ಜೆನೆರಿಕ್ ಔಷಧಿಗಳ ಆಮದಿನ ಮೇಲೆ ಹಂತಹಂತವಾಗಿ ಸುಂಕ ವಿಧಿಸುವ ನಿಯಮ ಘೋಷಿಸಿದ ಡೊನಾಲ್ಡ್ ಟ್ರಂಪ್
Photo: x.com/CNNnews18
ವಾಷಿಂಗ್ಟನ್ ಡಿ.ಸಿ. : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ ಮೇಲೆ ಹಂತಹಂತವಾಗಿ ಸುಂಕ ವಿಧಿಸುವ ನಿಯಮವನ್ನು ಘೋಷಿಸಿದ್ದು, ಅವು ಎರಡು ವರ್ಷಗಳ ಕಾಲ ಅಮೆರಿಕಕ್ಕೆ ಜೆನೆರಿಕ್ ಔಷಧಿ ಸುಂಕ ರಹಿತವಾಗಿ ಪ್ರವೇಶಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ. ಬಳಿಕ ಒಂದು ವರ್ಷದ ಅವಧಿಗೆ ಸುಂಕವನ್ನು ಶೇ. 100ಕ್ಕೆ ಮತ್ತು ನಂತರ ಶೇ. 200ಕ್ಕೆ ಹೆಚ್ಚಿಸಲಾಗುವುದು. ಜೆನೆರಿಕ್ ಔಷಧಗಳನ್ನು ದೇಶೀಯವಾಗಿಯೇ ತಯಾರಿಸಲು ಕಂಪನಿಗಳನ್ನು ಪ್ರೋತ್ಸಾಹಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಬಗ್ಗೆ ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿರುವ ಅವರು, ಆಗಸ್ಟ್ 1, 2026ರಿಂದ ಜಾರಿಗೆ ಬರುವಂತೆ, ಅಮೆರಿಕಕ್ಕೆ ತರಲಾಗುವ ಎಲ್ಲಾ ಜೆನೆರಿಕ್ ಔಷಧಗಳ ಮೇಲೆ ಎರಡು ವರ್ಷಗಳ ಕಾಲ ಶೇ. 0ರಷ್ಟು ಸುಂಕ ಮುಂದುವರಿಯಲಿದೆ. ಅದಾದ ನಂತರ ಒಂದು ವರ್ಷದ ಅವಧಿಗೆ ಸುಂಕವನ್ನು ಶೇ. 100ಕ್ಕೆ ಮತ್ತು ಆ ಬಳಿಕ ಶೇ. 200ಕ್ಕೆ ಹೆಚ್ಚಿಸಲಾಗುವುದು. ಜೆನೆರಿಕ್ ಔಷಧ ತಯಾರಿಕೆಯನ್ನು ಅಮೆರಿಕದಲ್ಲಿಯೇ ಮರುಸ್ಥಾಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೀಡಿರುವ ನಿಗದಿತ ಅವಧಿಯಲ್ಲಿ ಕಂಪನಿಗಳು ಇಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸದಿದ್ದರೆ ಅವರಿಗೆ ದಂಡ ವಿಧಿಸಲಾಗುವುದು. ಅಮೆರಿಕದ ಜನರನ್ನು ರಕ್ಷಿಸುವುದೇ ಈ ನೀತಿಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
"ಪೇಟೆಂಟ್ ಪಡೆದ, ಬ್ರಾಂಡೆಡ್ ಅಥವಾ ಹೊಸ ಮಾದರಿಯ ಔಷಧಗಳ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಲ್ಲದೆ, ಅಮೆರಿಕದಾದ್ಯಂತ ಈ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಔಷಧ ಉತ್ಪಾದನಾ ಘಟಕಗಳು ನಿರ್ಮಾಣಗೊಳ್ಳುತ್ತಿವೆ" ಎಂದು ಟ್ರಂಪ್ ತಿಳಿಸಿದ್ದಾರೆ.
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾಹಿತಿಯ ಪ್ರಕಾರ, ಅಮೆರಿಕದಲ್ಲಿ ನೀಡಲಾಗುವ ಶೇಕಡಾ 90ಕ್ಕಿಂತ ಹೆಚ್ಚು ಪ್ರಿಸ್ಕ್ರಿಪ್ಷನ್‌ಗಳಲ್ಲಿ ಜೆನೆರಿಕ್ ಔಷಧಗಳೇ ಇರುತ್ತವೆ.
ಅಮೆರಿಕದಲ್ಲಿ ಔಷಧ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ತಮ್ಮ ಮೋಸ್ಟ್-ಫೇವರ್ಡ್-ನೇಷನ್ ಬೆಲೆ ನೀತಿಯ ಮೂಲಕ ಔಷಧಗಳ ಬೆಲೆಗಳನ್ನು ಕಡಿಮೆ ಮಾಡುವ ಭಾಗವಾಗಿ ಈ ಘೋಷಣೆ ಹೊರಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ವರ್ಷ, ಪ್ರಮುಖ ಔಷಧ ತಯಾರಕರು ಅಮೆರಿಕ ಸರ್ಕಾರದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡ ಬಳಿಕ ಶತಕೋಟಿ ಡಾಲರ್ ಮೌಲ್ಯದ ಔಷಧಗಳನ್ನು ಸುಂಕದಿಂದ ವಿನಾಯಿತಿ ನೀಡಲಾಗಿತ್ತು.