NSA ಅಡಿ ಆಕೃತಿ ಚೌಧರಿ ಬಂಧನ | ಮೇಧಾ ರೂಪಂ ವೇತನದಿಂದ 5 ಲಕ್ಷ ರೂ. ಪರಿಹಾರ ವಸೂಲಿಗೆ ಸುಪ್ರೀಂ ಕೋರ್ಟ್ ತಡೆ
ಎಪ್ರಿಲ್ ನಲ್ಲಿ ನೋಯ್ಡಾದಲ್ಲಿ ನಡೆದಿದ್ದ ಕೈಗಾರಿಕಾ ಕಾರ್ಮಿಕರ ಪ್ರತಿಭಟನೆ
ಸುಪ್ರೀಂ ಕೋರ್ಟ್(PTI) , ಮೇಧಾ ರೂಪಂ (Medha Roopam)
ಹೊಸದಿಲ್ಲಿ: ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪದವೀಧರೆ, ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಬಂಧಿಸಲು ಆದೇಶಿಸಿದ್ದ ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಂ ವಿರುದ್ಧ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಭಾಗಶಃ ತಡೆ ನೀಡಿದೆ.
ಮೇಧಾ ರೂಪಂ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪುತ್ರಿ.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು, ರೂಪಂ ಅವರ ವೇತನದಿಂದ ಆಕೃತಿ ಚೌಧರಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನಕ್ಕೂ ತಡೆ ನೀಡಿದೆ.
ಈ ಪ್ರಕರಣವು ಎಪ್ರಿಲ್ ನಲ್ಲಿ ನೋಯ್ಡಾದಲ್ಲಿ ನಡೆದ ಕೈಗಾರಿಕಾ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಆಕೃತಿ ಚೌಧರಿ ಅವರನ್ನು NSA ಅಡಿ ಬಂಧಿಸಲಾಗಿತ್ತು.
ಸೆಪ್ಟೆಂಬರ್ 2ರಂದು ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅಚಲ್ ಸಚದೇವ್ ಅವರ ವಿಭಾಗೀಯ ಪೀಠವು ಆಕೃತಿ ಚೌಧರಿ ಅವರ NSA ಬಂಧನವನ್ನು ರದ್ದುಗೊಳಿಸಿತ್ತು. ಅಲ್ಲದೆ, ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ದೇಶಿಸಿತ್ತು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವೇತನದಿಂದ ಮಾತ್ರವಲ್ಲದೆ, NSA ಅಡಿ ಚೌಧರಿ ಅವರ ಬಂಧನಕ್ಕೆ ಕಾರಣವಾದ ವರದಿಯನ್ನು ಸಿದ್ಧಪಡಿಸುವಲ್ಲಿ ಜವಾಬ್ದಾರರಾಗಿದ್ದ ಎಲ್ಲ ಅಧಿಕಾರಿಗಳಿಂದಲೂ ಈ ಮೊತ್ತವನ್ನು ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಚೌಧರಿ ವಿರುದ್ಧದ ಪೊಲೀಸ್ ವರದಿಯಲ್ಲಿ ಯಾವುದೇ ವಿಶ್ವಾಸಾರ್ಹ ಅಂಶಗಳಿಲ್ಲದಿದ್ದಾಗ, NSAಯಂತಹ ‘ದಮನಕಾರಿ ನಿಬಂಧನೆಗಳನ್ನು’ ಬಳಸುವ ಮೊದಲು ಅಧಿಕಾರಿ ಎಚ್ಚರಿಕೆ ವಹಿಸಬೇಕಿತ್ತು. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿತ್ತು ಎಂದು ಹೈಕೋರ್ಟ್ ಹೇಳಿತ್ತು. ಈ ಪ್ರಕರಣದಲ್ಲಿ ಮೇಧಾ ರೂಪಂ ಅವರ ನಡವಳಿಕೆ ಟೀಕೆಗೆ ಅರ್ಹವಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳು ತಮ್ಮ ನಿಷ್ಠೆಯನ್ನು ರಾಜಕಾರಣಿಗಳಿಗಲ್ಲ, ಬದಲಾಗಿ ಸಂವಿಧಾನಕ್ಕೆ ಹೊಂದಿರಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಅಧಿಕಾರಶಾಹಿಗಳು ಮತ್ತು ಪೊಲೀಸರು ಭಾರತ ಹಾಗೂ ದೇಶದ ಸಂವಿಧಾನದ ಮೇಲಿನ ತಮ್ಮ ಪ್ರಮಾಣವಚನ ಮತ್ತು ನಿಷ್ಠೆಯನ್ನು ಕಡೆಗಣಿಸಿದಾಗಲೆಲ್ಲಾ, ಜನರು ಅವರನ್ನು ಬ್ರಿಟಿಷ್ ಸಾಮ್ರಾಜ್ಯದ ದಮನಕಾರಿ ಪಳೆಯುಳಿಕೆಗಳಂತೆ ನೋಡುತ್ತಾರೆ ಎಂದು ನ್ಯಾಯಾಲಯ ಹೇಳಿತ್ತು. ಅಧಿಕಾರಿಗಳ ಅತಿಯಾದ ವರ್ತನೆಯ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯ ವಿಫಲವಾದರೆ, ರಾಜ್ಯವು ‘ಆರ್ವೆಲಿಯನ್ ಡಿಸ್ಟೋಪಿಯಾ’ (ಸರ್ವಾಧಿಕಾರಿ ಹಾಗೂ ದಮನಕಾರಿ ವ್ಯವಸ್ಥೆ) ಸ್ಥಿತಿಗೆ ತಲುಪಬಹುದು ಎಂದು ಹೈಕೋರ್ಟ್ ಎಚ್ಚರಿಸಿತ್ತು.
ಈ ಅಭಿಪ್ರಾಯಗಳೊಂದಿಗೆ, NSA ಅಡಿ ಆಕೃತಿ ಚೌಧರಿ ಅವರ ಬಂಧನವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಹೈಕೋರ್ಟ್ನ ಈ ಆದೇಶವನ್ನು ಮೇಧಾ ರೂಪಂ ಅವರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ವೇಳೆ, ಆಕೃತಿ ಚೌಧರಿ ಅವರ ಬಂಧನದ ಪ್ರಸ್ತಾವನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಮುಂದೆ ಬರುವ ಮೊದಲು ಹಲವು ಹಂತಗಳನ್ನು ದಾಟಿತ್ತು ಎಂಬ ವಾದವನ್ನು ಮಂಡಿಸಲಾಯಿತು.
ಈ ವಾದಗಳ ನಡುವೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಭಾಗಶಃ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ನಿಗದಿಪಡಿಸಿದೆ.