತಾಂಶವು ಸಾಬೀತುಪಡಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor