Delhi ಗಲಭೆ ಪಿತೂರಿ ಪ್ರಕರಣ | ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಗೆ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್
ಉಮರ್ ಖಾಲಿದ್ , ಶಾರ್ಜೀಲ್ ಇಮಾಮ್ | Photo Credit : PTI
ಹೊಸದಿಲ್ಲಿ: 2020ರ ದಿಲ್ಲಿ ಗಲಭೆ ಪಿತೂರಿ ಪ್ರಕರಣದಲ್ಲಿ JNU ನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ದಿನೇಶ್ ಭಟ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಜನವರಿ 2026ರಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಗೆ ಜಾಮೀನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಹೈಕೋರ್ಟ್ ಉಲ್ಲೇಖಿಸಿತು. ಒಂದು ವರ್ಷದ ಬಳಿಕ ಅಥವಾ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಬಳಿಕ ಮತ್ತೆ ಜಾಮೀನು ಕೋರಬಹುದು ಎಂದು ಸುಪ್ರೀಂ ಕೋರ್ಟ್ ಆಗ ಹೇಳಿತ್ತು.
ಈ ಎರಡೂ ಷರತ್ತುಗಳು ಇನ್ನೂ ಈಡೇರಿಲ್ಲ. ಹೀಗಾಗಿ ಈಗ ಜಾಮೀನು ನೀಡಿದರೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಮಾರ್ಪಡಿಸಿದಂತಾಗುತ್ತದೆ. ಅದಕ್ಕೆ ಹೈಕೋರ್ಟ್‌ಗೆ ಅಧಿಕಾರವಿಲ್ಲ ಎಂದು ವಿಭಾಗೀಯ ಪೀಠ ಹೇಳಿತು.
‘ಮೇಲಿನ ಚರ್ಚೆ ಮತ್ತು ಪ್ರಕರಣಗಳ ಒಟ್ಟಾರೆ ಸತ್ಯಾಂಶಗಳನ್ನು, ವಿಶೇಷವಾಗಿ ಗುಲ್ಫಿಶಾ ಫಾತಿಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪರಿಗಣಿಸಿದಾಗ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ. ಆದ್ದರಿಂದ ಪ್ರಸ್ತುತ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಾಲಯ ಹೇಳಿತು.
ಉಮರ್ ಖಾಲಿದ್ ಮತ್ತು ಇಮಾಮ್ ಗೆ ಹೈಕೋರ್ಟ್ ಜಾಮೀನು ನಿರಾಕರಿಸುತ್ತಿರುವುದು ಇದು ಮೂರನೇ ಬಾರಿ. ಸುಪ್ರೀಂ ಕೋರ್ಟ್ ನ ಇತ್ತೀಚಿನ ಆದೇಶ ಜನವರಿ 2026ರಲ್ಲಿ ಹೊರಬಿದ್ದಿತ್ತು. ಆಗ ಪ್ರಕರಣದ ಐವರು ಆರೋಪಿಗಳಿಗೆ ಜಾಮೀನು ನೀಡಲಾಗಿತ್ತು. ಆದರೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಗೆ ಜಾಮೀನು ನಿರಾಕರಿಸಲಾಗಿತ್ತು.
ಬಳಿಕ ಇಬ್ಬರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಮೊದಲು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜುಲೈ 4ರಂದು ನ್ಯಾಯಾಲಯ ಅವರ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದರಿಂದ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸೈಯದ್ ಇಫ್ತಿಕಾರ್ ಅಂದ್ರಾಬಿ ಅವರ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಜಾಮೀನು ಕೋರಿದ್ದರು. ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು ಜನವರಿ 2026ರ ತೀರ್ಪಿನಲ್ಲಿ ಖಾಲಿದ್ ಮತ್ತು ಇಮಾಮ್‌ಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿತ್ತು.
ಇದು ಪರಿಸ್ಥಿತಿಯಲ್ಲಿ ಬದಲಾವಣೆಗೆ ಸಮಾನವಾಗಿದ್ದು, ಅದರ ಆಧಾರದಲ್ಲಿ ಜಾಮೀನು ನೀಡಬಹುದು ಎಂದು ಖಾಲಿದ್ ಮತ್ತು ಇಮಾಮ್ ಪರ ವಾದಿಸಲಾಯಿತು.
ಆದರೆ, ಬೇರೊಂದು ಪ್ರಕರಣದಲ್ಲಿ ಸಮಾನಾಂತರ ಪೀಠ ನೀಡಿದ ತೀರ್ಪು, ಖಾಲಿದ್ ಮತ್ತು ಇಮಾಮ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದಿಷ್ಟ ತೀರ್ಮಾನಗಳು ಮತ್ತು ನಿರ್ದೇಶನಗಳನ್ನು ಮೀರಲು ಸಾಧ್ಯವಿಲ್ಲ ಎಂದು ಪೊಲೀಸರು ವಾದಿಸಿದರು.
ಉಮರ್ ಖಾಲಿದ್ ಪರ ಹಿರಿಯ ವಕೀಲ ತ್ರಿದೀಪ್ ಪೈಸ್ ವಾದ ಮಂಡಿಸಿದರು. ವಿಚಾರಣೆ ಸದ್ಯದಲ್ಲೇ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ ಖಾಲಿದ್ ಜಾಮೀನು ಪಡೆಯಲು ಅರ್ಹರು ಎಂದು ಅವರು ಹೇಳಿದರು.
ಸೈಯದ್ ಇಫ್ತಿಕಾರ್ ಅಂದ್ರಾಬಿ ಮತ್ತು ತಸ್ಲೀಮ್ ಅಹ್ಮದ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ, ವಿಚಾರಣೆಯಲ್ಲಿನ ವಿಳಂಬದ ಹಿನ್ನೆಲೆಯಲ್ಲಿ ಖಾಲಿದ್ ಗೆ ಜಾಮೀನು ನೀಡಬಹುದು ಎಂದು ತ್ರಿದೀಪ್ ಪೈಸ್ ವಾದಿಸಿದರು.
ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದು, ಅವರಲ್ಲಿ ಬಹುತೇಕರಿಗೆ ಉನ್ನತ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ ಎಂದೂ ಅವರು ತಿಳಿಸಿದರು.
ಶರ್ಜೀಲ್ ಇಮಾಮ್ ಪರ ವಕೀಲ ತಾಲಿಬ್ ಮುಸ್ತಫಾ, ಜನವರಿ 2026ರ ಆದೇಶದಲ್ಲಿ ಇಮಾಮ್ ಮತ್ತು ಖಾಲಿದ್ ಗೆ ಜಾಮೀನು ನಿರಾಕರಿಸುವಾಗ, ವಿಚಾರಣೆಯಲ್ಲಿ ಪ್ರಗತಿಯಿಲ್ಲದೆ ಅವರನ್ನು ದೀರ್ಘಕಾಲ ಬಂಧನದಲ್ಲಿಡುವುದು ಜಾಮೀನು ಕೋರಲು ಆಧಾರವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಎಂದು ಉಲ್ಲೇಖಿಸಿದರು.
ವಿಚಾರಣೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಹೀಗಾಗಿ ಇಮಾಮ್ ಜಾಮೀನು ಪಡೆಯಲು ಅರ್ಹರು ಎಂದು ಅವರು ವಾದಿಸಿದರು.
ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ವಾದ ಮಂಡಿಸಿ, ಪ್ರಕರಣದಲ್ಲಿ ಜಾಮೀನು ಪಡೆದಿರುವ ಇತರ ಆರೋಪಿಗಳ ಪಾತ್ರವನ್ನು ಖಾಲಿದ್ ಮತ್ತು ಇಮಾಮ್ ಅವರ ಪಾತ್ರಕ್ಕೆ ಸಮೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಜನವರಿ 2027ರ ಬಳಿಕ ಅಥವಾ ರಕ್ಷಿತ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರವಷ್ಟೇ ಖಾಲಿದ್ ಮತ್ತು ಇಮಾಮ್ ಮತ್ತೆ ಜಾಮೀನು ಕೋರಬಹುದು ಎಂದು ರಾಜು ತಿಳಿಸಿದರು.