‘ಜ್ಞಾನೇಶ್ ಕುಮಾರ್ ಜೈಲು ಕೋಣೆಯಲ್ಲೇ ನಮ್ಮನ್ನು ಭೇಟಿಯಾಗಲಿದ್ದಾರೆ’: ಭೇಟಿಯಾಗಲು ನಿರಾಕರಿಸಿದ CEC ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
► ಹೋರಾಟ ಮುಂದುವರಿಸಿದರೆ ಸರಕಾರ ಪತನ; ಮತದಾರರ ಪಟ್ಟಿ ಅಕ್ರಮಕ್ಕೆ ಶೇ. 100ರಷ್ಟು ಸಾಕ್ಷ್ಯವಿದೆ ► ಚುನಾವಣಾ ಅಕ್ರಮ ವಿರುದ್ಧದ ತಮ್ಮ ಹೋರಾಟದ ಹಾದಿ ತೆರೆದಿಟ್ಟ ವಿಪಕ್ಷ ನಾಯಕ
ರಾಹುಲ್ ಗಾಂಧಿ , ಜ್ಞಾನೇಶ್ ಕುಮಾರ್ | Photo Credit : PTI
ಹೊಸದಿಲ್ಲಿ: 2014ರ ಬಳಿಕ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವುದು, ತೆಗೆದುಹಾಕುವುದು ಮತ್ತು ಬದಲಾವಣೆಗಳನ್ನು ಮಾಡಿರುವುದಕ್ಕೆ ಶೇ. 100ರಷ್ಟು ಖಚಿತವಾದ ಸಾಕ್ಷ್ಯವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಅಕ್ರಮದ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಾದಿಸಿದ ಅವರು, ಈ ಸಮಸ್ಯೆ ಕೇವಲ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಸೀಮಿತವಾಗಿಲ್ಲ. ಚುನಾವಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲೇ ಸಮಸ್ಯೆಯಿದೆ. ಅದನ್ನು ಸರಿಪಡಿಸಲು ವ್ಯಾಪಕ ಬದಲಾವಣೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅ. 9ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ಮೂರು–ನಾಲ್ಕು ದಿನಗಳಿಂದ ಹೋರಾಟ ನಡೆಸಿದ ವಿರೋಧ ಪಕ್ಷಗಳ ಸಂಸದರನ್ನು ಅಭಿನಂದಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಸುಪ್ರಿಯಾ ಸುಳೆ, ಎಂ.ಎ. ಬೇಬಿ, ಡಿ. ರಾಜಾ ಸೇರಿದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ನಾಯಕರನ್ನು ಸ್ವಾಗತಿಸಿ, ಅವರ ಹೋರಾಟಕ್ಕೆ ಧನ್ಯವಾದ ಅರ್ಪಿಸಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪದ ವಿರುದ್ಧ ಹೋರಾಟ ಮುಂದುವರಿಸಿದರೆ ಸರಕಾರ ಪತನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಹೋರಾಟವು ಸರಕಾರದ ಅಡಿಪಾಯವನ್ನೇ ಅಲ್ಲಾಡಿಸಿದೆ ಎಂದರು.
ತಮ್ಮ ಭಾಷಣದ ಆರಂಭದಲ್ಲಿ ರಾಹುಲ್ ಗಾಂಧಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಐತಿಹಾಸಿಕ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣವನ್ನು ಉಲ್ಲೇಖಿಸಿದರು. 1947ರ ಆಗಸ್ಟ್ 14ರಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನೆಹರೂ ಈ ಭಾಷಣ ಮಾಡಿದ್ದರು ಎಂದು ಸ್ಮರಿಸಿದರು.
‘ಭಾರತಕ್ಕೆ, ಇಡೀ ಏಷ್ಯಾಕ್ಕೆ ಮತ್ತು ಜಗತ್ತಿಗೆ ಇದು ನಿರ್ಣಾಯಕ ಕ್ಷಣವಾಗಿದೆ. ಪೂರ್ವದಲ್ಲಿ ಸ್ವಾತಂತ್ರ್ಯದ ಹೊಸ ನಕ್ಷತ್ರವೊಂದು ಉದಯಿಸುತ್ತಿದೆ. ಹೊಸ ಭರವಸೆ ಮೂಡುತ್ತಿದೆ. ದೀರ್ಘಕಾಲದ ಕನಸು ಸಾಕಾರಗೊಳ್ಳುತ್ತಿದೆ. ಈ ನಕ್ಷತ್ರ ಎಂದಿಗೂ ಅಸ್ತಮಿಸದಿರಲಿ ಮತ್ತು ಆ ಭರವಸೆ ಎಂದಿಗೂ ಹುಸಿಯಾಗದಿರಲಿ’ ಎಂಬ ನೆಹರೂ ಅವರ ಮಾತುಗಳನ್ನು ಉಲ್ಲೇಖಿಸಿದರು.
‘ನಮ್ಮ ಸುತ್ತಲೂ ಕತ್ತಲೆಯ ಮೋಡಗಳು ಆವರಿಸಿದ್ದರೂ, ನಾವು ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತೇವೆ’ ಎಂಬ ನೆಹರೂ ಅವರ ಮಾತನ್ನೂ ಸ್ಮರಿಸಿದರು.
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ದೇಶದ ಭವಿಷ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಒತ್ತಿಹೇಳಿದ ರಾಹುಲ್ ಗಾಂಧಿ, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಮತ್ತು ಅದನ್ನು ರಕ್ಷಿಸುವ ವ್ಯವಸ್ಥೆ ಇರಬೇಕು ಎಂಬ ಆಶಯವನ್ನು ಪ್ರತಿಪಾದಿಸಿದರು.
2004ರಲ್ಲಿ ಭಾರತವು ಪ್ರಜಾಸತ್ತಾತ್ಮಕ ಮತ್ತು ಮುಕ್ತ ದೇಶವಾಗಿತ್ತು:
‘ನಾನು 2004ರಲ್ಲಿ ರಾಜಕೀಯಕ್ಕೆ ಬಂದೆ. ಆಗ ಭಾರತವು ಪ್ರಜಾಸತ್ತಾತ್ಮಕ ಮತ್ತು ಮುಕ್ತ ದೇಶವಾಗಿತ್ತು. ಆದರೆ 2014ರಲ್ಲಿ ದೇಶದಲ್ಲಿ ಮೂಲಭೂತ ಬದಲಾವಣೆಯೊಂದು ಸಂಭವಿಸಿತು. ಆಗ ನಮಗೆ ಅದರ ಅರಿವಿರಲಿಲ್ಲ. ಈ ಸಂಗತಿ ಪ್ರತಿಯೊಬ್ಬ ಭಾರತೀಯನಿಗೂ ತಿಳಿಯಲಿದೆ ಮತ್ತು ಸಾಬೀತಾಗಲಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಚಿಕ್ಕಂದಿನಿಂದಲೂ ಭಾರತದ ಜನರ ಅಭಿವ್ಯಕ್ತಿಯನ್ನು ರಕ್ಷಿಸುವುದೇ ಅತ್ಯಂತ ಮುಖ್ಯವಾದ ಕರ್ತವ್ಯ ಎಂಬ ಮೌಲ್ಯವನ್ನು ತಮ್ಮ ಮನಸ್ಸಿನಲ್ಲಿ ಬಿತ್ತಲಾಗಿತ್ತು ಎಂದು ಅವರು ವಿವರಿಸಿದರು. ಭಾರತದ ಪ್ರತಿಯೊಂದು ರಾಜ್ಯದ ಹೆಸರು ಮತ್ತು ರಾಜಧಾನಿಯ ಹೆಸರನ್ನು ಕಲಿಸುವುದರ ಜತೆಗೆ, ದೇಶದ ಜನರ ವೈವಿಧ್ಯಮಯ ಅಭಿಪ್ರಾಯಗಳನ್ನು ಗೌರವಿಸುವ ಮಹತ್ವವನ್ನೂ ಕಲಿಸಲಾಗಿತ್ತು ಎಂದರು.
‘ಕೇವಲ ಒಂದು ರಾಜ್ಯ, ಒಂದು ಭಾಷೆ, ಒಂದು ಇತಿಹಾಸ ಅಥವಾ ಒಂದು ಸಂಪ್ರದಾಯವನ್ನು ರಕ್ಷಿಸುವುದಲ್ಲ. ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿಯನ್ನು ರಕ್ಷಿಸುವುದೇ ಮುಖ್ಯ’ ಎಂಬುದು ತಮ್ಮ ರಾಜಕೀಯ ನಿಲುವಿನ ಮೂಲ ಆಶಯ ಎಂದು ಹೇಳಿದರು.
ಇದೇ ಆಲೋಚನೆಯೊಂದಿಗೆ ತಾವು ರಾಜಕೀಯಕ್ಕೆ ಬಂದಿದ್ದು, ಆ ಮೌಲ್ಯಗಳನ್ನು ರಕ್ಷಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಚುನಾವಣೆಗಳಲ್ಲಿ ಗೆಲುವು–ಸೋಲು ಸಹಜ
ಚುನಾವಣೆಗಳಲ್ಲಿ ಗೆಲುವು ಮತ್ತು ಸೋಲು ಸಹಜ. ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುವಂತೆ ಸೋಲುವ ಸಾಧ್ಯತೆಯನ್ನೂ ಒಪ್ಪಿಕೊಳ್ಳಬೇಕು. ಜನರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿ ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಬಹುದು. ಇದೇ ಪ್ರಜಾಪ್ರಭುತ್ವದ ಸ್ವರೂಪ ಎಂದು ರಾಹುಲ್ ಗಾಂಧಿ ಹೇಳಿದರು.
ಆದರೆ 2014ರ ಬಳಿಕ ಮಧ್ಯಪ್ರದೇಶ, ಗುಜರಾತ್, ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶಗಳ ಮೂಲಕ ಜನರ ಅಭಿಪ್ರಾಯ ಬದಲಾಗುವ ಪ್ರಕ್ರಿಯೆ ನಿಂತುಹೋದಂತೆ ಕಂಡಿತು. ಇದರಿಂದ ತಾವು ಆಘಾತಕ್ಕೊಳಗಾಗಿದ್ದಾಗಿ ಹೇಳಿದರು.
ಭಾರತದ ಪ್ರಜಾಪ್ರಭುತ್ವ ನಾಶವಾಗಿದೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕವಾಗಿ ಎತ್ತಲು ಆರಂಭದಲ್ಲಿ ತಮಗೆ ಧೈರ್ಯವಾಗಿರಲಿಲ್ಲ. ಪ್ರಜಾಪ್ರಭುತ್ವವು ಭಾರತದ ಮೂಲಭೂತ ಸ್ತಂಭ ಮಾತ್ರವಲ್ಲ, ತಮ್ಮ ಅಸ್ತಿತ್ವದ ಭಾಗವೂ ಆಗಿದೆ. ಹೀಗಾಗಿ, ಸಾಕ್ಷ್ಯಗಳಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗಂಭೀರ ಆರೋಪ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ತಾವು ಕಾಯ್ದು ಗಮನಿಸಿದ್ದಾಗಿ ವಿವರಿಸಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಮಾತನಾಡಲು ಶೇ. 100ರಷ್ಟು ಖಚಿತವಾದ ಸಾಕ್ಷ್ಯ ದೊರೆತ ಬಳಿಕವೇ ನಿರ್ಧರಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ ಅನೇಕರು ಈ ವಿಷಯದ ಕುರಿತು ಮೌನವಾಗಿ ಕೆಲಸ ಮಾಡುತ್ತಿದ್ದರು. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿರುವುದು, ಹೆಸರುಗಳನ್ನು ತೆಗೆದುಹಾಕಿರುವುದು ಮತ್ತು ಇತರ ಬದಲಾವಣೆಗಳನ್ನು ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ತಮ್ಮ ಬಳಿ ತಂದರು ಎಂದು ತಿಳಿಸಿದರು.
‘ಇದು ಕೇವಲ 10, 15 ಅಥವಾ 20 ಜನರಿಗೆ ಸಂಬಂಧಿಸಿದ ವಿಷಯವಲ್ಲ. ಲಕ್ಷಾಂತರ ಜನರಿಗೆ ಸಂಬಂಧಿಸಿದ ವಿಷಯವಾಗಿದೆ’ ಎಂದು ಅವರು ಆರೋಪಿಸಿದರು.
ಈ ಸಾಕ್ಷ್ಯಗಳು ದೊರೆತ ಬಳಿಕವೇ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಆರಂಭಿಸಿದೆ ಎಂದು ಹೇಳಿದರು. ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ನಿಜವಾಗಿದ್ದರೆ, ಅವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತವೆ ಎಂಬುದು ಅವರ ವಾದವಾಗಿತ್ತು.
ವಿವಿಧ ರಾಜ್ಯಗಳಲ್ಲಿ ಈ ವಿಷಯದ ಕುರಿತು ಕೆಲಸ ಮಾಡಿದವರ ಕೊಡುಗೆಯನ್ನು ಶ್ಲಾಘಿಸಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಸಂವಿಧಾನದ ಕಾರ್ಯನಿರ್ವಹಣೆಯೇ ಪ್ರಶ್ನಾರ್ಹ
ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಿದ್ದರೆ ಸಂವಿಧಾನವು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
‘ಸಂವಿಧಾನವೇ ಕಾರ್ಯನಿರ್ವಹಿಸದಿದ್ದರೆ ಸಂಸತ್ತಿನಲ್ಲಿ ರೂಪಿಸಲಾದ ಪ್ರತಿಯೊಂದು ಕಾನೂನೂ ಕಾನೂನುಬಾಹಿರವಾಗುತ್ತದೆ. ಅದೇ ರೀತಿ, ಆ ವ್ಯವಸ್ಥೆಯಡಿ ನೇಮಕಗೊಂಡ ಸಾಂವಿಧಾನಿಕ ಹುದ್ದೆಗಳೂ ಕಾನೂನುಬಾಹಿರವಾಗುತ್ತವೆ’ ಎಂದು ಎಚ್ಚರಿಸಿದರು.
ಭಾರತ ಹಿಂದೆಂದೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಆದರೆ ಈಗ ಈ ಪರಿಸ್ಥಿತಿ ಎದುರಾಗಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದರು. ಭಾರತದ ಬಹುಪಾಲು ಜನರು ದೇಶದ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಜ್ಯೋತಿ ಅಸ್ತಮಿಸಿದೆ ಎಂದು ನಂಬಿದ್ದಾರೆ ಎಂದೂ ಹೇಳಿದರು.
ಚುನಾವಣಾ ಸುಧಾರಣೆಗಳ ಅಗತ್ಯದ ಬಗ್ಗೆ ಚರ್ಚಿಸುವಾಗ ಸಮಸ್ಯೆಯ ಆಳವನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು. ಕೇವಲ ಒಬ್ಬ ಅಧಿಕಾರಿಯನ್ನು ಬದಲಾಯಿಸುವುದರಿಂದ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು.
‘ಕೇವಲ ಜ್ಞಾನೇಶ್ ಕುಮಾರ್ ಅವರನ್ನು ಬದಲಾಯಿಸಿದರೆ ಸಾಲದು’
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಭಾವಿಸಬಾರದು ಎಂದು ರಾಹುಲ್ ಗಾಂಧಿ ಹೇಳಿದರು.
‘ಈ ಸಮಸ್ಯೆ ಜ್ಞಾನೇಶ್ ಕುಮಾರ್ ಅವರಿಗಿಂತಲೂ ಆಳವಾಗಿದೆ. ಇದನ್ನು ಪರಿಹರಿಸಲು ಪ್ರಸ್ತುತ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗುತ್ತದೆ. ಆಗಿರುವ ಹಾನಿಯನ್ನು ಸರಿಪಡಿಸಲು ದೀರ್ಘಕಾಲದ ಪ್ರಯತ್ನದ ಅಗತ್ಯವಿದೆ’ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮದ ಆರೋಪವನ್ನು ದೇಶದ್ರೋಹದ ಕೃತ್ಯ ಎಂದು ಬಣ್ಣಿಸಿದ ಅವರು, ಇದು ದೇಶದ ಮೌಲ್ಯಗಳಿಗೆ ಮತ್ತು ದೇಶದ ಆತ್ಮಕ್ಕೆ ವಿರುದ್ಧವಾದದ್ದು ಎಂದು ಹೇಳಿದರು.
ಈ ವಿಷಯವನ್ನು ಸಾಮಾನ್ಯ ರಾಜಕೀಯ ವಿವಾದವಾಗಿ ಪರಿಗಣಿಸಬಾರದು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಅವರು ನೀಡಿದರು. ಈ ಹೋರಾಟವು ಪ್ರಾಣವನ್ನೇ ಅರ್ಪಿಸಲು ಯೋಗ್ಯವಾದದ್ದು ಎಂದು ಹೇಳುವ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಹೋರಾಟ ಮುಂದುವರಿಸುವಂತೆ ಕರೆ ನೀಡಿದರು.
‘ಚುನಾವಣಾ ಆಯುಕ್ತರು ರಾಜರಲ್ಲ, ಜನರ ಸೇವಕರು’
ವಿರೋಧ ಪಕ್ಷಗಳ ಸಂಸದರು ರಾಷ್ಟ್ರಪತಿಗಳನ್ನು ಭೇಟಿಯಾಗಲು ತೆರಳಲಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಕೆಲ ದಿನಗಳ ಹಿಂದೆ ವಿರೋಧ ಪಕ್ಷಗಳ ಸಂಸದರು ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಬಯಸಿದಾಗ ಅವರನ್ನು ವಶಕ್ಕೆ ಪಡೆದು ಬಂಧನದಲ್ಲಿರಿಸಲಾಗಿತ್ತು ಎಂದು ಹೇಳಿದರು.
