Photo Credit : indianexpress.com

ಚುನಾವಣಾ ಆಯೋಗವು ನಾನು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಸ್ಥೆ. ಅದರ ಸಾಮರ್ಥ್ಯಗಳು ನನಗೆ ತಿಳಿದಿವೆ. ನಮ್ಮ ಸಂವಿಧಾನದ ಶ್ರೇಷ್ಠ ಕೊಡುಗೆಗಳಲ್ಲಿ ಒಂದೆಂದು ನಾನು ಹಲವು ಬಾರಿ ಹೇಳಿದ್ದೇನೆ. ಹೀಗಾಗಿ, ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಕುರಿತು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಟೀಕಾತ್ಮಕವಾಗಿ ಬರೆಯುವಾಗಲೂ, ಸ್ವಲ್ಪ ಹಿಂಜರಿಕೆಯಿಂದಲೇ ಬರೆದಿದ್ದೇನೆ.

ಆದರೆ, ‘The Indian Express’ನಲ್ಲಿ ಇಂದು ಪ್ರಕಟವಾಗಿರುವ ಮಾಹಿತಿಯ ಬಳಿಕ, SIR ಕುರಿತು ನಾನು ಸಾಕಷ್ಟು ಟೀಕೆ ಮಾಡಿದ್ದೇನೆಯೇ ಎಂಬ ಅನುಮಾನ ನನಗೆ ಮೂಡಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಾನು SIRನ ಹಲವು ಅಂಶಗಳನ್ನು ಟೀಕಿಸಿದ್ದೇನೆ. ಅದರ ಹೊಸ ಸ್ವರೂಪ, ಮತದಾರರ ಮೇಲೆ ದಾಖಲೆಗಳನ್ನು ಒದಗಿಸುವ ಹೊರೆ, ಮತದಾರರ ಗುರುತಿನ ಚೀಟಿ (EPIC) ನಿರ್ವಹಣೆ, ಮತದಾರರ ಹೆಸರುಗಳನ್ನು ತೆಗೆದುಹಾಕುವುದಕ್ಕೆ ನೀಡಲಾಗುತ್ತಿರುವ ಒತ್ತು ಹಾಗೂ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಆಘಾತಕಾರಿ ಸಂಖ್ಯೆಗಳು; ಇವೆಲ್ಲವೂ ನನ್ನ ಟೀಕೆಯ ವಿಷಯಗಳಾಗಿದ್ದವು.

ನಾನು ಈ ಟೀಕೆಗಳನ್ನು ಸ್ವಲ್ಪ ಹಿಂಜರಿಕೆಯಿಂದಲೇ ಮಾಡಿದ್ದೆ. ಏಕೆಂದರೆ, ಚುನಾವಣಾ ಆಯೋಗವು ನಾನು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಸ್ಥೆ. ಅದರ ಸಾಮರ್ಥ್ಯಗಳು ನನಗೆ ಗೊತ್ತಿವೆ. ನಮ್ಮ ಸಂವಿಧಾನದ ಶ್ರೇಷ್ಠ ಕೊಡುಗೆಗಳಲ್ಲಿ ಒಂದೆಂದು ನಾನು ಅದನ್ನು ಹಲವು ಬಾರಿ ಉಲ್ಲೇಖಿಸಿದ್ದೇನೆ.

ಆದರೆ, ‘The Indian Express’ನ ತನಿಖಾ ವರದಿಯು ಈಗ ಇನ್ನೊಂದು ಗಂಭೀರ ವಿಷಯವನ್ನು ಮುಂದಿಟ್ಟಿದೆ.

ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ತಮ್ಮ ಗಮನಕ್ಕೆ ಬಾರದೆ ತೆಗೆದುಕೊಳ್ಳಲಾದ ನಿರ್ಧಾರಗಳು ಮತ್ತು ಹೊರಡಿಸಲಾದ ಆದೇಶಗಳ ವಿರುದ್ಧ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆ ದಾಖಲಿಸಿದ್ದಾರೆ.

ಅವರ ಆಕ್ಷೇಪಣೆಗಳು ಚುನಾವಣಾ ಆಯೋಗದ ಮೂಲಭೂತ ಕಾರ್ಯಗಳಿಗೆ ಸಂಬಂಧಿಸಿದ್ದವು.

• ಮತದಾರರ ನೋಂದಣಿ ಮತ್ತು ಹೆಸರುಗಳನ್ನು ಕೈಬಿಡುವುದು;

• ಹೆಸರುಗಳನ್ನು ಮರುಸೇರ್ಪಡೆಗೊಳಿಸುವುದು

• ನಮೂನೆ 6 (Form 6)

• ಮತದಾರರ ಪಟ್ಟಿಗೆ ಸಂಬಂಧಿಸಿದ ಪ್ರಕರಣಗಳಲ್ಲಿನ ಮೇಲ್ಮನವಿಗಳು

• ಮತದಾರರ ಪಟ್ಟಿಯ ಡಿಜಿಟಲ್ ವ್ಯವಸ್ಥೆಯ ಮೇಲಿನ ನಿಯಂತ್ರಣ.

ಈ ದಾಖಲೆಗಳು ವರದಿಯಾಗಿರುವಂತೆಯೇ ನಿಜವಾಗಿದ್ದರೆ, SIR ಕುರಿತ ವಿವಾದದ ಸ್ವರೂಪವೇ ಬದಲಾಗುತ್ತದೆ.

ಈಗ ಪ್ರಶ್ನೆ ಕೇವಲ SIR ವಿವೇಚನಾಯುಕ್ತವಾಗಿತ್ತೇ, ನ್ಯಾಯಯುತವಾಗಿತ್ತೇ ಅಥವಾ ಆಡಳಿತಾತ್ಮಕವಾಗಿ ಸರಿಯಾಗಿತ್ತೇ? ಎಂಬುದಲ್ಲ.

ಅದಕ್ಕಿಂತ ಮುಖ್ಯವಾದ ಪ್ರಶ್ನೆ, ಚುನಾವಣಾ ಆಯೋಗವೇ ಈ ನಿರ್ಧಾರಗಳನ್ನು ತೆಗೆದುಕೊಂಡಿತೇ? ಅಥವಾ ಆಯೋಗದ ಬಹುಮತದ ಗಮನಕ್ಕೆ ಬಾರದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆಯೇ? ಹಾಗಿದ್ದರೆ, ಅಂತಹ ನಿರ್ಧಾರಗಳಿಗೆ ಕಾನೂನುಬದ್ಧ ಮಾನ್ಯತೆ ಇದೆಯೇ?

ಈ ಪ್ರಶ್ನೆಗೆ ಉತ್ತರ ಹುಡುಕಲು ಚುನಾವಣಾ ಆಯೋಗದ ರಚನೆ ಮತ್ತು ಅದರ ನಿರ್ಧಾರ ತೆಗೆದುಕೊಳ್ಳುವ ವಿಧಾನವನ್ನು ನೋಡಬೇಕು.

‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವೆಯ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ, 2023’ರ ಸೆಕ್ಷನ್ 18(2)ರ ಪ್ರಕಾರ, ಆಯೋಗದ ಎಲ್ಲ ಕಾರ್ಯಕಲಾಪಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ನಡೆಸಬೇಕು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿದ್ದರೆ, ಆ ವಿಚಾರವನ್ನು ಬಹುಮತದ ಅಭಿಪ್ರಾಯದ ಆಧಾರದಲ್ಲಿ ನಿರ್ಧರಿಸಬೇಕು.

ಸೆಕ್ಷನ್ 18(1) ಕೂಡ ಆಯೋಗದ ವ್ಯವಹಾರ ಮತ್ತು ಕಾರ್ಯ ಹಂಚಿಕೆಯ ವಿಧಾನವನ್ನು ಸರ್ವಾನುಮತದ ನಿರ್ಧಾರದ ಮೂಲಕವೇ ನಿಯಂತ್ರಿಸಬೇಕು ಎಂದು ಹೇಳುತ್ತದೆ.

ಅರ್ಥ ಸರಳವಾಗಿದೆ: ಮೊದಲು ಒಮ್ಮತಕ್ಕೆ ಪ್ರಯತ್ನಿಸಬೇಕು. ಒಮ್ಮತ ಸಾಧ್ಯವಾಗದಿದ್ದರೆ ಬಹುಮತದ ನಿರ್ಧಾರ ಜಾರಿಯಾಗಬೇಕು.

ಏಕಪಕ್ಷೀಯ ನಿರ್ಧಾರಕ್ಕೆ ಈ ವ್ಯವಸ್ಥೆಯಲ್ಲಿ ಸ್ಥಾನವಿಲ್ಲ.

ಈ ತತ್ವವು 2023ರ ಕಾಯಿದೆಯೊಂದಿಗೆ ಆರಂಭವಾದದ್ದಲ್ಲ. 1995ರ ಟಿ.ಎನ್. ಶೇಷನ್ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ 324ನೇ ವಿಧಿಯು ಚುನಾವಣೆಯ ಜವಾಬ್ದಾರಿಯನ್ನು ಒಬ್ಬ ವ್ಯಕ್ತಿಗೆ ಅಲ್ಲ, ಚುನಾವಣಾ ಆಯೋಗಕ್ಕೆ ವಹಿಸುತ್ತದೆ ಎಂದು ಒತ್ತಿಹೇಳಿತ್ತು.

ನ್ಯಾಯಾಲಯದ ಎಚ್ಚರಿಕೆ ಸ್ಪಷ್ಟವಾಗಿತ್ತು: “ಒಬ್ಬ ವ್ಯಕ್ತಿಯನ್ನು ಮುನ್ನೆಲೆಗೆ ತಂದು, ಚುನಾವಣಾ ಆಯೋಗದ ಸ್ವರೂಪವನ್ನು ಮರೆಮಾಡುವುದು ಸರಿಯಲ್ಲ.” ಈ ಮಾತು ಇಂದಿನ ಪರಿಸ್ಥಿತಿಯಲ್ಲಿ ವಿಶೇಷ ಮಹತ್ವ ಪಡೆಯುತ್ತದೆ.

ಇದು ಕೇವಲ ಒಬ್ಬ ಚುನಾವಣಾ ಆಯುಕ್ತರು ಉಳಿದ ಇಬ್ಬರಿಗಿಂತ ಭಿನ್ನವಾದ ಅಭಿಪ್ರಾಯ ಹೊಂದಿರುವ ಸಾಮಾನ್ಯ ಪರಿಸ್ಥಿತಿಯಲ್ಲ.

ಇಲ್ಲಿ ಮೂವರು ಸದಸ್ಯರ ಪೈಕಿ ಇಬ್ಬರು ಚುನಾವಣಾ ಆಯುಕ್ತರು, ಅಂದರೆ ಆಯೋಗದ ಬಹುಮತ, ತಮ್ಮೊಂದಿಗೆ ಚರ್ಚಿಸದೆ ಮತ್ತು ತಮ್ಮ ಗಮನಕ್ಕೆ ತರದೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಕ್ಷೇಪಿಸಿದ್ದಾರೆ. ಅವರ ಆಕ್ಷೇಪಣೆಗಳ ಪ್ರಕಾರ, ಆ ನಿರ್ಧಾರಗಳ ಬಗ್ಗೆ ಅವರಿಗೆ ಮತ ಚಲಾಯಿಸುವ ಅವಕಾಶವೇ ದೊರೆಯಲಿಲ್ಲ.

ಅಂದರೆ, ಆಯೋಗದ ಬಹುಮತದ ಅಭಿಪ್ರಾಯವನ್ನು ಪರಿಗಣಿಸದೇ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಇದು ಅತ್ಯಂತ ಮೂಲಭೂತವಾದ ಸಮಸ್ಯೆ.

ಇಬ್ಬರು ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರಿಗಿಂತ ಭಿನ್ನವಾದ ಅಭಿಪ್ರಾಯ ಹೊಂದಿದ್ದರೆ, ಸೆಕ್ಷನ್ 18ರ ಪ್ರಕಾರ ಬಹುಮತದ ಅಭಿಪ್ರಾಯವೇ ನಿರ್ಣಾಯಕವಾಗಬೇಕು. ಆದರೆ ಇಬ್ಬರು ಆಯುಕ್ತರನ್ನೇ ನಿರ್ಧಾರ ಪ್ರಕ್ರಿಯೆಯಿಂದ ಹೊರಗಿಡಲಾಗಿದ್ದರೆ, ಬಹುಮತದ ವ್ಯವಸ್ಥೆಯ ಉದ್ದೇಶವೇ ಕುಸಿಯುತ್ತದೆ.

