ಅತ್ಯಾಚಾರಿಗಳನ್ನು ಸಮರ್ಥಿಸಿದವರನ್ನೇ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಗಿದೆ: ಪ್ರಹ್ಲಾದ್ ಜೋಶಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Update: 2026-07-28 20:43 IST

 ರಾಹುಲ್ ಗಾಂಧಿ , ಪ್ರಹ್ಲಾದ್ ಜೋಶಿ | Photo Credit : PTI 

ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡಿರುವ ಕ್ರಮವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. “ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡ ವ್ಯಕ್ತಿಯ ಮೇಲೆ ಬಿಜೆಪಿ ವಿಶ್ವಾಸವಿಟ್ಟಿದೆ” ಎಂದು ಅವರು ಆರೋಪಿಸಿದ್ದಾರೆ.

ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಭಾರತದ ಶಿಕ್ಷಣ ವ್ಯವಸ್ಥೆಯ ವಿರುದ್ಧ ಸಾವಿರಾರು ಯುವಕರು ಮತ್ತು ಯುವತಿಯರು ಪ್ರತಿಭಟಿಸುತ್ತಿದ್ದಾರೆ. ಅವರನ್ನು ಥಳಿಸಲಾಗಿದೆ, ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಆದರೆ, ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿದ್ದ ವ್ಯಕ್ತಿಯನ್ನು ಬಿಜೆಪಿ ಶಿಕ್ಷಣ ಸಚಿವರನ್ನಾಗಿ ನೇಮಿಸಿದೆ. ಅದರಲ್ಲೂ ಕೊಳಕು ವ್ಯಕ್ತಿತ್ವದ ವ್ಯಕ್ತಿಯನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ” ಎಂದು ಕಿಡಿಕಾರಿದರು.

“ಅತ್ಯಾಚಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುವ ವ್ಯಕ್ತಿಗಿಂತ ಕೊಳಕು ವ್ಯಕ್ತಿ ಮತ್ತೊಬ್ಬ ಇರಲು ಸಾಧ್ಯವಿಲ್ಲ. ಅವರೇ ಇಂದಿನ ಭಾರತದ ಶಿಕ್ಷಣ ಸಚಿವ” ಎಂದು ಅವರು ಹೇಳಿದರು.

“ಇದು ನಿಜಕ್ಕೂ ವಿಚಿತ್ರ. ಪ್ರಧಾನಿಯವರ ಸಚಿವ ಸಂಪುಟದಲ್ಲಿ ಹಲವು ಮಂದಿ ಇದ್ದರು. ಅವರಲ್ಲಿ ಯಾರನ್ನಾದರೂ ಶಿಕ್ಷಣ ಸಚಿವರನ್ನಾಗಿ ನೇಮಿಸಬಹುದಿತ್ತು. ಆದರೆ, ಅತ್ಯಾಚಾರಿಗಳನ್ನು ಸಮರ್ಥಿಸಿದ ವ್ಯಕ್ತಿಯನ್ನೇ ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಇದು ನಿಜಕ್ಕೂ ಸೋಜಿಗ” ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಹ್ಲಾದ್ ಜೋಶಿ ಈ ಹಿಂದೆ 2002ರ ಗುಜರಾತ್ ಗಲಭೆಯ ವೇಳೆ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ, ಅವರ ಕುಟುಂಬದ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿದ ನಿರ್ಧಾರವನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು.

“ಅವರು ಬಹಳ ವರ್ಷಗಳಿಂದ ಜೈಲಿನಲ್ಲಿದ್ದರು. ಅವರ ಬಿಡುಗಡೆಗೆ ನಿಯಮಾವಳಿಗಳಿವೆ. ಸರಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಾಗ ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸುವುದಿಲ್ಲ. ಇದು ಕಾನೂನಿನ ಪ್ರಕ್ರಿಯೆಯಾಗಿದೆ” ಎಂದು ಜೋಶಿ ಹೇಳಿದ್ದರು. ಅವರ ಈ ಹೇಳಿಕೆ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News