ನೋಯ್ಡಾ ಪ್ರತಿಭಟನೆ | ದಿಲ್ಲಿ ವಿವಿ ವಿದ್ಯಾರ್ಥಿನಿ ವಿರುದ್ಧದ NSA ಮೊಕದ್ದಮೆಯನ್ನು ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್
ಬೇರೆ ಪ್ರಕರಣಗಳಿರುವುದರಿಂದ ಜೈಲಿನಿಂದ ಬಿಡುಗಡೆಯಿಲ್ಲ
ಆಕೃತಿ ಚೌಧರಿ (Photo: NDTV)
ಪ್ರಯಾಗರಾಜ್: ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಹಾಗೂ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ಆಕೃತಿ ಚೌಧರಿ (25) ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ನೋಯ್ಡಾ ಪೊಲೀಸರು ಬಂಧಿಸಿದ್ದನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಆಕೃತಿ ವಿರುದ್ಧದ ಪ್ರಕರಣವನ್ನು ‘ಕಲ್ಪಿತ’ ಎಂದು ಹೇಳಿದ ನ್ಯಾಯಾಲಯ, 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಬೇರೆ ಯಾವುದೇ ಪ್ರಕರಣದಲ್ಲಿ ಅವರ ಬಂಧನ ಅಗತ್ಯವಿಲ್ಲದಿದ್ದರೆ ತಕ್ಷಣ ಬಿಡುಗಡೆ ಮಾಡುವಂತೆಯೂ ಸೂಚಿಸಿದೆ.
ಕನಿಷ್ಠ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಎಪ್ರಿಲ್ 13ರಂದು ನೋಯ್ಡಾದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೈಗಾರಿಕಾ ಕಾರ್ಮಿಕರನ್ನು ವಾಹನಗಳಿಗೆ ಬೆಂಕಿ ಹಚ್ಚುವಂತೆ ಹಾಗೂ ಕಲ್ಲು ತೂರಾಟ ನಡೆಸುವಂತೆ ಆಕೃತಿ ಪ್ರಚೋದಿಸಿದ್ದರು ಎಂಬುದು ಪೊಲೀಸರ ಆರೋಪ. ಬೊಟಾನಿಕಲ್ ಗಾರ್ಡನ್ ಬಳಿ ಪ್ರತಿಭಟನೆ ನಡೆಯುವ ಒಂದು ದಿನ ಮುನ್ನ, ಎಪ್ರಿಲ್ 12ರಂದು ಅವರನ್ನು ಬಂಧಿಸಲಾಗಿತ್ತು.
ಆಕೃತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅಚಲ್ ಸಚ್‌ದೇವ್ ಅವರ ವಿಭಾಗೀಯ ಪೀಠ, ಅವರನ್ನು ಬಂಧಿಸುವ ಮತ್ತು ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿ ಪೊಲೀಸರು ಹಲವು ಲೋಪಗಳನ್ನು ಎಸಗಿರುವುದನ್ನು ಗುರುತಿಸಿತು.
ಆದರೆ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ನೋಯ್ಡಾದ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 11 ಎಫ್‌ಐಆರ್ ಗಳಲ್ಲಿ ಆಕೃತಿ ಅವರ ಹೆಸರಿದೆ. ಗಲಭೆ, ಕೊಲೆ ಯತ್ನ, ಬೆಂಕಿ ಹಚ್ಚುವಿಕೆ, ವಿಧ್ವಂಸಕ ಕೃತ್ಯ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ಹಲವು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ಈ ಪೈಕಿ ಐದು ಪ್ರಕರಣಗಳಲ್ಲಿ ಅವರು ಜಾಮೀನು ಪಡೆದಿದ್ದಾರೆ. ಹೀಗಾಗಿ NSA ಅಡಿ ಬಂಧನ ರದ್ದಾದರೂ, ಇತರ ಪ್ರಕರಣಗಳಲ್ಲಿ ಬಂಧನ ಇರುವ ಕಾರಣ ಅವರು ತಕ್ಷಣ ಬಿಡುಗಡೆಯಾಗಲು ಸಾಧ್ಯವಾಗುವುದಿಲ್ಲ.
ಲಕ್ನೋ ಮೂಲದ ಬರಹಗಾರ ಹಾಗೂ ಅನುವಾದಕ ಸತ್ಯಂ ವರ್ಮಾ ಅವರನ್ನು ಹಿಂಸಾಚಾರದ ಪ್ರಮುಖ ‘ಸಂಚುಕೋರ’ ಎಂದು ಪೊಲೀಸರು ಆರೋಪಿಸಿದ್ದಾರೆ.
