Maharashtra | ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್ಐಆರ್
ನರೇಂದ್ರ ಪವಾರ್ (Photo source: tv9marathi.com)
ಥಾಣೆ: 22 ವರ್ಷದ ವಿವಾಹಿತ ಮಹಿಳೆಗೆ ಚಾಕು ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಿಜೆಪಿ ಮಾಜಿ ಶಾಸಕ ಹಾಗೂ ವಜಾಗೊಂಡ ಪೊಲೀಸ್ ಸಿಬ್ಬಂದಿಯೋರ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ (DGP) ಸದಾನಂದ ದಾತೆ ಅವರ ನಿರ್ದೇಶನದ ಮೇರೆಗೆ, ಕಲ್ಯಾಣ್ ಪಶ್ಚಿಮ ಕ್ಷೇತ್ರದ ಮಾಜಿ ಶಾಸಕ ನರೇಂದ್ರ ಪವಾರ್ ಮತ್ತು ಪೊಲೀಸ್ ಸಿಬ್ಬಂದಿ ಶೈಲೇಶ್ ಪಾಟೀಲ್ ವಿರುದ್ಧ ಪಢ್ಘಾ ಪೊಲೀಸರು ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಕಲ್ಯಾಣ್‌ನಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ತನ್ನ ಪತಿಯೊಂದಿಗೆ ನಡೆಯುತ್ತಿದ್ದ ಕೌಟುಂಬಿಕ ವಿವಾದವನ್ನು ಬಗೆಹರಿಸಲು ಸಹಾಯ ಮಾಡುವಂತೆ ಪವಾರ್ ಅವರನ್ನು ಸಂಪರ್ಕಿಸಿದ್ದರು. ಸೆಪ್ಟೆಂಬರ್ 13ರಂದು ಸಹಾಯ ಮಾಡುವ ನೆಪದಲ್ಲಿ ನರೇಂದ್ರ ಪವಾರ್ ಆಕೆಯನ್ನು ಕಲ್ಯಾಣ್‌ನಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಭಿವಂಡಿ ತಾಲೂಕಿನ ಬಾಪಗಾಂವ್ ಗ್ರಾಮದ ಫಾರ್ಮ್ ಹೌಸ್‌ಗೆ ಕರೆದೊಯ್ಯಲಾಗಿದೆ.
ಶೈಲೇಶ್ ಪಾಟೀಲ್ ಆಯುಧ ತೋರಿಸಿ ಬೆದರಿಸಿದ್ದಾನೆ. ಮೊದಲು ಬಲವಂತವಾಗಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಪವಾರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಪವಾರ್ ಅವರು ತೆರಳಿದ ಬಳಿಕ ಪಾಟೀಲ್ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಸೆಪ್ಟೆಂಬರ್ 16ರಂದು ಕಾಂಗ್ರೆಸ್ ಕಾರ್ಪೊರೇಟರ್ ಕಾಂಚನ್ ಕುಲಕರ್ಣಿ ಅವರನ್ನು ಸಂಪರ್ಕಿಸಿದ್ದಾರೆ. ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಕುಲಕರ್ಣಿ ಅವರು ಬುಧವಾರ ತಡರಾತ್ರಿ ಆಕೆಯೊಂದಿಗೆ ಪಢ್ಘಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರನ್ನು ಪರಿಶೀಲಿಸಿದ ಬಳಿಕ ಪವಾರ್ ಮತ್ತು ಪಾಟೀಲ್ ವಿರುದ್ಧ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಢ್ಘಾ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಾಂಚನ್ ಕುಲಕರ್ಣಿ, ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕು. ಪಾಟೀಲ್ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.
ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.