Photo Credit : NDTV 


ಹೊಸದಿಲ್ಲಿ: ಪಾಕಿಸ್ತಾನ ಮತ್ತು ಚೀನಾ ನಡುವೆ ಜಂಟಿ ಗಡಿ ಆಯೋಗ ರಚಿಸಿ, ಅದರ ಮೊದಲ ಸಭೆ ನಡೆಸಿರುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಾಕಿಸ್ತಾನ ಮತ್ತು ಚೀನಾ ಚರ್ಚಿಸುತ್ತಿರುವ ಗಡಿ ಪ್ರದೇಶದ ಒಂದು ಭಾಗ ಭಾರತದ ಭೂಪ್ರದೇಶಕ್ಕೆ ಸೇರಿದ್ದು, ಆ ಪ್ರದೇಶದ ಕುರಿತು ಪಾಕಿಸ್ತಾನ ಮತ್ತು ಚೀನಾ ಯಾವುದೇ ಗಡಿ ವ್ಯವಸ್ಥೆ ಮಾಡಿಕೊಳ್ಳಲು ಕಾನೂನುಬದ್ಧ ಅಧಿಕಾರ ಹೊಂದಿಲ್ಲ ಎಂದು ಭಾರತ ಹೇಳಿದೆ .

ಇಸ್ಲಾಮಾಬಾದ್ ನಲ್ಲಿ ಬುಧವಾರ ಪಾಕಿಸ್ತಾನ–ಚೀನಾ ಜಂಟಿ ಗಡಿ ಆಯೋಗದ ಮೊದಲ ಸಭೆ ನಡೆಯಿತು. ಇದನ್ನು ಪಾಕಿಸ್ತಾನವು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ‘ಪ್ರಮುಖ ಮೈಲಿಗಲ್ಲು’ ಎಂದು ಹೇಳಿತು. ಆದರೆ, ಭಾರತ ಈ ಕ್ರಮವನ್ನು ತಿರಸ್ಕರಿಸಿ, ‘ಕಾನೂನು ಆಧಾರವಿಲ್ಲದ ನಾಟಕ’ ಎಂದು ಟೀಕಿಸಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ. ಈ ಪ್ರದೇಶಗಳ ಮೇಲೆ ಪಾಕಿಸ್ತಾನ ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಕುರಿತು ಪಾಕಿಸ್ತಾನ ಯಾವುದೇ ದೇಶದೊಂದಿಗೆ ಒಪ್ಪಂದ ಅಥವಾ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

►1963ರ ಗಡಿ ಒಪ್ಪಂದ

ಭಾರತದ ವಿರೋಧಿಸಲು ಪ್ರಮುಖ ಕಾರಣ 1963ರ ಚೀನಾ–ಪಾಕಿಸ್ತಾನ ಗಡಿ ಒಪ್ಪಂದವಾಗಿದೆ. ಶಿನ್ಜಿಯಾಂಗ್ ಮತ್ತು ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಗಿಲ್ಗಿಟ್–ಬಾಲ್ಟಿಸ್ತಾನ್ ನಡುವಿನ ಗಡಿಯನ್ನು ಗುರುತಿಸುವ ಉದ್ದೇಶದಿಂದ 1963ರ ಮಾರ್ಚ್ 2ರಂದು ಚೀನಾ ಮತ್ತು ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಆದರೆ, ಗಿಲ್ಗಿಟ್–ಬಾಲ್ಟಿಸ್ತಾನ್ ಭಾರತದ ಭೂಪ್ರದೇಶದ ಭಾಗವಾಗಿದ್ದು, ಪಾಕಿಸ್ತಾನ ಅದನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ ಎಂಬುದು ಭಾರತದ ನಿಲುವು. ಹೀಗಾಗಿ, ಭಾರತದ ಭೂಪ್ರದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಚೀನಾ ಮಾಡಿಕೊಂಡ 1963ರ ಒಪ್ಪಂದ ಅಕ್ರಮ ಮತ್ತು ಅಮಾನ್ಯ ಎಂದು ಭಾರತ ಹೇಳಿದೆ.

ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ. ಆಕ್ರಮಿತ ಪ್ರದೇಶಗಳ ಸ್ಥಿತಿಯನ್ನು ಬದಲಾಯಿಸುವ ಅಥವಾ ಪಾಕಿಸ್ತಾನದ ಅಕ್ರಮ ಆಕ್ರಮಣಕ್ಕೆ ಕಾನೂನು ಮಾನ್ಯತೆ ನೀಡುವ ಯಾವುದೇ ಪ್ರಯತ್ನವನ್ನೂ ಭಾರತ ವಿರೋಧಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

►‘ಸಾರ್ವಭೌಮತ್ವದ ಮೇಲೆ ಪರಿಣಾಮವಿಲ್ಲ’

ಭಾರತದ ಭೂಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನ ನಡೆಸುವ ಯಾವುದೇ ಗಡಿ ಸಹಕಾರ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಸಚಿವಾಲಯ ಹೇಳಿದೆ. ಇಂತಹ ಯಾವುದೇ ಒಪ್ಪಂದ ಅಥವಾ ವ್ಯವಸ್ಥೆಯಿಂದ ಈ ಪ್ರದೇಶಗಳ ಮೇಲಿನ ಭಾರತದ ಸಾರ್ವಭೌಮತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಇಂತಹ ‘ನಾಟಕಗಳಲ್ಲಿ ತೊಡಗುವುದನ್ನು’ ಪಾಕಿಸ್ತಾನ ನಿಲ್ಲಿಸಬೇಕು. ಅಕ್ರಮವಾಗಿ ಹಾಗೂ ಬಲವಂತವಾಗಿ ಆಕ್ರಮಿಸಿಕೊಂಡಿರುವ ಭಾರತದ ಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಭಾರತ ಕರೆ ನೀಡಿದೆ.

►ಆಯೋಗದ ಉದ್ದೇಶವೇನು?

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಪ್ರಕಾರ, ಜಂಟಿ ಗಡಿ ಆಯೋಗದ ಉದ್ದೇಶ ಉಭಯ ದೇಶಗಳ ನಡುವೆ ಗಡಿ ಸಂಬಂಧಿತ ಸಹಕಾರ ಹೆಚ್ಚಿಸುವುದು. ಜಂಟಿ ಗಡಿ ಸಮೀಕ್ಷೆ, ವ್ಯಾಪಾರ ವಹಿವಾಟು ಹಾಗೂ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಗಳಿಗೂ ಇದು ದಾರಿ ಮಾಡಿಕೊಡಲಿದೆ ಎಂದು ಪಾಕಿಸ್ತಾನ ಹೇಳಿದೆ.

ಆಯೋಗದ ಉದ್ಘಾಟನಾ ಸಭೆ ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನಡೆಯಿತು. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಮಹಾನಿರ್ದೇಶಕ (ಗಡಿ ಮತ್ತು ಸಾಗರ ವ್ಯವಹಾರಗಳ ಇಲಾಖೆ) ಲಿ ಯಾ ಹಾಗೂ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಹಾನಿರ್ದೇಶಕ (ಚೀನಾ) ಬಿಲಾಲ್ ಮಹಮೂದ್ ಚೌಧರಿ ಅವರು ಸಭೆಯ ಸಹ-ನೇತೃತ್ವ ವಹಿಸಿದರು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ‘X’ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor