Photo: PTI

ಹೊಸದಿಲ್ಲಿ: ದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಸುಮಾರು 100 ವರ್ಷಗಳಷ್ಟು ಹಳೆಯ ವಕ್ಫ್ ಖಬರಸ್ಥಾನವನ್ನು ತೆರವುಗೊಳಿಸುವ ಸರಕಾರದ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಖಬರಸ್ಥಾನದ ಈಗಿನ ಸ್ಥಿತಿಯನ್ನೇ ಮುಂದುವರಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಸುಮಾರು 17 ಎಕರೆ ವಿಸ್ತೀರ್ಣದ ಈ ಜಾಗ ಕೇಂದ್ರ ಸರಕಾರಕ್ಕೆ ಸೇರಿದ್ದು ಎಂದು ಹೇಳಿ, ಅಕ್ಟೋಬರ್ 22ರಂದು ಭೂಮಿ ಮತ್ತು ಅಭಿವೃದ್ಧಿ ಕಚೇರಿ (Land and Development Office) ತೆರವು ನೋಟಿಸ್ ನೀಡಿತ್ತು. ಈ ನೋಟಿಸ್ ಪ್ರಶ್ನಿಸಿ ಸ್ಮಶಾನದ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು.

ಲಡ್ಲೋ ಕ್ಯಾಸಲ್ ರಸ್ತೆ ಮತ್ತು ಅಂಡರ್ ಹಿಲ್ ರಸ್ತೆಯ ನಡುವೆ ಈ ಸ್ಮಶಾನವಿದೆ. ಇಲ್ಲಿ ದರ್ಗಾಗಳು, ಮಸೀದಿ ಮತ್ತು ಮದರಸಾ ಕೂಡ ಇವೆ. ‘ಖಬರಿಸ್ತಾನ್ ಬಾಗ್ ಶೇರ್ ಜಂಗ್’ ಎಂಬ ಹೆಸರಿನ ಈ ಸ್ಮಶಾನವನ್ನು 1910ಕ್ಕೂ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಅಂಜುಮನ್ ವಕೀಲ್-ಇ-ಕೌಮ್ ಪಂಜಾಬಿಯಾನ್ ಎಂಬ ಟ್ರಸ್ಟ್ ನಿರ್ವಹಿಸುತ್ತಿದೆ.

ನ್ಯಾಯಾಲಯವು 2027ರ ಮಾರ್ಚ್ 11ರಂದು ಮುಂದಿನ ವಿಚಾರಣೆ ನಡೆಯುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.

ಸರಕಾರದ ನೋಟಿಸ್‌ನಲ್ಲಿ ಏನಿತ್ತು?

ಅಕ್ಟೋಬರ್ 22ರಂದು ನೀಡಿದ ನೋಟಿಸ್‌ನಲ್ಲಿ ಸ್ಮಶಾನದ ಜಾಗದಲ್ಲಿರುವ ನಾಲ್ವರನ್ನು ಅತಿಕ್ರಮಣಕಾರರು ಎಂದು ಉಲ್ಲೇಖಿಸಲಾಗಿತ್ತು. 15 ದಿನಗಳೊಳಗೆ ಜಾಗ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಬಲವಂತವಾಗಿ ಸ್ವಾಧೀನ ಪಡೆಯುವುದಾಗಿ ಸರಕಾರ ಎಚ್ಚರಿಸಿತ್ತು.

2018ರಲ್ಲಿ ಸ್ಮಶಾನದ ಆಡಳಿತ ಮಂಡಳಿ ಸಲ್ಲಿಸಿದ್ದ ಸಿವಿಲ್ ಪ್ರಕರಣದಲ್ಲಿ ಈ ನಾಲ್ವರನ್ನು ಸ್ಮಶಾನದ ಒಂದು ಭಾಗದಲ್ಲಿ ಅತಿಕ್ರಮಣ ಮಾಡಿದವರು ಎಂದು ಘೋಷಿಸಲಾಗಿತ್ತು. ಆದರೆ, ಇಡೀ 17 ಎಕರೆ ಜಾಗ ಕೇಂದ್ರ ಸರಕಾರಕ್ಕೆ ಸೇರಿದೆ ಎಂಬ ಹೊಸ ನೋಟಿಸ್‌ನಲ್ಲಿನ ಹೇಳಿಕೆಯನ್ನು ಆಡಳಿತ ಮಂಡಳಿ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor