ಮೀರತ್, ನ.29: ವರದಕ್ಷಿಣೆಯಾಗಿ 'ಥಾರ್' ಕಾರು ಬೇಕೆಂದು ಬೇಡಿಕೆಯಿಟ್ಟ ವರನ ಕುಟುಂಬಕ್ಕೆ ವಧುವಿನ ಕಡೆಯವರು ʼಆಟಿಕೆ ಕಾರುʼ ನೀಡುವ ಮೂಲಕ ತಿರುಗೇಟು ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಅಷ್ಟೇ ಅಲ್ಲ, ಅವರು ಮದುವೆ ಸಂಬಂಧವನ್ನೇ ರದ್ದುಗೊಳಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರದಕ್ಷಿಣೆ ಪದ್ಧತಿ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.

ವರದಕ್ಷಿಣೆಯಾಗಿ ಕಾರು ನೀಡುವಂತೆ ವರನ ಕುಟುಂಬದವರು ಬೇಡಿಕೆಯಿಟ್ಟಿದ್ದರಿಂದ ವಧುವಿನ ಕುಟುಂಬದವರು ಈ ನಿರ್ಧಾರ ಕೈಗೊಂಡಿದ್ದಾರೆ. ಶನಿವಾರ ಆಯೋಜಿಸಲಾಗಿದ್ದ 'ಲಾಲ್ ಖಾತ್' (ಮದುವೆಗೆ ಅಧಿಕೃತವಾಗಿ ಆಹ್ವಾನಿಸುವ ಸಾಂಪ್ರದಾಯಿಕ ಆಚರಣೆ) ಸಮಾರಂಭಕ್ಕೆ ವರನ ಕುಟುಂಬದವರನ್ನು ಆಹ್ವಾನಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಅವರನ್ನು ಕಾಯಿಸಿದ ವಧುವಿನ ಕಡೆಯವರು, ಕೊನೆಗೆ ವರನ ತಂದೆಯ ಕೈಗೆ ಪ್ಲಾಸ್ಟಿಕ್ ಆಟಿಕೆ ಕಾರೊಂದನ್ನು ನೀಡಿ ಮದುವೆ ಸಂಬಂಧ ಮುರಿದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವೀಡಿಯೋದಲ್ಲಿ ವಧುವಿನ ಕುಟುಂಬದ ಸದಸ್ಯರೊಬ್ಬರು ವರನ ತಂದೆಗೆ, "ನಿಮಗೆ ಮನುಷ್ಯರ ಅಗತ್ಯವಿರಲಿಲ್ಲ, ಕಾರಿನ ಅಗತ್ಯವಿತ್ತು. ನಾವು ನಿಮಗೆ ಸ್ಕಾರ್ಪಿಯೋ ಆಟಿಕೆ ಕಾರನ್ನು ನೀಡಿದ್ದೇವೆ. ಈಗ ಅದನ್ನು ಓಡಿಸಿ ಆನಂದಿಸಿ" ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಜ್ಞಾನಪುರ ಗ್ರಾಮದ ನಿವಾಸಿ ಶಂಶೇರ್ ಅವರ ಮಗನಿಗೂ, ಸಲೋನಾ ಗ್ರಾಮದ ಯುವತಿಗೂ ಸುಮಾರು ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಸಂದರ್ಭದಲ್ಲಿ ವಧುವಿನ ಕುಟುಂಬದವರು ವರನ ಕುಟುಂಬಕ್ಕೆ ಕೆಲವು ವಸ್ತುಗಳ ಜೊತೆಗೆ 1 ಲಕ್ಷ ರೂ. ನೀಡಿದ್ದರು.

ಇತ್ತೀಚೆಗೆ ವಧುವಿನ ಕುಟುಂಬದವರು ಒಂದು ತುಂಡು ಜಮೀನನ್ನು ಮಾರಾಟ ಮಾಡಿದ್ದರು. ಈ ವಿಷಯ ತಿಳಿದ ವರನ ಕುಟುಂಬದವರು ವರದಕ್ಷಿಣೆಯಾಗಿ ಕಾರು ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ವರದಿಯಾಗಿದೆ. ವಧುವಿನ ಕುಟುಂಬದವರು ವರನ ಕಡೆಯವರ ಮನವೊಲಿಸಲು ಪ್ರಯತ್ನಿಸಿದರೂ ಮಾತುಕತೆ ಫಲಪ್ರದವಾಗಿರಲಿಲ್ಲ.

ಶನಿವಾರ ವಧುವಿನ ಮನೆಯಲ್ಲಿ 'ಲಾಲ್ ಖಾತ್' ಸಮಾರಂಭ ಆಯೋಜಿಸಲಾಗಿತ್ತು. ಇದಕ್ಕಾಗಿ ಆಗಮಿಸಿದ್ದ ವರನ ಕುಟುಂಬದವರನ್ನು ಸುದೀರ್ಘವಾಗಿ ಕಾಯಿಸಿದ ಬಳಿಕ ವಧುವಿನ ಕಡೆಯವರು ವರನ ತಂದೆಗೆ ಆಟಿಕೆ ಕಾರು ನೀಡಿದ್ದಾರೆ. ಜೊತೆಗೆ ನಿಶ್ಚಿತಾರ್ಥದ ವೇಳೆ ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.

"ನೀವು ಕೇಳಿದ ಕಾರನ್ನು ನಾವು ನೀಡಿದ್ದೇವೆ. ನಿಶ್ಚಿತಾರ್ಥದ ಉಡುಗೊರೆಗಳನ್ನು ಹಿಂದಿರುಗಿಸಿದ್ದೇವೆ. ಮದುವೆಯನ್ನೂ ರದ್ದುಗೊಳಿಸಿದ್ದೇವೆ" ಎಂದು ವಧುವಿನ ಕುಟುಂಬದ ಸದಸ್ಯರೊಬ್ಬರು ವೀಡಿಯೋದಲ್ಲಿ ಹೇಳಿರುವುದು ಕೇಳಿಸುತ್ತದೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದ್ದು, ವರದಕ್ಷಿಣೆ ಬೇಡಿಕೆಯ ವಿರುದ್ಧ ವಧುವಿನ ಕುಟುಂಬದವರು ತೋರಿದ ಪ್ರತಿಭಟನೆಗೆ ಹಲವರ ಗಮನ ಸೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.