ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ | ABVPಗೆ ಸೋಲು; ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಆಯ್ಕೆ
AISA–ASA–DSU–SFI–TSF ಮೈತ್ರಿಕೂಟಕ್ಕೆ ಗೆಲುವು
ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ AISA–ASA–DSU–SFI–TSF ಮೈತ್ರಿಕೂಟವು ಎಲ್ಲ ಪ್ರಮುಖ ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ ಹಿಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ABVPಯಿಂದ ವಿದ್ಯಾರ್ಥಿ ಸಂಘದ ಅಧಿಕಾರವನ್ನು ಈ ಮೈತ್ರಿಕೂಟ ಮರಳಿ ಪಡೆದುಕೊಂಡಿದೆ.
AISA, ASA, DSU, SFI ಮತ್ತು TSF ಒಳಗೊಂಡ ಮೈತ್ರಿಕೂಟದ ಅಭ್ಯರ್ಥಿ, SFI ನಾಯಕಿ ದಿಲ್ಶಾದಾ ರೈಹಾನ್ ಅವರು 2026ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಮೈತ್ರಿಕೂಟದ ಇತರ ಅಭ್ಯರ್ಥಿಗಳೂ ಪ್ರಮುಖ ಹುದ್ದೆಗಳಲ್ಲಿ ಗೆಲುವು ಸಾಧಿಸಿದ್ದಾರೆ. TSFನ ಕೊರ್ರಾ ನಿತಿನ್ ಚೌಹಾಣ್ ಉಪಾಧ್ಯಕ್ಷರಾಗಿ ಹಾಗೂ ASAನ ಪ್ರತೀಕ್ ಸಾಗರ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. AISAನ ಸಿದ್ಧಾಂತ್ ಅವರು ಜಂಟಿ ಕಾರ್ಯದರ್ಶಿಯಾಗಿ ಜಯಗಳಿಸಿದ್ದಾರೆ.
ABVP–ಸೇವಲಾಲ್ ವಿದ್ಯಾರ್ಥಿ ದಳದಿಂದ ನರೇಶ್ ಪೊಡಿಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. NSUI, ಫ್ರಟರ್ನಿಟಿ ಮೂವ್‌ಮೆಂಟ್, MSF ಮತ್ತು PDSU ಒಳಗೊಂಡ ಮೈತ್ರಿಕೂಟದಿಂದ ಕೆ. ನವೀನ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ, AISA–ASA–DSU–SFI–TSF ಮೈತ್ರಿಕೂಟದ ದಿಲ್ಶಾದಾ ರೈಹಾನ್ ಗೆಲುವು ಸಾಧಿಸಿದ್ದಾರೆ.
ASAನ ಪ್ರತೀಕ್ ಸಾಗರ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ವಿರುದ್ಧ ಇತರ ಮೂರು ಮೈತ್ರಿಕೂಟಗಳಿಂದ ಮುಹಮ್ಮದ್ ಅಫ್ಲಾಹ್ ಕೆ.ಕೆ. ಮತ್ತು ವೆನಿಸಾ ಚೌಧರಿ ಸ್ಪರ್ಧಿಸಿದ್ದರು. ಪ್ರತೀಕ್ ಸಾಗರ್ ಈ ಹುದ್ದೆಯಲ್ಲಿ ಗೆಲುವು ಸಾಧಿಸಿದ್ದಾರೆ.
AISA–ASA–DSU–SFI–TSF ಮೈತ್ರಿಕೂಟವು ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಗೆದ್ದು ವಿದ್ಯಾರ್ಥಿ ಸಂಘದ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.