West Bengal | ಮಮತಾ ಹುತಾತ್ಮರಿಗೆ ದ್ರೋಹ ಎಸಗಿದ್ದಾರೆ: ದಿಲೀಪ್ ಘೋಷ್ ವಾಗ್ದಾಳಿ
ದಿಲೀಪ್ ಘೋಷ್ | Photo Credit : PTI
ಕೋಲ್ಕತ್ತಾ, ಜು. 21: ಹುತಾತ್ಮರ ದಿನಾಚರಣೆಯನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸುವ ಮೂಲಕ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಯವರು ಹುತಾತ್ಮರು ಮತ್ತು ಅವರ ಕುಟುಂಬಗಳಿಗೆ ದ್ರೋಹ ಎಸಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ಮಂಗಳವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಕೇವಲ ಪ್ರತಿಭಟನೆಯ ವೇದಿಕೆಯಲ್ಲ; ಇದು ಹುತಾತ್ಮರ ವೇದಿಕೆ. ಇಂದು ಅಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಇಡೀ ರಾತ್ರಿ ಏಕೆ ಅಲ್ಲಿ ಕುಳಿತಿದ್ದೀರಿ? ರಾತ್ರಿ ಅಥವಾ ಬೆಳಿಗ್ಗೆ ಪ್ರತಿಭಟನೆ ನಡೆಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಲ್ಲಿ ಯಾರೂ ಇಲ್ಲ. ನೀವು ಹುತಾತ್ಮರಿಗೆ ದ್ರೋಹ ಎಸಗಿದ್ದೀರಿ. ಹುತಾತ್ಮರ ಕುಟುಂಬಗಳ ಸದಸ್ಯರಿಗೂ ದ್ರೋಹ ಎಸಗಿದ್ದೀರಿ. ಈಗ ಸಾರ್ವಜನಿಕರಿಗೂ ದ್ರೋಹ ಮಾಡುತ್ತಿದ್ದೀರಿ. ಅದಕ್ಕಾಗಿಯೇ ನೀವು ಏಕಾಂಗಿಯಾಗಿ ನಿಂತಿದ್ದೀರಿ. ಅದಕ್ಕಾಗಿಯೇ ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದರು.
1993ರ ಜುಲೈ 21ರಂದು ನಡೆದಿದ್ದ ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ದೊರಕಬೇಕಿದ್ದ ಪರಿಹಾರವನ್ನು ನಿರಾಕರಿಸಲಾಗಿದೆ ಎಂದೂ ಅವರು ಆರೋಪಿಸಿದರು.
"ನ್ಯಾಯಾಲಯವು ಹುತಾತ್ಮರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದರೂ, ಅಧಿಕಾರಿಗಳು ಕೇವಲ 2 ಲಕ್ಷ ರೂ. ಮಾತ್ರ ವಿತರಿಸಿದ್ದಾರೆ. ಉಳಿದ ಹಣವನ್ನು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಹುತಾತ್ಮರ ಕುಟುಂಬಗಳಿಗೆ ದ್ರೋಹ ಎಸಗಿರುವುದರಿಂದಲೇ ನೀವು ಇಂದು ಸಂಕಷ್ಟಕ್ಕೆ ಸಿಲುಕಿದ್ದೀರಿ" ಎಂದು ಟೀಕಿಸಿದರು.
"1993ರ ಜುಲೈ 21ರಂದು ನಡೆದಿದ್ದ ಪೊಲೀಸರ ಗೋಲಿಬಾರ್ ಗೆ ಕಾರಣರಾದವರು ಬಳಿಕ ಸಚಿವರು, ಸಂಸದರು ಮತ್ತು ಶಾಸಕರಂತಹ ಅಧಿಕಾರದ ಸ್ಥಾನಗಳಿಗೆ ಏರಿದರು. ಆದರೆ, ಹುತಾತ್ಮರ ಕುಟುಂಬಗಳು ಮಾತ್ರ ನಿರಂತರವಾಗಿ ವಂಚನೆಗೆ ಒಳಗಾಗಿವೆ" ಎಂದು ಅವರು ಆರೋಪಿಸಿದರು.
1993ರಲ್ಲಿ ಎಡರಂಗ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯ ವೇಳೆ ಪೊಲೀಸರ ಗೋಲಿಬಾರ್ ನಲ್ಲಿ 13 ಮಂದಿ ಕಾರ್ಯಕರ್ತರು ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಜುಲೈ 21 ಅನ್ನು ಪಶ್ಚಿಮ ಬಂಗಾಳದಲ್ಲಿ ಪ್ರತಿವರ್ಷ ಹುತಾತ್ಮರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.