ಆಸ್ಟ್ರೇಲಿಯಾ ಭೇಟಿ ವೇಳೆ ಮೋದಿ ಕುರಿತ ಹೇಳಿಕೆ ಅಭಿಪ್ರಾಯವಲ್ಲ, ಅದು ವಾಸ್ತವ: ಆಸ್ಟ್ರೇಲಿಯಾದ ಪತ್ರಕರ್ತ ಬ್ಲೇಕ್ ಜಾನ್ಸನ್
ಬ್ಲೇಕ್ ಜಾನ್ಸನ್ |Photo: youtube/screengrab
ಮೆಲ್ಬರ್ನ್: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯ ವೇಳೆ, ಮೋದಿ ಅವರು ಮಾಧ್ಯಮಗಳ ಪ್ರಶ್ನೆಗಳನ್ನು ಗಂಭೀರವಾಗಿ ಎದುರಿಸದೆ, ಪೂರ್ವಯೋಜಿತ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ ಎಂಬ ಹೇಳಿಕೆ ನೀಡಿ ಭಾರತದಲ್ಲಿ ಭಾರೀ ಗಮನ ಸೆಳೆದಿದ್ದ ಆಸ್ಟ್ರೇಲಿಯಾದ ಪತ್ರಕರ್ತ ಬ್ಲೇಕ್ ಜಾನ್ಸನ್, ತಮ್ಮ ಹೇಳಿಕೆಯು ಅಭಿಪ್ರಾಯವಲ್ಲ, ವಾಸ್ತವದ ಅವಲೋಕನವಾಗಿತ್ತು ಎಂದಿದ್ದಾರೆ.
ಡಾ. ವಿಜೇಂದರ್ ಚೌಹಾಣ್ ಅವರೊಂದಿಗಿನ ಸಂದರ್ಶನದಲ್ಲಿ ಜಾನ್ಸನ್ ಅವರು, ತಾವು ಆ ಹೇಳಿಕೆ ನೀಡಲು ಕಾರಣ, ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಪಾತ್ರ, ರಾಜಕೀಯ ಹೊಣೆಗಾರಿಕೆ, ಮಾಧ್ಯಮಗಳಿಗೆ ಸಿಗುವ ಅವಕಾಶಗಳು ಹಾಗೂ ಆಸ್ಟ್ರೇಲಿಯಾ-ಭಾರತದ ಬಾಂಧವ್ಯದ ಕುರಿತು ಚರ್ಚಿಸಿದ್ದಾರೆ.
ಮೋದಿ ಅವರ ಮೆಲ್ಬರ್ನ್ ಭೇಟಿಯ ವರದಿಗಾರಿಕೆ ವೇಳೆ ಜಾನ್ಸನ್, "ಮೆಲ್ಬರ್ನ್ ಪ್ರವಾಸದಲ್ಲಿ ನಮಗೆ ನರೇಂದ್ರ ಮೋದಿ ಅವರನ್ನು ಇಷ್ಟೊಂದು ಹತ್ತಿರದಿಂದ ನೋಡಲು ಸಿಗುತ್ತಿರುವುದು ಇದೇ ಮೊದಲು. ಅವರು ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವುದನ್ನು ತಪ್ಪಿಸುತ್ತಾರೆ. ಬದಲಿಗೆ, ಪೂರ್ವಯೋಜಿತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ" ಎಂದು ಹೇಳಿದ್ದರು.