ನೋಟಿಸ್ ಗೂ ಮುನ್ನ ಬಂಧನ:
ವಿಚಾರಣೆ ವೇಳೆ, ಎಪ್ರಿಲ್ 12ರಂದು ಬೆಳಿಗ್ಗೆ 10.56ಕ್ಕೆ ಆಕೃತಿ ಅವರನ್ನು ಬಂಧಿಸಲಾಗಿತ್ತು. BNSSನ ಸೆಕ್ಷನ್ 130ರ ಅಡಿ ಅವರಿಗೆ ನೋಟಿಸ್ ನೀಡಲಾಗಿತ್ತು ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಪ್ರಶ್ನಿಸಿದ ಪೀಠ, BNSSನ ಸೆಕ್ಷನ್ 126ರ ಅಡಿ ಅವರಿಗೆ ನೋಟಿಸ್ ನೀಡಲಾಗಿತ್ತೇ ಎಂದು ಕೇಳಿತು. ಮುಂಜಾಗ್ರತಾ ಬಂಧನದ ಪ್ರಕ್ರಿಯೆ ಆರಂಭಿಸುವ ಮೊದಲು ಕಾರಣ ತೋರಿಸುವಂತೆ ನೀಡಬೇಕಾದ ಸೆಕ್ಷನ್ 126ರ ನೋಟಿಸ್, ಸೆಕ್ಷನ್ 130ರ ನೋಟಿಸ್ ಗೆ ಪೂರ್ವಭಾವಿಯಾಗಿರಬೇಕು ಎಂದು ನ್ಯಾಯಾಲಯ ಹೇಳಿತು.
ಪೊಲೀಸರ ಸಾಮಾನ್ಯ ದಿನಚರಿಯನ್ನು ಪರಿಶೀಲಿಸಿದ ಪೀಠ, ನೋಟಿಸ್ ನೀಡುವ ಮೊದಲೇ ಆಕೃತಿ ಅವರನ್ನು ಬಂಧಿಸಲಾಗಿತ್ತು ಎಂದು ಹೇಳಿತು.
ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚುವಂತೆ ಆಕೃತಿ ಪ್ರಚೋದಿಸಿದ್ದರು ಎಂಬ ಆರೋಪಕ್ಕೆ ಯಾವ ಸಾಕ್ಷ್ಯವಿದೆ ಎಂದು ನ್ಯಾಯಾಲಯ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.
ಆಗ ನ್ಯಾಯಮೂರ್ತಿ ಶ್ರೀಧರನ್, ಆರೋಪಪಟ್ಟಿ ಸಲ್ಲಿಸಿದ ಬಳಿಕ ಅದರಲ್ಲಿರುವ ಸಾಕ್ಷಿಗಳ ಹೇಳಿಕೆಗಳಲ್ಲಿ ಆಕೃತಿ ಅವರ ಹೆಸರನ್ನು ಎಲ್ಲಿ ಉಲ್ಲೇಖಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕಿತ್ತು ಎಂದು ಹೇಳಿದರು.
ಆಕೃತಿ ವಿರುದ್ಧ ಸಾಕ್ಷಿಗಳು ನೀಡಿರುವ ಹೇಳಿಕೆಗಳನ್ನು ವಕೀಲರು ಉಲ್ಲೇಖಿಸಿದಾಗ, ಪ್ರತಿಭಟನಾಕಾರರನ್ನು ಆಕೃತಿ ಪ್ರಚೋದಿಸಿದ್ದರು ಎಂಬುದನ್ನು ತೋರಿಸುವ ದೃಶ್ಯಾವಳಿ ಎಲ್ಲಿದೆ ಎಂದು ಪೀಠ ನಿರ್ದಿಷ್ಟವಾಗಿ ಪ್ರಶ್ನಿಸಿತು. ಇದಕ್ಕೆ ಹೆಚ್ಚಿನ ಸಮಯಾವಕಾಶ ಕೋರಿದಾಗ, ಆಕೃತಿ ಈಗಾಗಲೇ ಐದು ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ ಎಂದು ಹೇಳಿದ ನ್ಯಾಯಾಲಯ, ಹೆಚ್ಚಿನ ಸಮಯ ನೀಡಲು ನಿರಾಕರಿಸಿತು. ವಿವರವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
‘ಪೊಲೀಸರು ಪುರಾವೆ ನೀಡಿಲ್ಲ’
ಆಕೃತಿ ಪರ ವಕೀಲ ಮಾಣಿಕ್ ಗುಪ್ತಾ ಮಾತನಾಡಿ, ಎಪ್ರಿಲ್ 13ರಂದು ನಡೆದ ಗುಂಪು ಗಲಭೆಯನ್ನು ಪ್ರಚೋದಿಸುವಲ್ಲಿ ಆಕೃತಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಪೊಲೀಸರ ಆರೋಪಕ್ಕೆ ಪೂರಕವಾದ ಯಾವುದೇ ಪುರಾವೆಯನ್ನು ನ್ಯಾಯಾಲಯದ ಮುಂದೆ ಮಂಡಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿದರು.
“ರಾಜ್ಯ ಪೊಲೀಸರು ನಡೆಸಿದ ಎಲ್ಲ ಅಕ್ರಮಗಳನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಭಗತ್ ಸಿಂಗ್ ಅವರ ಹುತಾತ್ಮತೆಯನ್ನು ಸ್ಮರಿಸಲು ಕರವಾಲ್ ನಗರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿದ್ದ ಫೋಟೋಗಳನ್ನೂ ತೋರಿಸಿದ್ದೇವೆ. ಆದರೆ ಪೊಲೀಸರು ಆ ಕಾರ್ಯಕ್ರಮವನ್ನು ಪಿತೂರಿ ಸಭೆ ಎಂದು ಬಿಂಬಿಸಿದ್ದರು” ಎಂದು ಅವರು ಹೇಳಿದರು.
“ಪೊಲೀಸರ ಅಕ್ರಮಗಳನ್ನು ಎತ್ತಿ ತೋರಿಸುವಲ್ಲಿ ನಾವು ಯಶಸ್ವಿಯಾದೆವು. ಹೀಗಾಗಿ ನ್ಯಾಯಾಲಯವು NSA ಅಡಿ ಕೈಗೊಂಡ ಕ್ರಮವನ್ನು ರದ್ದುಪಡಿಸಿ, ಆಡಳಿತದ ಮೇಲೆ ದಂಡ ವಿಧಿಸಿದೆ” ಎಂದರು.
ಜಾಮೀನು ನೀಡುವಾಗಲೂ ಸಾಕ್ಷ್ಯ ಕೊರತೆ:
ಆಕೃತಿ ಜಾಮೀನು ಪಡೆದಿರುವ ಪ್ರಕರಣಗಳಲ್ಲಿಯೂ ಅವರ ವಿರುದ್ಧದ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳ ಕೊರತೆಯನ್ನು ನ್ಯಾಯಾಲಯಗಳು ಗುರುತಿಸಿದ್ದವು.
ಒಂದು ಪ್ರಕರಣದಲ್ಲಿ ನೋಯ್ಡಾ ಸೆಷನ್ಸ್ ನ್ಯಾಯಾಲಯವು, ಆಕೃತಿ ಅವರ ಮೇಲೆ ಆರೋಪ ಹೊರಿಸಲಾಗಿದ್ದ ಘಟನೆ ನಡೆಯುವ ಮೊದಲೇ ಅವರು ಜೈಲಿನಲ್ಲಿದ್ದರು ಎಂದು ದಾಖಲಿಸಿತ್ತು. ‘ಪಿತೂರಿಯಲ್ಲಿ ಅರ್ಜಿದಾರರ ಸಕ್ರಿಯ ಪಾತ್ರವನ್ನು ಸ್ಥಾಪಿಸುವ ಯಾವುದೇ ಸಾಕ್ಷ್ಯವನ್ನು ಕಡತದಲ್ಲಿ ಮಂಡಿಸಲಾಗಿಲ್ಲ’ ಎಂದು ನ್ಯಾಯಾಲಯ ಹೇಳಿತ್ತು.
ಇನ್ನೊಂದು ಪ್ರಕರಣದಲ್ಲಿ, ‘ಅರ್ಜಿದಾರರನ್ನು ಎಪ್ರಿಲ್ 12ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಘಟನೆ ಎಪ್ರಿಲ್ 13ರಂದು ನಡೆದಿದೆ ಎಂದು ಹೇಳಲಾಗಿದೆ. ಘಟನೆ ನಡೆದ ವೇಳೆ ಅವರು ಜೈಲಿನಲ್ಲಿದ್ದ ಕಾರಣ, ಅವರು ಅಪರಾಧ ಎಸಗಿದ್ದಾರೆ ಎಂದು ನಂಬಲು ಯಾವುದೇ ಆಧಾರವಿಲ್ಲ. ಆದ್ದರಿಂದ ಅವರಿಗೆ ಜಾಮೀನು ನೀಡಬೇಕು’ ಎಂದು ನ್ಯಾಯಾಲಯ ಹೇಳಿತ್ತು.