‘ಚುನಾವಣಾ ಆಯೋಗ’ದ ಹೆಸರಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಕಾರಣಕ್ಕೆ ಮಾತ್ರ ಅದು ಚುನಾವಣಾ ಆಯೋಗದ ನಿರ್ಧಾರವಾಗುವುದಿಲ್ಲ.

ಆ ನಿರ್ಧಾರವನ್ನು ಆಯೋಗದ ಮುಂದೆ ಮಂಡಿಸಲಾಗಿದೆಯೇ? ಕಾನೂನುಬದ್ಧ ಕಾರ್ಯ ಹಂಚಿಕೆಯ ವ್ಯವಸ್ಥೆಯಂತೆ ತೆಗೆದುಕೊಳ್ಳಲಾಗಿದೆಯೇ? ಅಗತ್ಯವಿದ್ದಲ್ಲಿ ಬಹುಮತದ ಅಭಿಪ್ರಾಯ ಪಡೆಯಲಾಗಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರ ಬೇಕಾಗುತ್ತದೆ.

ಇಲ್ಲದಿದ್ದರೆ, ಅಂತಹ ನಿರ್ಧಾರದ ಕಾನೂನುಬದ್ಧತೆಯೇ ಪ್ರಶ್ನಾರ್ಹವಾಗುತ್ತದೆ.

ಶಾಸನವು ಕೇವಲ ಲೆಟರ್ ಹೆಡ್ ಗೆ ಅಧಿಕಾರ ನೀಡುವುದಿಲ್ಲ.

ಚುನಾವಣಾ ಆಯೋಗವು ಮೂವರು ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಸಂಸ್ಥೆ. ಮುಖ್ಯ ಚುನಾವಣಾ ಆಯುಕ್ತರೊಬ್ಬರೇ ಆಯೋಗವಲ್ಲ.

Form 6ರ ವಿವಾದ ಈ ಸಮಸ್ಯೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿರುವ Form 6 ಅನ್ನು ನಿಯಮಗಳಿಗೆ ತಿದ್ದುಪಡಿ ಮಾಡದೆ SIR ನಿರ್ದೇಶನದ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯುಕ್ತ ವಿವೇಕ್ ಜೋಶಿ ಅವರು ಮೇ ತಿಂಗಳಲ್ಲಿ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ಆಯುಕ್ತ ಸುಖ್ಬೀರ್ ಸಿಂಗ್ ಸಂಧು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು.

ಆದರೂ ಬದಲಾಯಿಸಲಾದ Form 6 ECINetನಲ್ಲಿ ಕಾಣಿಸಿಕೊಂಡಿತು.

ಆಗಸ್ಟ್ ನಲ್ಲಿ ಸಂಧು ಆ ಬದಲಾವಣೆಯನ್ನು “ಅನಧಿಕೃತ/ಕಾನೂನುಬಾಹಿರ” ಎಂದು ಕರೆದರು ಮತ್ತು ಅದನ್ನು ತಕ್ಷಣ ತೆಗೆದುಹಾಕಲು ಪ್ರಯತ್ನಿಸಿದರು.

ಇಲ್ಲಿ ಕೇವಲ ಒಮ್ಮತದ ಕೊರತೆ ಇರಲಿಲ್ಲ. ಬದಲಾವಣೆಯ ವಿರುದ್ಧ ಇಬ್ಬರು ಆಯುಕ್ತರ ಅಭಿಪ್ರಾಯ ಈಗಾಗಲೇ ದಾಖಲಾಗಿತ್ತು.

