ಸಾಂದರ್ಭಿಕ ಚಿತ್ರ (PTI)

ಗಾಂಧಿನಗರ: ಗೋಹತ್ಯೆ ಪ್ರಕರಣದಲ್ಲಿ ಮೂವರು ಮುಸ್ಲಿಂ ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಾಗ ಗುಜರಾತ್‌ ನ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ವೇದಗಳು ಮತ್ತು ಮನುಸ್ಮೃತಿಯನ್ನು ಉಲ್ಲೇಖಿಸಿದೆ ಎಂದು ‘deccan herald’ ಬುಧವಾರ ವರದಿ ಮಾಡಿದೆ.

ಸೋಮವಾರ ನೀಡಿದ ತೀರ್ಪಿನ ಮೊದಲ ನಾಲ್ಕು ಪುಟಗಳಲ್ಲಿ ನ್ಯಾಯಾಲಯವು ಗೋವುಗಳ ಮಹತ್ವವನ್ನು ವಿವರಿಸಿದೆ. ಪ್ರಾಚೀನ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಗೋವನ್ನು ‘ವಿಶ್ವದ ತಾಯಿ’ ಎಂದು ಪೂಜಿಸಲಾಗುತ್ತದೆ ಮತ್ತು ಅದರಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿದೆ ಎಂದು ಹೇಳಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು ಮನುಸ್ಮೃತಿಯನ್ನು ಉಲ್ಲೇಖಿಸಿ, ಗೋವನ್ನು ಕೇವಲ ಪ್ರಾಣಿಯಾಗಿ ನೋಡದೆ, ಸಮಾನ ಸ್ಥಾನಮಾನ ಹೊಂದಿರುವ ಜೀವಿಯಾಗಿ ಹಾಗೂ ಧರ್ಮದ ಅಥವಾ ಹಿಂದೂ ಧರ್ಮದ ‘ಧುರೀಣ ಶಕ್ತಿ’ ಎಂದು ಪರಿಗಣಿಸಲಾಗಿದೆ ಎಂದು ವಿವರಿಸಿದ್ದಾರೆ.

ಗೋವುಗಳನ್ನು ತಾಯಿಯಂತೆ ಪರಿಗಣಿಸಲಾಗುತ್ತದೆ ಎಂಬುದು ತಿಳಿದಿದ್ದರೂ, ಆರೋಪಿಗಳಾದ ವಸೀಮ್ ಖುರೇಶಿ, ಮೊಹಮ್ಮದ್ ರಫೀಕ್ ಖುರೇಶಿ ಮತ್ತು ಅಸ್ಫಾಕ್ ಬಹೇಲಿಮ್ ಅವರು ಗೋವೊಂದನ್ನು ‘ನಿರ್ದಯವಾಗಿ ಹತ್ಯೆ ಮಾಡಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

‘ಇಂತಹ ಆರೋಪಿಗಳಿಗೆ ಕಾನೂನಿನಲ್ಲಿ ನಿಗದಿಪಡಿಸಿದಂತೆ ಶಿಕ್ಷೆ ವಿಧಿಸದಿದ್ದರೆ, ಕಾಲಕ್ರಮೇಣ ಗೋವುಗಳು ಸಂಪೂರ್ಣವಾಗಿ ಅಳಿದುಹೋಗುತ್ತವೆ’ ಎಂದು ನ್ಯಾಯಾಲಯ ಹೇಳಿರುವುದಾಗಿ ‘deccan herald’ ವರದಿ ಮಾಡಿದೆ.

ಗುಜರಾತ್ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯಿದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಮೂವರನ್ನು ದೋಷಿಗಳೆಂದು ಘೋಷಿಸಲಾಗಿದೆ. ಪ್ರತಿಯೊಬ್ಬರಿಗೂ ಜೀವಾವಧಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 3 ಲಕ್ಷ ರೂ. ದಂಡ ವಿಧಿಸಲಾಗಿದೆ.

ವಯಸ್ಸಾದ ಅಥವಾ ಹಾಲು ನೀಡದ ಜಾನುವಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ವ್ಯಾಪಾರಕ್ಕಾಗಿ ವಧೆ ಮಾಡುತ್ತಿದ್ದರು ಎಂದು ಆರೋಪಿಗಳ ಬಗ್ಗೆ ವರದಿ ಮಾಡಿದೆ. ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದು, ಸುಮಾರು 277 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor