CEC ವಿರುದ್ಧ ಪ್ರತಿಭಟನೆ ವೇಳೆ ಬಲವಂತವಾಗಿ ಆಕಾಶವಾಣಿ ಭವನ ಪ್ರವೇಶ: ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧ FIR
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ (Photo: The Week)
ಹೊಸದಿಲ್ಲಿ: ಆಕಾಶವಾಣಿ ಕಚೇರಿಗೆ ಬಲವಂತವಾಗಿ ಪ್ರವೇಶಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಅವರೊಂದಿಗೆ ಇದ್ದ ಸಂಸದರು ಹಾಗೂ ಇತರರ ವಿರುದ್ಧ ದಿಲ್ಲಿ ಪೊಲೀಸರು FIR ದಾಖಲಿಸಿದ್ದಾರೆ.
ಆಕಾಶವಾಣಿ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಕಾಶವಾಣಿ ಭವನದ ಆವರಣದಲ್ಲಿ 8 ಗಂಟೆಗಳಿಗೂ ಹೆಚ್ಚು ಕಾಲ ಧರಣಿ ನಡೆಸಿದ ಬಳಿಕ ಮಂಗಳವಾರ ರಾತ್ರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದಿದ್ದರು.
‘ವೋಟ್ ಚೋರಿ’ ಆರೋಪದ ವಿರುದ್ಧ ಇಂಡಿಯಾ ಮೈತ್ರಿಕೂಟದ ಸಂಸದರು ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ತಡೆದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭವಾಗಿತ್ತು.
ಮಧ್ಯಾಹ್ನದ ವೇಳೆಗೆ ಸಂಸತ್ ಬೀದಿಯಲ್ಲಿರುವ ಆಲ್ ಇಂಡಿಯಾ ರೇಡಿಯೊ (AIR) ಆವರಣಕ್ಕೆ ರಾಹುಲ್ ಗಾಂಧಿ ಪ್ರವೇಶಿಸಿದ್ದರು.
ಇದಕ್ಕೂ ಮೊದಲು ಸಂಸತ್ತಿನಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸುತ್ತಿದ್ದಾಗ ವಿರೋಧ ಪಕ್ಷದ ಸಂಸದರು ‘ವೋಟ್ ಚೋರ್, ಗಡ್ಡಿ ಛೋಡ್’ ಎಂಬ ಘೋಷಣೆಗಳನ್ನು ಕೂಗಿದರು. ಈ ವೇಳೆ ರಾಹುಲ್ ಗಾಂಧಿ ಬ್ಯಾರಿಕೇಡ್ ಗಳನ್ನು ಹತ್ತಿದರು. ಪ್ರಿಯಾಂಕಾ ಗಾಂಧಿ ವಾದ್ರಾ, ಎನ್ಸಿಪಿ-ಎಸ್ಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಂಸತ್ತು ಮತ್ತು ಚುನಾವಣಾ ಆಯೋಗದ ಕಚೇರಿಯ ಸುತ್ತಲೂ ಭಾರಿ ಪ್ರಮಾಣದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ನೀತಿ ಆಯೋಗದ ಕಚೇರಿ ಸಮೀಪ ಭದ್ರತಾ ಸಿಬ್ಬಂದಿ ಸಂಸದರನ್ನು ತಡೆದರು.
ಬಳಿಕ ಪೊಲೀಸರು ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಚರಣ್ಜಿತ್ ಸಿಂಗ್ ಚನ್ನಿ, ಪವನ್ ಖೇರಾ, ಕೆ. ಸುರೇಶ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ದೀಪೇಂದರ್ ಹೂಡಾ, ಪ್ರಣಿತಿ ಶಿಂಧೆ, ವರ್ಷಾ ಗಾಯಕ್ವಾಡ್ ಮತ್ತು ಇಮ್ರಾನ್ ಪ್ರತಾಪ್ಗಢಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಗೂ ಸಂಸದರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇತರ ಸಂಸದರು ಮತ್ತು ನಾಯಕರನ್ನೂ AIR ಆವರಣದಿಂದ ತೆರವುಗೊಳಿಸಲಾಯಿತು.