ಇನ್ನು ಮುಂದೆ ವಾಟ್ಸ್ಆ್ಯಪ್ ಬಳಸಬೇಕಾದರೆ ಮೊಬೈಲ್ ನಲ್ಲಿ ಸಿಮ್ ಸಕ್ರಿಯವಾಗಿರಬೇಕು!
ಸಾಂದರ್ಭಿಕ ಚಿತ್ರ | Photo Credit : freepik
ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025 ಅಡಿಯಲ್ಲಿ ಮೊತ್ತ ಮೊದಲ ಬಾರಿಗೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಟೆಲಿಕಾಂ-ಶೈಲಿಯ ನಿಯಂತ್ರಣಗಳಿಗೆ ತರಲಾಗಿದೆ. ಹೀಗಾಗಿ ಇನ್ನು ಮುಂದೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಸಕ್ರಿಯ ಸಿಮ್ ಇಲ್ಲದೆ ಬಳಸಲು ಸಾಧ್ಯವಿಲ್ಲ.
ಭಾರತ ಸರ್ಕಾರ ಇದೀಗ ಸೈಬರ್ ಸುರಕ್ಷತೆಗಾಗಿ ಡಿಜಿಟಲ್ ಬಳಕೆದಾರರಿಗೆ ಮತ್ತೊಂದು ಏಟು ನೀಡಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲ ತಾಣಗಳನ್ನು ಸಿಮ್ ಸಕ್ರಿಯವಾಗಿದ್ದರೆ ಮಾತ್ರ ಬಳಸಬಹುದು ಎನ್ನುವ ನೀತಿಯನ್ನು ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025ರ ಅಡಿಯಲ್ಲಿ ತರಲು ಸಿದ್ಧತೆ ನಡೆದಿದೆ. ಹೀಗಾಗಿ ಇನ್ನುಮುಂದೆ ಒಂದೇ ಸಿಮ್ ನಲ್ಲಿ ಹಲವು ಖಾತೆಗಳನ್ನು ಬಳಸುತ್ತಿರುವವರಿಗೆ ಏಟು ಬೀಳಲಿದೆ.
► ಸಿಮ್ ಲಿಂಕ್ ಕಡ್ಡಾಯ
ಇನ್ನು ಮುಂದೆ ವಾಟ್ಸ್ಆ್ಯಪ್ ಖಾತೆ ಸಕ್ರಿಯ ಸಿಮ್ ಜೊತೆಗೆ ಲಿಂಕ್ ಆಗಿರಲೇಬೇಕು. ವಾಟ್ಸ್ಆ್ಯಪ್ ಮಾತ್ರವಲ್ಲದೆ, ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ ಚಾಟ್, ಜಿಯೋಚಾಟ್, ಅರಟ್ಟೈ ಮತ್ತು ಜೋಶ್ ಗಳಿಗೂ ಈ ಹೊಸ ಬದಲಾವಣೆಗಳನ್ನು ಜಾರಿಗೆ ತರಲು 90 ದಿನಗಳ ಅವಕಾಶ ನೀಡಲಾಗಿದೆ.
ದೂರ ಸಂಪರ್ಕ ಸೈಬರ್ ಸುರಕ್ಷತಾ ತಿದ್ದುಪಡಿ 2025 ಅಡಿಯಲ್ಲಿ ಮೊತ್ತ ಮೊದಲ ಬಾರಿಗೆ ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ಟೆಲಿಕಾಂ-ಶೈಲಿಯ ನಿಯಂತ್ರಣಗಳಿಗೆ ತರಲಾಗಿದೆ. 90 ದಿನಗಳ ಒಳಗೆ ಎಲ್ಲಾ ಆ್ಯಪ್ ಆಧಾರಿತ ಸೇವೆಗಳನ್ನು ಸಕ್ರಿಯ ಸಿಮ್ ಜೊತೆಗೆ ಲಿಂಕ್ ಮಾಡಬೇಕಿದೆ. ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಳಿಸಿದರೆ ಆರು ಗಂಟೆಗಳ ಒಳಗೆ ಅಪ್ಲಿಕೇಶನ್ ಲಾಗೌಟ್ ಆಗಲಿದೆ. ವೆಬ್ ಮೂಲಕ ಬಳಸುವ ಅಪ್ಲಿಕೇಶನ್ ಗಳು, ಅಂದರೆ ವೆಬ್ ವಾಟ್ಸ್ಆ್ಯಪ್ ನಂತಹ ಫೀಚರ್ ಗಳು ಪ್ರತಿ 6 ಗಂಟೆಗಳಿಗೊಮ್ಮೆ ಲಾಗೌಟ್ ಆಗಲಿವೆ. ಅದನ್ನು ಮರಳಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಸಕ್ರಿಯಗೊಳಿಸಬೇಕಾಗುತ್ತದೆ.
► ಸೈಬರ್ ಭದ್ರತೆಗೆ ಹೊಸ ನೀತಿ
ದೂರಸಂಪರ್ಕ ಇಲಾಖೆಯ ಪ್ರಕಾರ, ಆ್ಯಪ್ ಆಧಾರಿತ ಸಂವಹನ ಸೇವೆಗಳನ್ನು ನೀಡುವ ಸಂಸ್ಥೆಗಳು ತಮ್ಮ ಬಳಕೆದಾರರನ್ನು ಪರಿಶೀಲಿಸುವಲ್ಲಿನ ಲೋಪದೋಷವನ್ನು ಪರಿಹರಿಸುವ ಉದ್ದೇಶದಿಂದ ಹೊಸ ನಿಯಂತ್ರಣವನ್ನು ತರಲಾಗಿದೆ. ಇದೀಗ ಬಹುತೇಕ ಆ್ಯಪ್ ಆಧಾರಿತ ಸಂವಹನ ಸೇವೆಗಳಲ್ಲಿ ಒಂದು ಬಾರಿ ಮೊಬೈಲ್ ಸಂಖ್ಯೆಯ ಜೊತೆಗೆ ಲಾಗಿನ್ ಮಾಡಿದ ನಂತರ ಸಿಮ್ ತೆಗೆದಲ್ಲಿ ಅಥವಾ ನಿಷ್ಕ್ರಿಯಗೊಂಡ ನಂತರವೂ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮತ್ತು ಸಿಮ್ ಕಾರ್ಡ್ ನಡುವೆ ಒಂದು ಬಾರಿ ಲಿಂಕ್ ಆದ ಮೇಲೆ ಆ್ಯಪ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮತ್ತು ಸಿಮ್ ಕಾರ್ಡ್ ನಡುವೆ ಒಂದು ಬಾರಿ ಲಿಂಕ್ ಆದ ಮೇಲೆ ಆ್ಯಪ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ದುರ್ಬಳಕೆಗೆ ಮೂಲವಾಗುತ್ತಿದೆ ಎಂದು ಆರೋಪಿಸಿವೆ.
► ಸಿಮ್ ಸಕ್ರಿಯವಾಗಿಡುವ ಹೊರೆ!
ಬಹುತೇಕ ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯ ಹೊಂದಿರುವವರು ಒಂದು ಬಾರಿ ಸಿಮ್ ಕಾರ್ಡ್ ತೆಗೆದುಕೊಂಡು ನಂತರ ಸಿಮ್ ಸಕ್ರಿಯವಾಗಿಡದೆ ಅಪ್ಲಿಕೇಶನ್ ಗಳನ್ನು ಬಳಸುವುದನ್ನು ಮುಂದುವರಿಸುತ್ತಿದ್ದರು. ಅಂತಹ ಬಳಕೆದಾರರಿಗೆ ಸಿಮ್ ಸಕ್ರಿಯವಾಗಿಡಲು ಹೆಚ್ಚುವರಿ ಹಣ ತೆರುವ ಹೊರೆ ಬೀಳಲಿದೆ.
► ಅಕ್ರಮಗಳನ್ನು ತಪ್ಪಿಸಬಹುದು
ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರ ಪ್ರಕಾರ, “ಸಕ್ರಿಯ ಸಿಮ್ ಇಲ್ಲದೆ ಬಳಕೆಗೆ ಅವಕಾಶ ನೀಡಿದರೆ ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಕ್ರಿಯ ಸಿಮ್ ಇದ್ದರೆ ಅಕ್ರಮಗಳು ನಡೆದರೆ ಪತ್ತೆ ಮಾಡುವುದು ಸುಲಭವಾಗಲಿದೆ. ಸಿಮ್ ಗಳನ್ನು ಆಧಾರ್ ಲಿಂಕ್ ಮಾಡಿರುವ ಕಾರಣದಿಂದ ಕ್ಲೋನ್ ಮಾಡುವ ಸಮಸ್ಯೆ ಇರದು. ಒಂದೇ ನಂಬರ್ 4-5 ಕಡೆಗೆ ಅಪ್ಲಿಕೇಶನ್ ಗಳಲ್ಲಿ ಬಳಕೆಯಾಗುವುದು ತಪ್ಪುತ್ತದೆ. ಚುನಾವಣೆಗಳಂತಹ ಸಂದರ್ಭಗಳಲ್ಲಿ ವಂಚನೆಗೆ ಅವಕಾಶವಿರುವುದಿಲ್ಲ.”