ECINet ಕುರಿತು ಹೊರಬಂದಿರುವ ಮಾಹಿತಿಯೂ ಇದೇ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಹೆಸರು ತೆಗೆದುಹಾಕುವುದು ಮತ್ತು ತಿದ್ದುಪಡಿ ಮಾಡುವ ಶಾಸನಬದ್ಧ ಅಧಿಕಾರ ಚುನಾವಣಾ ನೋಂದಣಿ ಅಧಿಕಾರಿಗೆ ಇದೆ.

ಆದರೂ, ಮತದಾರರ ಪಟ್ಟಿಯ ಡೇಟಾಬೇಸ್ ನ ನಿಯಂತ್ರಣವನ್ನು ದಿಲ್ಲಿಯಲ್ಲಿ ಕೇಂದ್ರೀಕರಿಸಲಾಗುತ್ತಿದೆ ಎಂದು ಇಬ್ಬರು ಆಯುಕ್ತರು ಪದೇ ಪದೇ ಎಚ್ಚರಿಸಿದ್ದಾರೆ. ಡೇಟಾಬೇಸ್ನ ಸುರಕ್ಷತೆಗಾಗಿ ಸ್ವತಂತ್ರ ತಾಂತ್ರಿಕ ಲೆಕ್ಕಪರಿಶೋಧನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಗೋವಾದಲ್ಲಿ 97 ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ಬಳಿಕ, ಅವರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಅವರು ಅರ್ಹರು ಎಂದು EROಗಳು ಗುರುತಿಸಿದ್ದರು. ಆದರೆ, ಸಾಫ್ಟ್ವೇರ್ ನಲ್ಲಿ ಅವರ ಹೆಸರುಗಳನ್ನು ಮರುಸೇರ್ಪಡೆಗೊಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ತಂತ್ರಜ್ಞಾನವು ಕಾನೂನನ್ನು ಬದಲಾಯಿಸಲು ಸಾಧ್ಯವಿಲ್ಲ. ಕಂಪ್ಯೂಟರ್ ಪ್ರೋಗ್ರಾಂಗೆ ಶಾಸನಬದ್ಧ ಅಧಿಕಾರ ಹೊಂದಿರುವ ಅಧಿಕಾರಿಯ ಅಧಿಕಾರವನ್ನು ರದ್ದುಗೊಳಿಸಲು ಸಾಧ್ಯವಿಲ್ಲ.

ಪಶ್ಚಿಮ ಬಂಗಾಳದಲ್ಲಿಯೂ ಇದೇ ರೀತಿಯ ಪ್ರಶ್ನೆಗಳು ಎದುರಾಗಿವೆ.

ನ್ಯಾಯಮಂಡಳಿಗಳ ಮುಂದೆ ಸಲ್ಲಿಸಲಾದ 38.31 ಲಕ್ಷ ಮೇಲ್ಮನವಿಗಳ ಪೈಕಿ 22.21 ಲಕ್ಷ ಮತದಾರರು ತಮ್ಮ ಹೆಸರುಗಳನ್ನು ಮರುಸ್ಥಾಪಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನೂ 16.10 ಲಕ್ಷ ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ.

ಈ ಮೇಲ್ಮನವಿಗಳನ್ನು “ECI ಪರವಾಗಿ” ಸಲ್ಲಿಸಲು ಅಧಿಕಾರ ನೀಡಿದವರು ಯಾರು? ಎಂದು ಸಂಧು ಪ್ರಶ್ನಿಸಿದ್ದಾರೆ. ಇಂತಹ ಮೇಲ್ಮನವಿಗಳ ಬಗ್ಗೆ ತಮಗಾಗಲೀ ಜೋಶಿ ಗಾಗಲೀ ಮಾಹಿತಿ ಇರಲಿಲ್ಲ ಎಂದು ಅವರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಸಾಂವಿಧಾನಿಕ ಸಂಸ್ಥೆಯ ಬಹುಮತವೇ, ತನ್ನ ಹೆಸರಿನಲ್ಲಿ ನ್ಯಾಯಾಂಗ ಪ್ರಕ್ರಿಯೆ ನಡೆಸಲು ಯಾರಿಗೆ ಅಧಿಕಾರ ನೀಡಲಾಗಿದೆ ಎಂದು ಪ್ರಶ್ನಿಸುವ ಪರಿಸ್ಥಿತಿ ಎದುರಾದಾಗ, ಅದನ್ನು ಕೇವಲ ಆಡಳಿತಾತ್ಮಕ ವಿಚಾರ ಎಂದು ಪರಿಗಣಿಸಲಾಗುವುದಿಲ್ಲ.

