ಸೋನಮ್ ವಾಂಗ್ಚುಕ್ ರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಅನುಮತಿ

"ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ"

Update: 2026-07-21 13:59 IST

ಸೋನಮ್ ವಾಂಗ್ಚುಕ್ | Photo Credit : PTI 

ಹೊಸದಿಲ್ಲಿ, ಜು. 21: ಕಾಕ್ರೋಚ್ ಜನತಾ ಪಾರ್ಟಿ (CJP) ವಿದ್ಯಾರ್ಥಿ ಚಳವಳಿಗೆ ಬೆಂಬಲ ಸೂಚಿಸಿ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು, ಅವರ ಆಯ್ಕೆಯ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ದೆಹಲಿ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ ಎಂಬ ಬಗ್ಗೆ ಒಮ್ಮತವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠ, ‘‘ನಾವು ಅವರನ್ನು ಅವರ ಆಯ್ಕೆಯ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ದೇಶಿಸುತ್ತಿದ್ದೇವೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿರುವ ಎಲ್ಲ ವೈದ್ಯಕೀಯ ದಾಖಲೆಗಳನ್ನು ತಕ್ಷಣವೇ ಮೇದಾಂತ ಆಸ್ಪತ್ರೆಗೆ ಒದಗಿಸಬೇಕು. ಮೇದಾಂತ ನಿರ್ದೇಶಕರು ರಚಿಸುವ ವೈದ್ಯರ ಸಮಿತಿ ಮುಂದಿನ ಚಿಕಿತ್ಸೆಯನ್ನು ನಿರ್ವಹಿಸಲಿದೆ’’ ಎಂದು ಹೇಳಿತು. ಮಧ್ಯಾಹ್ನದ ವಿರಾಮದ ಬಳಿಕ ಅಧಿಕೃತ ಆದೇಶ ಹೊರಡಿಸುವುದಾಗಿ ಪೀಠ ತಿಳಿಸಿತು.

ವಾಂಗ್ಚುಕ್ ಪರ ಹಿರಿಯ ವಕೀಲ ಅಖಿಲ್ ಸಿಬಲ್, ಪ್ರತಿಭಟನೆಯ ಅವಧಿಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ವೈದ್ಯಕೀಯ ದಾಖಲೆಗಳನ್ನು ಹಸ್ತಾಂತರಿಸಿದರು.

►ಪೊಟ್ಯಾಸಿಯಮ್ ಪ್ರಮಾಣ ಕುಸಿತ

ಅಫಿಡವಿಟ್ಗೆ ಲಗತ್ತಿಸಿದ್ದ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಕರಿಯಾ, ವಾಂಗ್ಚುಕ್ ಅವರ ರಕ್ತದಲ್ಲಿನ ಪೊಟ್ಯಾಸಿಯಮ್ ಪ್ರಮಾಣ ಕುಸಿದಿರುವುದನ್ನು ಉಲ್ಲೇಖಿಸಿದರು.

ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘‘ವೈದ್ಯಕೀಯ ವರದಿಗಳಿಗಿಂತ ಚಿಕಿತ್ಸೆ ನೀಡುತ್ತಿರುವ ವೈದ್ಯರ ವೈದ್ಯಕೀಯ ಮೌಲ್ಯಮಾಪನವೇ ಹೆಚ್ಚು ವಿಶ್ವಾಸಾರ್ಹ’’ ಎಂದು ಹೇಳಿದರು.

ಇದಕ್ಕೆ ನ್ಯಾಯಾಲಯ, ‘‘ಯೂರಿಯಾ ಮತ್ತು ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಿರುವುದು ದೇಹದ ಕಾರ್ಯವೈಖರಿಯಲ್ಲಿ ವ್ಯತ್ಯಯದ ಸೂಚನೆಯಲ್ಲವೇ?’’ ಎಂದು ಪ್ರಶ್ನಿಸಿತು.

ಇದಕ್ಕೆ ವೈದ್ಯರು, ‘‘ಗ್ಲೂಕೋಸ್ ಸೇವನೆ ಇಲ್ಲದಾಗ ದೇಹ ಶಕ್ತಿಗಾಗಿ ಕೊಬ್ಬನ್ನು ಬಳಸುತ್ತದೆ. ಕೊಬ್ಬಿನ ವಿಭಜನೆಯ ಪರಿಣಾಮ ಮೂತ್ರದಲ್ಲಿ ಕೀಟೋನ್ ಗಳು ಕಂಡುಬರುತ್ತವೆ. ದೀರ್ಘಕಾಲದ ಉಪವಾಸದ ಬಳಿಕ ಇಂತಹ ಬದಲಾವಣೆಗಳು ಸಹಜ’’ ಎಂದು ವಿವರಿಸಿದರು.

►ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆ

ವಾಂಗ್ಚುಕ್ ಅವರನ್ನು ಮೇಲ್ವಿಚಾರಣೆ ಮಾಡುತ್ತಿದ್ದ ವೈದ್ಯರಲ್ಲಿ ಒಬ್ಬರು ತಮ್ಮ ಅರ್ಹತೆಗಳ ಬಗ್ಗೆ ವಿವರಿಸಲು ಆರಂಭಿಸಿದಾಗ, ತುಷಾರ್ ಮೆಹ್ತಾ ಮಧ್ಯಪ್ರವೇಶಿಸಿ, ‘‘ನೀವು ವೈದ್ಯಕೀಯ ವಿಷಯದಲ್ಲಿ ಮಾತ್ರ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು. ಅರ್ಜಿದಾರರ ಪರವಾಗಿ ವಾದಿಸಬಾರದು’’ ಎಂದು ಹೇಳಿದರು.

ಎಎಸ್ಜಿ ಚೇತನ್ ಶರ್ಮಾ, ‘‘ಖಾಸಗಿ ವೈದ್ಯರು ತಮ್ಮ ವರದಿಯಲ್ಲಿ ‘ಗಂಭೀರ’ ಎಂದು ಉಲ್ಲೇಖಿಸಿರುವುದು ಆತಂಕಕಾರಿ. ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರೂ ನ್ಯಾಯಾಲಯದಲ್ಲಿದ್ದಾರೆ’’ ಎಂದರು.

ಈ ವೇಳೆ ನ್ಯಾಯಾಲಯ AIIMS ವೈದ್ಯರ ಅಭಿಪ್ರಾಯ ಕೇಳಿತು. ‘‘ವಾಂಗ್ಚುಕ್ ಅವರ ಬಿಳಿ ರಕ್ತಕಣಗಳ ಪ್ರಮಾಣ ಕಡಿಮೆಯಾಗಿದೆ. ಇದು ಸಾಮಾನ್ಯ ಸ್ಥಿತಿ ಅಲ್ಲ. ರೋಗನಿರೋಧಕ ಶಕ್ತಿ ಕುಸಿದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಹಿಮೋಗ್ಲೋಬಿನ್, ಬಿಳಿ ರಕ್ತಕಣಗಳು ಮತ್ತು ಪ್ಲೇಟ್ಲೆಟ್ ಗಳ ಪ್ರಮಾಣವೂ ಸಾಮಾನ್ಯ ಮಟ್ಟದಲ್ಲಿಲ್ಲ’’ ಎಂದು ಅವರು ಹೇಳಿದರು.

AIIMS ನಿರ್ದೇಶಕರು, ‘‘ಪೊಟ್ಯಾಸಿಯಮ್ ಪ್ರಮಾಣ ಕಡಿಮೆಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಾಯಿಯ ಮೂಲಕ ಪೊಟ್ಯಾಸಿಯಮ್ ಪೂರೈಕೆ ನೀಡಲಾಗುತ್ತಿದೆ. ರೋಗನಿರೋಧಕ ಶಕ್ತಿ ಗಮನಾರ್ಹವಾಗಿ ಕುಂದಿರುವುದರಿಂದ ಸೋಂಕಿನ ಅಪಾಯ ಹೆಚ್ಚಿದೆ. ಆದ್ದರಿಂದ ಅವರನ್ನು ಭೇಟಿ ಮಾಡುವವರು ಸಂಪೂರ್ಣ ರಕ್ಷಣಾತ್ಮಕ ಉಡುಪು, ಕ್ಯಾಪ್ ಮತ್ತು ಮುಖವಾಡ ಧರಿಸಬೇಕು’’ ಎಂದು ತಿಳಿಸಿದರು.

►ಮೊಬೈಲ್ ಕಸಿದುಕೊಂಡಿದ್ದಾರೆ: ಸಿಬಲ್ ಆರೋಪ

ಅಖಿಲ್ ಸಿಬಲ್, ವಾಂಗ್ಚುಕ್ ಬರೆದಿರುವ ಪತ್ರವನ್ನು ಸಲ್ಲಿಸಿ, ‘‘ಅವರ ಮೊಬೈಲ್ ಫೋನ್ ಕಸಿದುಕೊಳ್ಳಲಾಗಿದೆ. ಯಾರನ್ನೂ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಭೇಟಿ ಮಾಡಲು ಅನುಮತಿ ಪಡೆದವರನ್ನೂ ಶೋಧನೆ ಹಾಗೂ ಕಣ್ಗಾವಲಿಗೆ ಒಳಪಡಿಸಲಾಗುತ್ತಿದೆ’’ ಎಂದು ಆರೋಪಿಸಿದರು.

‘‘ಇಂದು ಅವರ ಪ್ರಮುಖ ಆರೋಗ್ಯ ಸೂಚಕಗಳು ಸ್ಥಿರವಾಗಿವೆ. ಕೆಲವು ವೈದ್ಯಕೀಯ ಮಾನದಂಡಗಳಲ್ಲಿ ಬದಲಾವಣೆಗಳಿದ್ದರೂ ನಿರಂತರ ಮೇಲ್ವಿಚಾರಣೆ ಮುಂದುವರಿಸಬಹುದು. ಇದಕ್ಕೆ ಯಾವುದೇ ತೊಂದರೆ ಇಲ್ಲ’’ ಎಂದೂ ಅವರು ವಾದಿಸಿದರು.

ವೈದ್ಯರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ನ್ಯಾಯಾಲಯ, ‘‘ನಾವು ತಜ್ಞರಲ್ಲ. ಆದರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ ಎಂಬ ಬಗ್ಗೆ ಒಮ್ಮತವಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಅವರನ್ನು ಅವರ ಆಯ್ಕೆಯ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ದೇಶಿಸುತ್ತಿದ್ದೇವೆ’’ ಎಂದು ತಿಳಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ, ‘‘ಸ್ಥಳಾಂತರಕ್ಕೆ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಅವರನ್ನು ಬಿಡುಗಡೆ ಮಾಡಬಾರದು. ಅವರ ಆರೋಗ್ಯವನ್ನು ಲೆಕ್ಕಿಸದೆ ಹೊರಗೆ ಕರೆದೊಯ್ಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ’’ ಎಂದು ಹೇಳಿದರು.

ಇದಕ್ಕೆ ನ್ಯಾಯಾಲಯ, ‘‘ಆ ವಿಚಾರಗಳನ್ನು ನಾವು ಪರಿಗಣಿಸುವುದಿಲ್ಲ. ಪ್ರತಿಯೊಂದು ವಿಷಯದಲ್ಲೂ ನ್ಯಾಯಾಲಯವನ್ನು ಎಳೆಯಬೇಡಿ’’ ಎಂದು ಸ್ಪಷ್ಟಪಡಿಸಿತು.

ಸಫ್ದರ್ಜಂಗ್ ಆಸ್ಪತ್ರೆಯಿಂದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ದೇಶಿಸಬೇಕೆಂಬ ಮನವಿಯನ್ನು ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಗೀತಾಂಜಲಿ ಆಂಗ್ಮೋ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು.

ಸೋಮವಾರದ ವಿಚಾರಣೆಯಲ್ಲಿ ಸಫ್ದರ್ಜಂಗ್ ಆಸ್ಪತ್ರೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಹಾಗೂ ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳ ಎಲ್ಲ ವೈದ್ಯಕೀಯ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆಂಗ್ಮೋ ಉಲ್ಲೇಖಿಸಿದ್ದ ವೈದ್ಯಕೀಯ ದಾಖಲೆಗಳನ್ನೂ ಸಲ್ಲಿಸುವಂತೆ ಸೂಚಿಸಿತ್ತು. ಸಂಬಂಧಿತ ವೈದ್ಯರು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಆದೇಶಿಸಿತ್ತು.

ಪದೇ ಪದೇ ನಡೆಯುತ್ತಿರುವ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಯುವಜನರ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ (CJP) ಚಳವಳಿಗೆ ಬೆಂಬಲ ಸೂಚಿಸಿ ಸೋನಮ್ ವಾಂಗ್ಚುಕ್ ಜೂನ್ 28ರಂದು ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಜುಲೈ 18ರಂದು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ಮರುದಿನ ಗೀತಾಂಜಲಿ ಆಂಗ್ಮೋ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಚಿಕಿತ್ಸೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಕುಟುಂಬವು ಸಫ್ದರ್ಜಂಗ್ ಆಸ್ಪತ್ರೆಯ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ವಾದಿಸಿದ್ದರು. ವಾಂಗ್ಚುಕ್ ಅವರನ್ನು ಅಕ್ರಮ ಬಂಧನಕ್ಕೆ ಸಮಾನವಾದ ಪರಿಸ್ಥಿತಿಯಲ್ಲಿ ಇರಿಸಲಾಗಿದೆ ಎಂದೂ ಆರೋಪಿಸಿದ್ದರು.

ಜುಲೈ 19ರಂದು ಏಕಸದಸ್ಯ ನ್ಯಾಯಪೀಠ, ಆಸ್ಪತ್ರೆಗೆ ದಾಖಲಿಸುವ ಸರ್ಕಾರದ ಕ್ರಮವು ಅನಿಯಂತ್ರಿತವಲ್ಲ ಎಂದು ಹೇಳಿ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆಂಗ್ಮೋ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯಲ್ಲಿ, ಏಕಸದಸ್ಯ ನ್ಯಾಯಪೀಠದ ಆದೇಶವು ವಾಂಗ್ಚುಕ್ ಅವರ ವೈದ್ಯಕೀಯ ಚಿಕಿತ್ಸೆಯ ಕುರಿತು ತಾವೇ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಲಾಗಿದೆ. ಸಂವಿಧಾನದ 21ನೇ ವಿಧಿಯಡಿ ಬದುಕುವ ಹಕ್ಕಿನಲ್ಲಿ ಚಿಕಿತ್ಸೆ ಪಡೆಯಬೇಕಾದ ಆಸ್ಪತ್ರೆಯನ್ನು ಆಯ್ಕೆ ಮಾಡುವ ಹಕ್ಕೂ ಸೇರಿದೆ. ಅವರ ಒಪ್ಪಿಗೆಯಿಲ್ಲದೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮುಂದುವರಿಸುವುದು ವೈಯಕ್ತಿಕ ಸ್ವಾತಂತ್ರ್ಯ, ದೈಹಿಕ ಸ್ವಾಯತ್ತತೆ ಹಾಗೂ ಪ್ರತಿಭಟಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಜುಲೈ 16ರಂದು ವಿಭಾಗೀಯ ಪೀಠ ನೀಡಿದ್ದ ಆದೇಶವು ಕೇವಲ ಆರೋಗ್ಯ ಮೇಲ್ವಿಚಾರಣೆಗೆ ಮಾತ್ರ ಅವಕಾಶ ನೀಡಿತ್ತು. ಪ್ರತಿಭಟನಾ ಸ್ಥಳದಿಂದ ಅವರನ್ನು ಬಲವಂತವಾಗಿ ಸ್ಥಳಾಂತರಿಸಲು ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿಸಲು ಆ ಆದೇಶ ಅಧಿಕಾರ ನೀಡಿರಲಿಲ್ಲ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ.

ಗೀತಾಂಜಲಿ ಆಂಗ್ಮೋ ಪರವಾಗಿ ವಕೀಲರಾದ ಬಹುಲಿ ಶರ್ಮಾ, ಸುಸಾನ್ ಮಾರಿಯಾ ಮ್ಯಾಥ್ಯೂ, ರಿಧಿ ಅರೋರಾ, ಸೂರ್ಯಾಂಶ್ ಕಿಶನ್ ರಜ್ದಾನ್ ಹಾಗೂ ಯೋಶಿತ್ ಜೈನ್ ವಾದ ಮಂಡಿಸಿದರು. ಕೇಂದ್ರ ಸರ್ಕಾರ, ದಿಲ್ಲಿ ಪೊಲೀಸರು ಹಾಗೂ ಸಫ್ದರ್ಜಂಗ್ ಆಸ್ಪತ್ರೆ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಮತ್ತು ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಆಶಿಶ್ ದೀಕ್ಷಿತ್ ಹಾಜರಿದ್ದರು.

ಸೌಜನ್ಯ: barandbench.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News