ಈ ಹೇಳಿಕೆ ಭಾರತದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಜಾನ್ಸನ್, ತಮ್ಮ 10 ಸೆಕೆಂಡಿನ ವಿಡಿಯೊ ತುಣುಕು ಇಷ್ಟೊಂದು ದೊಡ್ಡ ಮಟ್ಟದ ಗಮನ ಸೆಳೆಯುತ್ತದೆ ಎಂದು ತಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
"ಆ ವಿಡಿಯೊ ಅಷ್ಟೊಂದು ವೈರಲ್ ಆಗುತ್ತದೆ ಎಂದು ನನಗೆ ಸ್ವಲ್ಪವೂ ಕಲ್ಪನೆ ಇರಲಿಲ್ಲ" ಎಂದಿರುವ ಜಾನ್ಸನ್, ಭಾರತದ ಪ್ರಧಾನಿಯವರ ಎರಡು ದಿನಗಳ ಭೇಟಿಯ ವೇಳೆ ಪತ್ರಕರ್ತರಿಗೆ ಯಾವುದೇ ಪ್ರಶ್ನೆ ಕೇಳಲು ಅವಕಾಶ ಇರಲಿಲ್ಲ ಎಂಬುದನ್ನಷ್ಟೇ ತಾವು ಗಮನಿಸಿ ಹೇಳಿದ್ದು ಆ ಹೇಳಿಕೆ ಎಂದಿದ್ದಾರೆ.
ಅದು ಅಭಿಪ್ರಾಯವಾಗಿರಲಿಲ್ಲ, ಅದು ಸತ್ಯ
ತಮ್ಮ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಅಥವಾ ಮೋದಿಯವರ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳ ಅಭಿಪ್ರಾಯವೇ ಎಂದು ಕೇಳಿದಾಗ, ಜಾನ್ಸನ್ ಅದು ಕೇವಲ ಒಂದು ಅಭಿಪ್ರಾಯ ಎಂಬುದನ್ನು ತಿರಸ್ಕರಿಸಿದರು.
"ನನಗೆ ಅದು ಅಭಿಪ್ರಾಯ ಎಂದು ಅನಿಸುವುದಿಲ್ಲ. ಅದು ಪೂರ್ಣ ಪ್ರಮಾಣದ ಸತ್ಯ ಎಂದೇ ನಾನು ಭಾವಿಸುತ್ತೇನೆ. ಮೋದಿ ಅವರು ಸುದ್ದಿಗೋಷ್ಠಿಗಳನ್ನು ಮಾಡುವುದು ತೀರಾ ವಿರಳ" ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮೋದಿ ಅವರ ಸಂವಹನದ ಬಗ್ಗೆ ಇಂತಹ ಪ್ರಶ್ನೆಗಳು ಈ ಹಿಂದೆ ನಾರ್ವೆ ಮತ್ತು ಇತ್ತೀಚೆಗೆ ನ್ಯೂಝಿಲೆಂಡ್ ಸೇರಿದಂತೆ ಇತರ ದೇಶಗಳ ಭೇಟಿಯ ವೇಳೆಯೂ ಎದ್ದಿದ್ದವು. ಹಾಗೆ ನೋಡಿದರೆ, ನಾವು ಹೇಳಿದ್ದು 100 ಪ್ರತಿಶತ ಸರಿಯಾಗಿತ್ತು. ಎರಡು ದಿನಗಳ ಕಾಲ ನಮಗೆ ಅವರಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲು ಅವಕಾಶವೇ ಸಿಗಲಿಲ್ಲ ಎಂದು ಜಾನ್ಸನ್ ಹೇಳಿದ್ದಾರೆ.
ಮೋದಿ ಅವರ ಪ್ರವಾಸದ ಸಂದರ್ಭದಲ್ಲಿ ನ್ಯೂಝಿಲೆಂಡ್ ಅಧಿಕಾರಿಯೊಬ್ಬರು ಮಾಡಿದ್ದ ಕಾಮೆಂಟ್ ಕುರಿತೂ ಈ ಸಂದರ್ಶನದಲ್ಲಿ ಚರ್ಚಿಸಲಾಯಿತು. ಭಾರತದ ಪ್ರಧಾನಿ ಮಾಧ್ಯಮಗಳ ಪ್ರಶ್ನೆಗಳನ್ನು ಏಕೆ ಎದುರಿಸುವುದಿಲ್ಲ ಎಂಬ ಪ್ರಶ್ನೆಗಳು ಅಲ್ಲಿಯೂ ಎದ್ದಿದ್ದವು.
ಮೋದಿ ಅವರ ಮತದಾರರ ಸ್ವರೂಪವನ್ನು ಕಾರಣವಾಗಿಟ್ಟುಕೊಂಡು ಮಾಧ್ಯಮ ಸಂವಹನ ಅಗತ್ಯವಿಲ್ಲ ಎಂಬಂತೆ ನೀಡಲಾಗುವ ವಿವರಣೆಗಳನ್ನು ಜಾನ್ಸನ್ ಖಂಡಿಸಿದ್ದಾರೆ.
ಇಂತಹ ವಿವರಣೆಗಳು ಜನರನ್ನು ಕೀಳಾಗಿ ಕಾಣುವಂತಿವೆ ಎಂದ ಜಾನ್ಸನ್, ಗ್ರಾಮೀಣ ಭಾಗದ ಜನರು ಮತ್ತು ರೈತರು ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಮ್ಮಿಂದ ಆಯ್ಕೆಯಾದ ನಾಯಕರಿಂದ ಉತ್ತರ ಪಡೆಯುವ ಹಕ್ಕು ಹೊಂದಿದ್ದಾರೆ. ಅವರೇನೂ ಅನಕ್ಷರಸ್ಥರಲ್ಲ. ಸಣ್ಣ ನಗರಗಳ ಜನರು ಮತ್ತು ರೈತರು ಆಸ್ಟ್ರೇಲಿಯಾ ಹಾಗೂ ಭಾರತದಂತಹ ದೇಶಗಳ ಬೆನ್ನೆಲುಬಾಗಿದ್ದಾರೆ.
ಮೋದಿ ಅವರ ಮಾಧ್ಯಮ ಸಂವಹನದ ಕುರಿತು ಪದೇ ಪದೇ ಎದುರಾಗುವ ಪ್ರಶ್ನೆಗಳನ್ನು ಅಧಿಕಾರಿಗಳೇ 'ದೇಜಾವೂ' ಎಂದು ಕರೆದರೆ, ಈ ವಿಷಯ ಏಕೆ ಪದೇ ಪದೇ ಚರ್ಚೆಗೆ ಬರುತ್ತಿದೆ ಎಂಬುದರ ಕುರಿತು ಅವರೇ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು.
ಒಂದು ವೇಳೆ ಆಸ್ಟ್ರೇಲಿಯಾದ ಪ್ರಧಾನಿ ಮಾಧ್ಯಮಗಳ ಪ್ರಶ್ನೆಗಳಿಂದ ನಿರಂತರವಾಗಿ ದೂರ ಉಳಿದರೆ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಆಂಥೋನಿ ಅಲ್ಬನೀಸ್, ಪೀಟರ್ ಡಟ್ಟನ್ ಅಥವಾ ಯಾವುದೇ ಆಸ್ಟ್ರೇಲಿಯಾದ ನಾಯಕ ಈ ರೀತಿ ನಡೆದುಕೊಂಡಿದ್ದರೆ, ಅವರನ್ನು ಜನರು ಕಟುವಾಗಿ ಟೀಕಿಸುತ್ತಿದ್ದರು" ಎಂದು ಜಾನ್ಸನ್ ಹೇಳಿದರು.
ಅವರ ಪ್ರಕಾರ, ಆಸ್ಟ್ರೇಲಿಯಾದ ಪತ್ರಕರ್ತರು ರಾಜಕೀಯ ನಾಯಕರು ಕಾರಿನ ಬಳಿ ಹೋಗುವಾಗ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸಿಗುವ ಪ್ರತಿಯೊಂದು ಅವಕಾಶದಲ್ಲೂ ಅವರನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಾರೆ.
ಆಸ್ಟ್ರೇಲಿಯಾದಲ್ಲಿ ರಾಜಕೀಯ ನಾಯಕರು ಜನಸೇವಕರಾಗಿರುವುದರಿಂದ ಅವರು ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂಬ ನಿರೀಕ್ಷೆಯಿರುತ್ತದೆ ಎಂದು ಅವರು ಹೇಳಿದರು.
"ನೀವು ಸಾರ್ವಜನಿಕ ಜೀವನದಲ್ಲಿ ಇದ್ದಾಗ, ನಿಮ್ಮ ಖಾಸಗಿತನದ ಕೆಲವು ಗಡಿಗಳನ್ನು ಬಿಟ್ಟುಕೊಡಬೇಕಾಗುತ್ತದೆ. ನೀವು ಯಾರಿಗಾಗಿ ಕೆಲಸ ಮಾಡುತ್ತೀರೋ ಆ ಜನರಿಗೆ ಉತ್ತರ ನೀಡುವ ಜವಾಬ್ದಾರಿ ನಿಮಗಿರುತ್ತದೆ. ಆಯ್ಕೆಯಾದ ನಾಯಕರನ್ನು ಸುಲಭವಾಗಿ ತಲುಪಲು ಸಾಧ್ಯವಾಗುವುದು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಸ್ತಂಭವಾದ ಮಾಧ್ಯಮಗಳ ಮೂಲಕ" ಎಂಬುದನ್ನು ಜಾನ್ಸನ್ ಪದೇ ಪದೇ ಒತ್ತಿ ಹೇಳಿದರು.
ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸರ್ಕಾರದ ನಿರ್ಧಾರಗಳನ್ನು ಜನರಿಗೆ ವಿವರಿಸುವ ಮನೋಭಾವ ಅತ್ಯಗತ್ಯ. "ನೀವು ಜನರನ್ನು ನಿಮ್ಮೊಂದಿಗೆ ಕರೆದೊಯ್ಯಬೇಕು. ನೀವು ಏನು ಮಾಡುತ್ತಿದ್ದೀರಿ ಎಂದು ಜನರಿಗೆ ಕೇವಲ ಹೇಳಿದರೆ ಸಾಲದು. ಅದನ್ನು ಸರಿಯಾಗಿ ವಿವರಿಸಬೇಕು."
ಸುದ್ದಿಗೋಷ್ಠಿಗಳು ನಾಯಕರಿಗೆ ತಮ್ಮ ಸ್ವಂತ ಸಲಹೆಗಾರರು ನೀಡುವ ಅಭಿಪ್ರಾಯಗಳಿಗಿಂತ ಭಿನ್ನವಾದ ದೃಷ್ಟಿಕೋನಗಳನ್ನು ಕೇಳಲು ಅವಕಾಶ ಮಾಡಿಕೊಡುತ್ತವೆ ಎಂದಿದ್ದಾರೆ ಜಾನ್ಸನ್.
ಮೋದಿ ಅವರ ಸಂವಹನ ಶೈಲಿಯನ್ನು ಉಲ್ಲೇಖಿಸಿದ ಅವರು, ಪ್ರಧಾನಿಯವರು ಪತ್ರಕರ್ತರೊಂದಿಗೆ ನೇರ ಸಂವಾದದಲ್ಲಿ ತೊಡಗಿಸಿಕೊಳ್ಳುವ ಬದಲು ಮುಖ್ಯವಾಗಿ ಸೋಶಿಯಲ್ ಮೀಡಿಯಾ ಮತ್ತು ಇತರ ಏಕಮುಖ ವೇದಿಕೆಗಳ ಮೂಲಕವೇ ಸಂವಹನ ನಡೆಸುತ್ತಾರೆ.
ಅಸಹಜ ಅಥವಾ ಮುಜುಗರದ ಪ್ರಶ್ನೆಗಳು ಎದುರಾದಾಗಲೂ ನಾಯಕರು ಮುಕ್ತ ಸಂವಾದಗಳಲ್ಲಿ ಭಾಗವಹಿಸಿದಾಗ ಪ್ರಜಾಪ್ರಭುತ್ವವು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಜಾನ್ಸನ್ ಅಭಿಪ್ರಾಯಪಟ್ಟರು.
