ಅಮೆರಿಕದಲ್ಲಿ ʼಗೂಗಲ್ ಪೇʼ ಕಾರ್ಯಾಚರಣೆ ಸ್ಥಗಿತ; ಭಾರತದಲ್ಲಿ ಅಬಾಧಿತ

Update: 2024-02-25 10:01 GMT

ಸಾಂದರ್ಭಿಕ ಚಿತ್ರ | Photo: ANI


ಹೊಸದಿಲ್ಲಿ: ತನ್ನ ಪಾವತಿ ಸೇವೆಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯತಂತ್ರದ ಭಾಗವಾಗಿ ಗೂಗಲ್ ಪೇ ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ. ಗೂಗಲ್ ವ್ಯಾಲೆಟ್ ವಿಸ್ತರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನಿಸಿದ ಗೂಗಲ್ ಗುರುವಾರ ತನ್ನ ಬ್ಲಾಗ್‍ನಲ್ಲಿ ಈ ವಿಷಯವನ್ನು ಪ್ರಕಟಿಸಿ, ಅಮೆರಿಕನ್ನರು ಜೂನ್ 4ರವರೆಗೆ ಈ ಪಾವತಿ ಆ್ಯಪ್ ಬಳಸಬಹುದು. ಆ ಬಳಿಕ ಗೂಗಲ್ ಪೇ ಬ್ಯಾಲೆನ್ಸನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬಹುದು ಎಂದು ಸ್ಪಷ್ಟಪಡಿಸಿದೆ.

ಜೂನ್ 4ರ ಬಳಿಕ ಗೂಗಲ್ ತನ್ನ ಸ್ವತಂತ್ರ ಗೂಗಲ್ ಪೇ ಆ್ಯಪ್‍ನ ಅಮೆರಿಕ ಆವೃತ್ತಿಯನ್ನು ಸ್ಥಗಿತಗೊಳಿಸಲಿದೆ. ಜೂನ್ 4ರ ಬಳಿಕ ಬಳಕೆದಾರರು ತಮ್ಮ ಗೂಗಲ್ ವ್ಯಾಲೆಟ್ ಮೂಲಕ ಪಾವತಿಯನ್ನು ಮುಂದುವರಿಸಬಹುದಾಗಿದೆ. ಇದನ್ನು ದೇಶದಲ್ಲಿ ಆ್ಯಪ್‍ಗಿಂತ ಐದು ಪಟ್ಟು ಜನರು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದೆ.

ಆ್ಯಪ್ ಅನುಭವವನ್ನು ಸರಳಗೊಳಿಸುವ ಸಲುವಾಗಿ, ಸ್ವತಂತ್ರ ಗೂಗಲ್ ಪೇ ಆ್ಯಪ್‍ನ ಅಮೆರಿಕದ ಆವೃತ್ತಿ 2024ರ ಜೂನ್ 4ರ ಬಳಿಕ ಲಭ್ಯವಿರುವುದಿಲ್ಲ. ನೀವು ಅತ್ಯಂತ ಜನಪ್ರಿಯ ವಿಶೇಷತೆಗಳನ್ನು ಗೂಗಲ್ ವ್ಯಾಲೆಟ್ ಮೂಲಕ ಪಡೆಯಬಹುದಾಗಿದೆ. ಅಮೆರಿಕದಲ್ಲಿ ಗೂಗಲ್ ಪೇ ಆ್ಯಪ್ ಬಳಸುವುದಕ್ಕಿಂತ ಐದು ಪಟ್ಟು ಅಧಿಕ ಮಂದಿ ವ್ಯಾಲೆಟ್ ಬಳಸುತ್ತಿದ್ದಾರೆ" ಎಂದು ಬ್ಲಾಗ್‍ನಲ್ಲಿ ವಿವರಿಸಲಾಗಿದೆ.

ಈ ವರ್ಗಾಂತರವನ್ನು ಸಾಧ್ಯವಾದಷ್ಟು ಸುಲಲಿತವಾಗಿ ನೆರವೇರಿಸುವುದು ನಮ್ಮ ಬಯಕೆ ಎಂದು ಸ್ಪಷ್ಟಪಡಿಸಿದೆ. ಆದರೆ ಈ ವರ್ಗಾಂತರವು ಭಾರತ ಹಾಗೂ ಸಿಂಗಾಪುರದ ಗೂಗಲ್ ಪೇ ಬಳಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News