‘ಚುನಾವಣಾ ಆಯುಕ್ತರು ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ಕೇವಲ ಸೇವೆ ಒದಗಿಸುವವರು ಮತ್ತು ಜವಾಬ್ದಾರಿ ನಿರ್ವಹಿಸುವವರೇ ಹೊರತು ಅವರೇನು ರಾಜರಲ್ಲ’ ಎಂದು ಕಿಡಿಕಾರಿದರು. ಹೀಗಿರುವಾಗ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ಭೇಟಿಯಾಗಲು ನಿರಾಕರಿಸುವ ಅಧಿಕಾರ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
‘ಇದು ಭಾರತದ ಜನರ ಧ್ವನಿಯಾಗಿದೆ. ನೀವು ಈ ದೇಶದ ಶೇ. 65ರಷ್ಟು ಜನರ ಧ್ವನಿಯನ್ನು ಪ್ರತಿನಿಧಿಸುತ್ತೀರಿ. ನಿಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ಅವರಿಗೆ ಹೇಗೆ ಬಂತು? ಅವರು ನಮ್ಮನ್ನು ಭೇಟಿಯಾಗಲೇಬೇಕು’ ಎಂದು ಹೇಳಿದರು.
‘ಅವರು ನಮ್ಮನ್ನು ಭೇಟಿಯಾಗಲೇಬೇಕು, ಮತ್ತು ಅವರು ನಮ್ಮನ್ನು ಎಲ್ಲಿ ಭೇಟಿಯಾಗಲಿದ್ದಾರೆ ಗೊತ್ತಾ? ಅದೇ ಜೈಲಿನ ಕೋಣೆಯಲ್ಲೇ ಅವರು ನಮ್ಮನ್ನು ಭೇಟಿಯಾಗಲಿದ್ದಾರೆ!’ ಎಂದು ರಾಹುಲ್ ಗುಡುಗಿದರು.
ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವುದು ಸಾಂವಿಧಾನಿಕ ವ್ಯವಸ್ಥೆಯ ಭಾಗವಾಗಿರಬೇಕು ಎಂಬುದು ತಮ್ಮ ನಿಲುವು ಎಂದು ಅವರು ಪ್ರತಿಪಾದಿಸಿದರು.
‘ಹೋರಾಟ ಮುಂದುವರಿಸಿದರೆ ಸರಕಾರ ಪತನ’
ಕಳೆದ ಮೂರು–ನಾಲ್ಕು ದಿನಗಳಿಂದ ವಿರೋಧ ಪಕ್ಷಗಳ ಸಂಸದರು ನಡೆಸುತ್ತಿರುವ ಹೋರಾಟದ ಬಗ್ಗೆ ರಾಹುಲ್ ಗಾಂಧಿ ಹೆಮ್ಮೆ ವ್ಯಕ್ತಪಡಿಸಿದರು. ಒಂದು ಗುಂಪಾಗಿ ಅವರು ಸಾಧಿಸಿರುವುದರ ಮಹತ್ವವನ್ನು ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದರು.
‘ನೀವು ಈ ಸರಕಾರದ ಅಡಿಪಾಯವನ್ನೇ ಅಲ್ಲಾಡಿಸಿದ್ದೀರಿ. ಕಳೆದ ಮೂರು–ನಾಲ್ಕು ದಿನಗಳಿಂದ ನಾವು ನಡೆಸುತ್ತಿರುವ ಹೋರಾಟವನ್ನು ಇದೇ ರೀತಿ ಮುಂದುವರಿಸಿದರೆ ಸರಕಾರ ಪತನವಾಗುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇನೆ’ ಎಂದು ಹೇಳಿದರು.
ಭಾರತದ ಜನರ ಬೆಂಬಲವೇ ವಿರೋಧ ಪಕ್ಷಗಳ ಶಕ್ತಿ ಎಂದು ಅವರು ತಿಳಿಸಿದರು. ‘ಭಾರತದ ಜನರ ಧ್ವನಿ ನಮ್ಮೊಂದಿಗೆ ನಿಂತಿದೆ. ಅವರ ಬೆಂಬಲವಿಲ್ಲದೆ ನಮಗೆ ಯಾವುದೇ ಅಸ್ತಿತ್ವವಿಲ್ಲ. ನಮಗೆ ಭಾರತದ ಜನರ ಸಂಪೂರ್ಣ ಬೆಂಬಲವಿದೆ’ ಎಂದರು.
ಬಂಗಾಳ, ಕಾಶ್ಮೀರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಹಿರಿಯ ನಾಯಕರಿಗೆ ಕೊನೆಯಲ್ಲಿ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ, ಎಲ್ಲರೊಂದಿಗೆ ಕೆಲಸ ಮಾಡುತ್ತಿರುವುದು ಗೌರವದ ವಿಷಯವಾಗಿದೆ ಎಂದು ಹೇಳಿದರು.