ಮೋದಿ ಅವರ ಭೇಟಿಯ ವೇಳೆ ಮೆಲ್ಬರ್ನ್‌ನ ಮಾರ್ವೆಲ್ ಕ್ರೀಡಾಂಗಣದ ಹೊರಗೆ ಕಂಡುಬಂದ ಭಿನ್ನ ದೃಶ್ಯಗಳ ಕುರಿತೂ ಸಂದರ್ಶನದಲ್ಲಿ ಚರ್ಚಿಸಲಾಯಿತು.
ಕ್ರೀಡಾಂಗಣದ ಒಳಗಡೆ ಪ್ರಧಾನಿಯವರನ್ನು ಸ್ವಾಗತಿಸಲು ಸಾವಿರಾರು ಅನಿವಾಸಿ ಭಾರತೀಯರು ನೆರೆದಿದ್ದರೆ, ಹೊರಗೆ ಒಂದು ಸಣ್ಣ ಗುಂಪು ವಲಸೆ ಮತ್ತು ಭಾರತದ ವಿರುದ್ಧ ಪ್ರತಿಭಟನೆ ನಡೆಸುತ್ತಿತ್ತು.
ಆದರೆ ಈ ಪ್ರತಿಭಟನಾಕಾರರು ಆಸ್ಟ್ರೇಲಿಯಾದ ಬಹುಸಂಖ್ಯಾತ ಜನರ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಜಾನ್ಸನ್ ಹೇಳಿದರು.
ಪ್ರತಿಭಟನಾಕಾರರನ್ನು "ತೀವ್ರ ಬಲಪಂಥೀಯ ಮತ್ತು ಜನಾಂಗೀಯ ದ್ವೇಷದ ಅಂಚಿನಲ್ಲಿರುವ" ಸಣ್ಣ ಗುಂಪು ಎಂದು ಬಣ್ಣಿಸಿದ ಅವರು, ಅವರ ಸಿದ್ಧಾಂತಗಳನ್ನು ಬಹುಪಾಲು ಆಸ್ಟ್ರೇಲಿಯನ್ನರು ಬೆಂಬಲಿಸುವುದಿಲ್ಲ ಎಂದರು.
ಇದೇ ವೇಳೆ, ಆಸ್ಟ್ರೇಲಿಯಾದಲ್ಲಿ ವಲಸೆ, ವಸತಿ ಮತ್ತು ಮೂಲಸೌಕರ್ಯಗಳ ಕುರಿತು ಸಾರ್ವಜನಿಕರಲ್ಲಿ ಸಾಮಾನ್ಯ ಕಳಕಳಿಗಳಿವೆ ಎಂಬುದನ್ನು ಒಪ್ಪಿಕೊಂಡ ಅವರು, ಆ ಕಳಕಳಿಗಳಿಗೂ ಪ್ರತಿಭಟನಾಕಾರರು ಕೂಗಿದ ಭಾರತ ವಿರೋಧಿ ಘೋಷಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ರೀಡಾಂಗಣದಲ್ಲಿದ್ದ ಭಾರತೀಯ ಸಮುದಾಯದ ಜನರು ಪ್ರತಿಭಟನಾಕಾರರಿಗೆ ಶಾಂತಿಯುತವಾಗಿಯೇ ಪ್ರತಿಕ್ರಿಯಿಸಿದ್ದನ್ನು ಜಾನ್ಸನ್ ಶ್ಲಾಘಿಸಿದ್ದಾರೆ.
"ಯಾವುದೇ ನಿಂದನೆ ಅಥವಾ ಗಲಾಟೆಗೆ ಇಳಿಯದೆ, ಕೇವಲ ಚೆಂಡೆ-ಮದ್ದಳೆ ಮತ್ತು ಸಂಗೀತದ ಮೂಲಕವೇ ಅವರು ಪ್ರತಿಭಟನಾಕಾರರ ಸದ್ದು ಅಡಗುವಂತೆ ಮಾಡಿದರು."
ಇಂತಹ ಸಂಭ್ರಮಾಚರಣೆಗಳು "ಆಸ್ಟ್ರೇಲಿಯಾದ ಸಂಸ್ಕೃತಿಗೆ ತಕ್ಕುದಾದದ್ದು ಅಲ್ಲ, ಅಲ್ಲವೇ" ಎಂಬ ಪ್ರಶ್ನೆಗೆ ಉತ್ತರಿಸಿದ ಜಾನ್ಸನ್, ಆಧುನಿಕ ಆಸ್ಟ್ರೇಲಿಯಾವು ಕೇವಲ ಬಿಳಿಯರ ಸಮಾಜವಾಗಿರದೆ, ಬಹುಸಂಸ್ಕೃತಿಯ ದೇಶವಾಗಿದೆ ಎಂದು ಹೇಳಿದರು.
ಮೋದಿಗೆ ಕೇಳಲು ಬಯಸಿದ್ದ ಪ್ರಶ್ನೆಗಳು
ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಲು ತಮಗೆ ಅವಕಾಶ ಸಿಕ್ಕಿದ್ದರೆ, "ನೀವು ನಿಯಮಿತವಾಗಿ ಸುದ್ದಿಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ?" ಎಂಬುದೇ ತಮ್ಮ ಮೊದಲ ಪ್ರಶ್ನೆಯಾಗಿರುತ್ತಿತ್ತು ಎಂದು ಜಾನ್ಸನ್ ಹೇಳಿದರು.
ಇದರ ಜೊತೆಗೆ ಆಸ್ಟ್ರೇಲಿಯಾದ ಜನರಿಗೆ ಸಂಬಂಧಿಸಿದ ವಿಷಯಗಳ ಕುರಿತೂ ತಾವು ಪ್ರಶ್ನೆ ಕೇಳುತ್ತಿದ್ದುದಾಗಿ ತಿಳಿಸಿದರು.
ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯ ಪ್ರಗತಿ ಹಾಗೂ ಆಸ್ಟ್ರೇಲಿಯಾದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸರಣಿ ಅಪಘಾತ ಎಸಗಿ ಭಾರತಕ್ಕೆ ಪರಾರಿಯಾಗಿದ್ದ ವ್ಯಕ್ತಿಯ ಹಸ್ತಾಂತರ ಪ್ರಕರಣದ ಕುರಿತು ತಾವು ಪ್ರಶ್ನೆಗಳನ್ನು ಕೇಳುತ್ತಿದ್ದೆ ಎಂದು ಹೇಳಿದರು.
ಪತ್ರಕರ್ತರು ತಮ್ಮ ವೀಕ್ಷಕರಿಗೆ ಮತ್ತು ಓದುಗರಿಗೆ ಪ್ರಾಮುಖ್ಯವಾದ ಪ್ರಶ್ನೆಗಳನ್ನು ಕೇಳಬೇಕು ಎಂದು ಜಾನ್ಸನ್ ಹೇಳಿದರು.
ಪತ್ರಕರ್ತರ ಜವಾಬ್ದಾರಿ
ಪ್ರಭಾವಿ ರಾಜಕೀಯ ನಾಯಕರನ್ನು ಭೇಟಿಯಾಗುವ ಅವಕಾಶ ಸಿಕ್ಕಾಗ ಪತ್ರಕರ್ತರು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತೂ ಈ ಸಂದರ್ಶನದಲ್ಲಿ ಚರ್ಚಿಸಲಾಯಿತು.
ಪತ್ರಕರ್ತರು ಅಂತಿಮವಾಗಿ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಾರೆ ಎಂದ ಜಾನ್ಸನ್, "ವೀಕ್ಷಕರೇ ಇಲ್ಲದಿದ್ದರೆ ಪತ್ರಕರ್ತರಾದ ನಮಗೆ ಏನು ಬೆಲೆ ಇದೆ" ಎಂದು ಪ್ರಶ್ನಿಸಿದರು.
ಅಧಿಕಾರದಲ್ಲಿರುವವರ ಜೊತೆ ತೀರಾ ಹತ್ತಿರವಾಗುವ ಪತ್ರಕರ್ತರ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ ಅವರು, ಗೌರವಯುತವಾಗಿಯೇ ಕಠಿಣ ಪ್ರಶ್ನೆಗಳನ್ನು ಕೇಳಲು ಪತ್ರಕರ್ತರಿಗೆ ಸಾಧ್ಯವಿದೆ ಎಂದರು.
ಭಾರತದಲ್ಲಿ ಮೋದಿ ಅವರು ಮಾವಿನ ಹಣ್ಣನ್ನು ಹೇಗೆ ತಿನ್ನುತ್ತಾರೆ ಎಂಬ ಪ್ರಶ್ನೆ ಭಾರೀ ಚರ್ಚೆಯಾಗಿದ್ದನ್ನು ಉದಾಹರಿಸಿದ ಅವರು, ಇಂತಹ ಹಗುರವಾದ ಪ್ರಶ್ನೆಗಳಿಗೆ ಸಂದರ್ಶನಗಳಲ್ಲಿ ಜಾಗವಿರಬಹುದು. ಆದರೆ, ಅವು ಸಾರ್ವಜನಿಕ ಪ್ರಾಮುಖ್ಯತೆಯ ಪ್ರಶ್ನೆಗಳ ಜಾಗವನ್ನು ಆಕ್ರಮಿಸಬಾರದು ಎಂದರು.
ಒಂದು ವೇಳೆ ರಾಜಕೀಯ ನಾಯಕರು ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರೆ ಅಥವಾ ಉತ್ತರಿಸದೆ ಹೊರಟುಹೋದರೆ, ಅದೂ ಕೂಡ ಸುದ್ದಿಯ ಒಂದು ಭಾಗವಾಗುತ್ತದೆ ಎಂದು ಹೇಳಿದರು.
ಆಸ್ಟ್ರೇಲಿಯಾದಲ್ಲಿ ವಲಸೆ ಮತ್ತು ವಸತಿ ಸಮಸ್ಯೆ
ಆಸ್ಟ್ರೇಲಿಯಾದಲ್ಲಿ ವಲಸೆ ಕುರಿತಾದ ಆತಂಕಗಳ ಬಗ್ಗೆ ಮಾತನಾಡಿದ ಜಾನ್ಸನ್, ವಸತಿ ಸೌಲಭ್ಯಗಳ ಬೆಲೆ, ಮೂಲಸೌಕರ್ಯ ಮತ್ತು ಹೊಸದಾಗಿ ಬಂದವರಿಗೆ ಸಂಬಂಧಿಸಿದಂತೆ ನೈಜ ಸವಾಲುಗಳಿವೆ ಎಂದು ಹೇಳಿದರು.
ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಆಸ್ತಿಯ ಬೆಲೆಗಳು ಕೈಗೆಟುಕದಷ್ಟು ದುಬಾರಿಯಾಗುತ್ತಿವೆ.
ವೇಗವಾಗಿ ಹೆಚ್ಚುತ್ತಿರುವ ವಲಸೆಯು ದೇಶದ ಸಾಂಪ್ರದಾಯಿಕ ಜೀವನಶೈಲಿಯನ್ನು ಬದಲಾಯಿಸುತ್ತಿದೆ ಎಂದು ನಂಬುವ ವರ್ಗಗಳು ಆಸ್ಟ್ರೇಲಿಯಾ ಸಮಾಜದಲ್ಲಿವೆ. ಆದರೆ, ವಲಸಿಗರ ವಿರುದ್ಧದ ಜನಾಂಗೀಯ ವಾದಗಳನ್ನು ಅವರು ತಳ್ಳಿಹಾಕಿದರು. ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಜನರನ್ನು ಸಮಾಜದಲ್ಲಿ ಬೆರೆಸಿಕೊಳ್ಳಲು ಸಮಯ ಹಿಡಿಯುತ್ತದೆ ಮತ್ತು ಶಿಕ್ಷಣ ವ್ಯವಸ್ಥೆಯಂತಹ ಸಂಸ್ಥೆಗಳ ಬೆಂಬಲ ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದರು.
"ಆಸ್ಟ್ರೇಲಿಯಾ ವಲಸಿಗರಿಂದ ಆವೃತವಾಗಿ ಅಪಾಯದಲ್ಲಿದೆ ಎಂದು ನಾನು ಭಾವಿಸುವುದಿಲ್ಲ" ಎಂದ ಅವರು, ಭಾರೀ ಪ್ರಮಾಣದ ವಲಸೆಗೆ ಹೊಂದಿಕೊಳ್ಳುವುದು ಪ್ರಾಯೋಗಿಕ ಸವಾಲುಗಳನ್ನು ತಂದೊಡ್ಡುತ್ತದೆ ಎಂಬುದನ್ನು ಒಪ್ಪಿಕೊಂಡರು.
ಸಂದರ್ಶನದ ಕೊನೆಯಲ್ಲಿ, ಭಾರತೀಯರಲ್ಲಿ ಅವರಿಗೆ ಅತ್ಯಂತ ಇಷ್ಟವಾಗುವ ವಿಷಯ ಯಾವುದು ಎಂದು ಕೇಳಿದಾಗ, ಜಾನ್ಸನ್ ನಗುತ್ತಾ ಮೊದಲು "ಆಹಾರ" ಎಂದು ಉತ್ತರಿಸಿದರು.
ನಂತರ, ಭಾರತೀಯರು ಹಾಗೂ ಆಸ್ಟ್ರೇಲಿಯಾದಲ್ಲಿರುವ ಭಾರತೀಯರಲ್ಲಿ ತಾವು ಕಂಡಿರುವ ಶ್ರಮ ಮತ್ತು ದೃಢ ಸಂಕಲ್ಪವನ್ನು ಮೆಚ್ಚುವುದಾಗಿ ಹೇಳಿದರು. ವ್ಯಾಪಾರ, ಕ್ರೀಡೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಭ್ಯತೆ ಕಾಯ್ದುಕೊಳ್ಳುತ್ತಲೇ ಯಶಸ್ಸು ಗಳಿಸುವ ಬಲವಾದ ಆಕಾಂಕ್ಷೆಯನ್ನು ಭಾರತೀಯರು ಪ್ರದರ್ಶಿಸುತ್ತಾರೆ.
ಬೆಳೆಯುತ್ತಿರುವ ಅರ್ಥವ್ಯವಸ್ಥೆ ಮತ್ತು ಜನಸಂಖ್ಯೆಯ ಕಾರಣದಿಂದ ಭಾರತವು ಜಾಗತಿಕವಾಗಿ ಅತ್ಯಂತ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ.
ಆಸ್ಟ್ರೇಲಿಯಾದ ದೃಷ್ಟಿಕೋನದಿಂದ, ಅಮೆರಿಕ ಮತ್ತು ಚೀನಾ ನಡುವಿನ ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆ ಭಾರತವು ಪ್ರಮುಖ ಕಾರ್ಯತಾಂತ್ರಿಕ ಪಾಲುದಾರನಾಗಿದೆ.
ಮುಂಬರುವ ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ ಎಂದು ಜಾನ್ಸನ್ ನಿರೀಕ್ಷೆ ವ್ಯಕ್ತಪಡಿಸಿದರು.
"ಮುಂದಿನ ಕೆಲವು ವರ್ಷಗಳಲ್ಲಿ ಆಸ್ಟ್ರೇಲಿಯನ್ನರು ಮತ್ತು ಭಾರತೀಯರು ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಇನ್ನಷ್ಟು ಹತ್ತಿರವಾಗಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು.