E20 ವಿರುದ್ಧ ಕಾಂಗ್ರೆಸ್ ನಿಂದ ರಾಷ್ಟ್ರವ್ಯಾಪಿ ಅಭಿಯಾನ; ‘ಜನರ ಜೇಬಿನಿಂದ ಹಣ ಕದಿಯಲಾಗುತ್ತಿದೆ’: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಕೇಂದ್ರದ E20 (20 ಶೇಕಡಾ ಎಥೆನಾಲ್ ಮಿಶ್ರಿತ ಪೆಟ್ರೋಲ್) ನೀತಿ ವಿರುದ್ಧ ಕಾಂಗ್ರೆಸ್ ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಘೋಷಿಸಿದರು. E20 ಪೆಟ್ರೋಲ್ ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ, ಜನರ ಜೀವಗಳಿಗೆ ಅಪಾಯ ಉಂಟಾಗುತ್ತಿದೆ ಮತ್ತು ಜನರ ಜೇಬಿನಿಂದ ನೇರವಾಗಿ ಹಣ ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಕುರಿತು ಎಕ್ಸ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ರಾಹುಲ್, E20 ನೀತಿಯು ಅತ್ಯಂತ ಗಂಭೀರವಾಗಿದೆ ಎಂದು ಹೇಳಿದ್ದಾರೆ.
‘ಸಾಮಾನ್ಯವಾಗಿ "ದಾಲ್ ಮೇ ಕುಚ್ ಕಾಲಾ ಹೈ" ಎಂದು ಹೇಳುತ್ತೇವೆ. ಆದರೆ ಇಲ್ಲಿ ಇಡೀ ದಾಲ್ಕಪ್ಪಾಗಿದೆ. ಯಾವುದೇ ರಾಜಕೀಯ ಅಭಿಯಾನದಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ದೇಶದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಆದ್ಯತೆ ನೀಡಬೇಕಾದ ವಿಷಯಗಳ ಪಟ್ಟಿ ದೊಡ್ಡದಾಗಿದೆ. ಆದರೂ ಚಿಂತಿಸಬೇಡಿ. E20 ವಿಷಯವನ್ನು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಿದೆ. ಇದು ಜನರ ಕಾರುಗಳು ಮತ್ತು ಸ್ಕೂಟರ್ ಗಳಿಗೆ ಹಾನಿ ಮಾಡುತ್ತಿದೆ. ಜನರ ಜೀವಗಳಿಗೆ ಅಪಾಯ ಉಂಟುಮಾಡುತ್ತಿದೆ. ಅಷ್ಟೇ ಅಲ್ಲ, ಅಕ್ಷರಶಃ ಅವರ ಜೇಬಿನಿಂದ ನೇರವಾಗಿ ಹಣ ಕದಿಯುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್, ಕೇಂದ್ರದ E20 ಪೆಟ್ರೋಲ್ ನೀತಿಯಿಂದ ವಾಹನ ಚಾಲಕರ ಇಂಧನ ವೆಚ್ಚ ಹೆಚ್ಚಾಗಿದ್ದು, ಅದರ ಲಾಭ ಮುಖ್ಯವಾಗಿ ಎಥೆನಾಲ್ ಉತ್ಪಾದಕರಿಗೆ ಆಗುತ್ತಿದೆ ಎಂದು ಆರೋಪಿಸಿತ್ತು. ಅಗ್ಗದ ಇಂಧನದ ಭರವಸೆ ನೀಡಿದ್ದರೂ ವಾಹನ ಚಾಲಕರು ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ ಎಂದು ಪಕ್ಷ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಕೆಲವು ದಿನಗಳ ಹಿಂದೆ E20 ಯೋಜನೆ ಕುರಿತು ಟೀಕಿಸಿದ್ದರು. ಮಾರ್ಚ್ 2025 ರಿಂದ ದೇಶದಾದ್ಯಂತ ಸಾಮಾನ್ಯ ಪೆಟ್ರೋಲ್ ಬಂಕ್ ಗಳಲ್ಲಿ ಪ್ರಾಯೋಗಿಕವಾಗಿ E20 ಪೆಟ್ರೋಲ್ ಮಾತ್ರ ಮಾರಾಟವಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, ಎಥೆನಾಲ್ ಮಿಶ್ರಣದಿಂದ ಡೀಸೆಲ್ ದರ ಲೀಟರ್ಗೆ 50 ರೂ.ಗೆ ಇಳಿಯಲಿದೆ ಮತ್ತು ಲೀಟರ್ಗೆ 55 ರೂ. ವೆಚ್ಚದಲ್ಲಿ ಪೆಟ್ರೋಲ್ ಗೆ ಪರ್ಯಾಯ ದೊರೆಯಲಿದೆ ಎಂದು ಕೇಂದ್ರ ಹೇಳಿಕೊಂಡಿತ್ತು. ಆದರೆ, ಅಂತಹ ಯಾವುದೇ ಬೆಲೆ ಇಳಿಕೆ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಸ್ವತಂತ್ರ ವಿಶ್ಲೇಷಣೆಯೊಂದನ್ನು ಉಲ್ಲೇಖಿಸಿರುವ ಅವರು, ಎಪ್ರಿಲ್ 2023ರಿಂದ ಮಾರ್ಚ್ 2026ರವರೆಗೆ ಎಥೆನಾಲ್ ಮಿಶ್ರಿತ ಇಂಧನದಿಂದ ಉಂಟಾದ ಕಡಿಮೆ ಮೈಲೇಜ್ ಸರಿದೂಗಿಸಲು ಗ್ರಾಹಕರು ಒಟ್ಟಾರೆ ಸುಮಾರು 88,234 ಕೋಟಿ ರೂ. ಹೆಚ್ಚುವರಿ ವೆಚ್ಚ ಭರಿಸಿದ್ದಾರೆ ಎಂದು ಎಕ್ಸ್ ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಡಿಮೆ ಇಂಧನ ದಕ್ಷತೆಯಿಂದಾಗುವ ನಷ್ಟವನ್ನು ಸರಿದೂಗಿಸಲು ಕೇಂದ್ರವು E20 ಪೆಟ್ರೋಲ್ ನ ಚಿಲ್ಲರೆ ದರವನ್ನು ಕಡಿಮೆ ಮಾಡಬಹುದಿತ್ತು ಎಂದು ಅವರು ಹೇಳಿದ್ದಾರೆ. ಗ್ರಾಹಕರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ನೀತಿ ಆಯೋಗದ ಎಥೆನಾಲ್ ಮಾರ್ಗಸೂಚಿಯಲ್ಲಿಯೂ E10 ಮತ್ತು E20 ಇಂಧನಗಳಿಗೆ ಆರ್ಥಿಕ ಹಾಗೂ ತೆರಿಗೆ ಪ್ರೋತ್ಸಾಹ ನೀಡುವ ಶಿಫಾರಸುಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
‘E20 ನೀತಿಯಿಂದ ಮಧ್ಯಮ ವರ್ಗದ ಭಾರತೀಯರ ಆಯ್ಕೆಯ ಅವಕಾಶ ಕಡಿಮೆಯಾಗಿದೆ. ಅವರ ಮೇಲೆ ಹೆಚ್ಚುವರಿ ಇಂಧನ ವೆಚ್ಚದ ಹೊರೆ ಬಿದ್ದಿದೆ. ಖರೀದಿಸಲು ವರ್ಷಗಳ ಕಾಲ ಉಳಿಸಿದ ವಾಹನಗಳ ಮೇಲೂ ಹೆಚ್ಚುವರಿ ಹೊರೆ ಉಂಟಾಗಿದೆ. ಈ ನೀತಿಯಿಂದ ಅತಿ ಹೆಚ್ಚು ಪ್ರಯೋಜನ ಪಡೆದಿರುವವರು ಎಥೆನಾಲ್ ಉತ್ಪಾದಕರೇ’ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಆದರೆ, ಎಥೆನಾಲ್ ಮಿಶ್ರಣ ನೀತಿಯಿಂದ ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಎಥೆನಾಲ್ಗೆ ಬೇಡಿಕೆ ಹೆಚ್ಚುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರಕಾರ ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ.
E20 - दाल में काला नहीं, पूरी दाल ही काली है। pic.twitter.com/Unw7UfNt9k
— Rahul Gandhi (@RahulGandhi) August 7, 2026