ಇಲ್ಲಿ ವೈಯಕ್ತಿಕ ವಿಚಾರವೊಂದನ್ನೂ ಹೇಳಬೇಕಾಗಿದೆ.

ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಗೆ ನಾನು ಕ್ಷಮೆ ಕೇಳಬೇಕಾಗಿದೆ. ನಾನು ಸಾರ್ವಜನಿಕವಾಗಿ ಹೇಳಿದ ಯಾವುದಕ್ಕೂ ಅಲ್ಲ; ಖಾಸಗಿಯಾಗಿ ಅವರ ಬಗ್ಗೆ ಮಾಡಿಕೊಂಡಿದ್ದ ಕೆಲವು ಅನಿಸಿಕೆಗಳಿಗಾಗಿ.

SIR ವಿವಾದದ ಸಂದರ್ಭದಲ್ಲಿ ಚುನಾವಣಾ ಆಯೋಗವು ಬಹುತೇಕ ಒಂದೇ ರೀತಿಯ ಸಾರ್ವಜನಿಕ ನಿಲುವು ಹೊಂದಿರುವಂತೆ ಕಾಣಿಸುತ್ತಿತ್ತು. ಆಗ ಈ ಇಬ್ಬರು ಆಯುಕ್ತರು ಅಗತ್ಯಕ್ಕಿಂತ ಹೆಚ್ಚು ಮೌನವಾಗಿದ್ದಾರೆಯೇ? ಅವರ ಮೌನವೇ ತಮ್ಮ ಸಹಮತದ ಸೂಚನೆಯೇ? ಎಂಬ ಅನುಮಾನ ನನಗೆ ಕೆಲವೊಮ್ಮೆ ಮೂಡಿತ್ತು.

ಆದರೆ, ಇಂದಿನ ವರದಿ ಅದಕ್ಕೆ ವಿರುದ್ಧವಾದ ಚಿತ್ರವನ್ನು ನೀಡುತ್ತದೆ.

ಅವರು ಒಳಗಿನಿಂದಲೇ ಆಕ್ಷೇಪಣೆಗಳನ್ನು ದಾಖಲಿಸುತ್ತಿದ್ದರು, ನಿರ್ಧಾರಗಳನ್ನು ಪ್ರಶ್ನಿಸುತ್ತಿದ್ದರು, ಮತದಾರರ ಡೇಟಾಬೇಸ್ ನ ಸುರಕ್ಷತೆಗಾಗಿ ಕ್ರಮಗಳನ್ನು ಕೇಳುತ್ತಿದ್ದರು. ಸಾಂಸ್ಥಿಕ ಪ್ರಕ್ರಿಯೆ ಉಲ್ಲಂಘನೆಯಾಗಿದೆ ಎಂದು ಭಾವಿಸಿದ ಸಂದರ್ಭಗಳಲ್ಲಿ ಅವರು ಕ್ಯಾಬಿನೆಟ್ ಕಾರ್ಯದರ್ಶಿಯನ್ನೂ ಸಂಪರ್ಕಿಸಿದ್ದರು ಎಂದು ವರದಿಯಾಗಿದೆ.

ಅವರು ಸಾರ್ವಜನಿಕವಾಗಿ ಮಾತನಾಡಬೇಕಿತ್ತೇ ಎಂಬ ಪ್ರಶ್ನೆಯನ್ನು ಇನ್ನೂ ಕೇಳಬಹುದು. ಆದರೆ ದಾಖಲೆಗಳಲ್ಲಿ ದಾಖಲಾದ ಆತ್ಮಸಾಕ್ಷಿಯ ಧ್ವನಿಯೂ ಆತ್ಮಸಾಕ್ಷಿಯ ಧ್ವನಿಯೇ.

ಈ ಬೆಳವಣಿಗೆಗಳಿಂದ ನನ್ನ ಹಿಂದಿನ ಕೆಲವು ಟೀಕೆಗಳು ಸರಿಯಾಗಿದ್ದವು ಎಂದು ಸಾಬೀತಾಗಿದೆ ಎಂಬ ಸಂತೋಷ ನನಗಿಲ್ಲ.

ಬಿಹಾರದಲ್ಲಿ SIR ಆರಂಭವಾದಾಗಿನಿಂದ ನಾನು ಅದರ ಹಲವು ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆ. ಅವುಗಳೆಂದರೆ:

• ಎಲ್ಲ ಅರ್ಹ ಮತದಾರರನ್ನು ಒಳಗೊಳ್ಳುವ ಚುನಾವಣಾ ಆಯೋಗದ ಹಿಂದಿನ ಪರಂಪರೆಯಿಂದ SIR ಹಿಂದೆ ಸರಿದಿರುವುದು

• ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಸ್ಪಷ್ಟತೆಯ ಕೊರತೆ

• ಮತದಾರರ ಗುರುತಿನ ಚೀಟಿ (EPIC) ನಿರ್ವಹಿಸುವ ರೀತಿಯಲ್ಲಿನ ಸಮಸ್ಯೆಗಳು

• ಮತದಾರರ ಮೇಲೆ ಹೇರಲಾಗಿರುವ ದಾಖಲೆಗಳನ್ನು ಸಲ್ಲಿಸುವ ಹೊರೆ

• ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಸಾಮಾನ್ಯ ಪ್ರಮಾಣದ ಮತದಾರರ ಇಳಿಕೆ.

ಈ ಪ್ರಶ್ನೆಗಳನ್ನು ಕೆಲವೊಮ್ಮೆ ಹೊರಗಿನಿಂದ ಬಂದ ಟೀಕೆ ಎಂದು ತಳ್ಳಿಹಾಕಲಾಗಿತ್ತು.

ಆದರೆ ಈಗ, ಇದೇ ರೀತಿಯ ಪ್ರಶ್ನೆಗಳನ್ನು ಚುನಾವಣಾ ಆಯೋಗದೊಳಗೇ ಇಬ್ಬರು ಆಯುಕ್ತರು ಎತ್ತುತ್ತಿದ್ದರು ಎಂಬುದು ನಮಗೆ ತಿಳಿದಿದೆ.

ಇದೇ ಈ ವರದಿಯ ನಿಜವಾದ ಮಹತ್ವ.

ಈಗ ಚುನಾವಣಾ ಆಯೋಗ ಏನು ಮಾಡಬೇಕು?

ಈ ವಿಷಯಕ್ಕೆ ಪ್ರತಿಕ್ರಿಯೆ ರಾಜಕೀಯವಾಗಿರಬಾರದು; ಸಾಂಸ್ಥಿಕವಾಗಿರಬೇಕು.

ಚುನಾವಣಾ ಆಯೋಗವು ತನ್ನ ಎಲ್ಲ ಸದಸ್ಯರೊಂದಿಗೆ ಸಭೆ ಸೇರಿ ಈ ಕ್ರಮಗಳನ್ನು ಕೈಗೊಳ್ಳಬೇಕು.

1. SIRಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಯಿತು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಯಾವ ನಿರ್ಧಾರಗಳನ್ನು ಮೂವರು ಆಯುಕ್ತರೂ ಒಮ್ಮತದಿಂದ ತೆಗೆದುಕೊಂಡರು, ಯಾವ ನಿರ್ಧಾರಗಳನ್ನು ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳಲಾಯಿತು ಮತ್ತು ಉಳಿದ ನಿರ್ಧಾರಗಳನ್ನು ಯಾವ ಅಧಿಕಾರದ ಅಡಿಯಲ್ಲಿ ತೆಗೆದುಕೊಳ್ಳಲಾಯಿತು ಎಂಬುದನ್ನು ಬಹಿರಂಗಪಡಿಸಬೇಕು.

2. ಇಬ್ಬರು ಆಯುಕ್ತರು ಅನುಮೋದನೆಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಆಕ್ಷೇಪಿಸಿರುವ ಪ್ರತಿಯೊಂದು ನಿರ್ಧಾರವನ್ನೂ ಪರಿಶೀಲಿಸಬೇಕು. ಕಾನೂನುಬದ್ಧ ಅಧಿಕಾರವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದರೆ, ಅಂತಹ ನಿರ್ಧಾರಗಳನ್ನು ಹಿಂಪಡೆಯಬೇಕು.

3. Form 6 ಅನ್ನು ಶಾಸನಬದ್ಧ ನಿಯಮಗಳಿಗೆ ಅನುಗುಣವಾಗಿ ಮರುಸ್ಥಾಪಿಸಬೇಕು.

4. ECINetಗೆ ಸ್ವತಂತ್ರ ತಾಂತ್ರಿಕ ಮತ್ತು ಕಾನೂನು ಪರಿಶೀಲನೆ ನಡೆಸಬೇಕು.

5. ಸಂಸತ್ತು ಶಾಸನಬದ್ಧ ಅಧಿಕಾರ ನೀಡಿರುವ EROಗಳು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು.

6. ಚುನಾವಣಾ ಆಯೋಗದ ಹೆಸರಿನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು ಯಾರಿಂದ ಮತ್ತು ಯಾವ ಅಧಿಕಾರದ ಅಡಿಯಲ್ಲಿ ಅನುಮತಿ ನೀಡಲಾಯಿತು ಎಂಬುದನ್ನು ಬಹಿರಂಗಪಡಿಸಬೇಕು.

ಆಯೋಗವೇ ಕ್ರಮ ಕೈಗೊಳ್ಳದಿದ್ದರೆ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಗುತ್ತದೆ.

ವರ್ಷಗಳಿಂದ ಚುನಾವಣಾ ಆಯೋಗದ ಕುರಿತು ಕೇಳಲಾಗುತ್ತಿದ್ದ ಪ್ರಮುಖ ಪ್ರಶ್ನೆ ಎಂದರೆ, ಅದು ಕಾರ್ಯಾಂಗದಿಂದ ಸ್ವತಂತ್ರವಾಗಿದೆಯೇ ಎಂಬುದು.

ಆದರೆ ಈಗ ಮತ್ತೊಂದು ಪ್ರಶ್ನೆಯನ್ನು ತಪ್ಪಿಸಲು ಸಾಧ್ಯವಿಲ್ಲ.

ಚುನಾವಣಾ ಆಯೋಗವು ನಿಜವಾಗಿಯೂ ಚುನಾವಣಾ ಆಯೋಗವಾಗಿಯೇ ಕಾರ್ಯನಿರ್ವಹಿಸುತ್ತಿದೆಯೇ?

ಸಂವಿಧಾನದ ಪ್ರಕಾರ, ಚುನಾವಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಒಬ್ಬ ವ್ಯಕ್ತಿಗೆ ಅಲ್ಲ, ಚುನಾವಣಾ ಆಯೋಗ ಎಂಬ ಸಂಸ್ಥೆಗೆ ಸೇರಿದೆ. ಸಂಸತ್ತು ಕೂಡ ಆಯೋಗವು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯನ್ನು ರೂಪಿಸಿದೆ. ಆದ್ದರಿಂದ, ಒಬ್ಬ ವ್ಯಕ್ತಿಯ ನಿರ್ಧಾರವೇ ಇಡೀ ಚುನಾವಣಾ ಆಯೋಗದ ನಿರ್ಧಾರವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ಸುಮಾರು ಒಂದು ಶತಕೋಟಿ ಮತದಾರರು ಚುನಾವಣಾ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸುವ ಸಾಂವಿಧಾನಿಕ ಸಂಸ್ಥೆಯೇ, ತನ್ನನ್ನು ನಿಯಂತ್ರಿಸುವ ಕಾನೂನನ್ನು ಮೊದಲು ಕಟ್ಟುನಿಟ್ಟಾಗಿ ಪಾಲಿಸಬೇಕು.

ಲೇಖಕರು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ‘An Undocumented Wonder – The Making of the Great Indian Election’ ಕೃತಿಯ ಕರ್ತೃ

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor