ದಿಲ್ಲಿ ಹೈಕೋರ್ಟ್ | Photo Credit : PTI 

ಹೊಸದಿಲ್ಲಿ: ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 31ರಡಿ ಬಿಎಲ್‌ಎಗಳು ಮತದಾರರ ಭಾವಚಿತ್ರದಂತಹ ಪರಿಶೀಲಿಸಬಹುದಾದ ಮಾಹಿತಿಗೆ ಮಾತ್ರ ಹೊಣೆಗಾರರಾಗಿರುತ್ತಾರೆ ಎಂದು ನ್ಯಾ. ಅಮಿತ್ ಬನ್ಸಾಲ್ ಹೇಳಿದರು.

ಕಾಯ್ದೆಯ ಕಲಂ 31ರ ಪ್ರಕಾರ, ಚುನಾವಣಾ ಪಟ್ಟಿಗಳ ಸಿದ್ಧತೆ, ಪರಿಷ್ಕರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ತಪ್ಪು ಘೋಷಣೆಗಳನ್ನು ನೀಡುವುದು ಅಪರಾಧವಾಗಿದ್ದು, ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಡಿಪಿಸಿಸಿ) ಅಧ್ಯಕ್ಷ ದೇವೇಂದ್ರ ಯಾದವ್ ಹಾಗೂ ಡಿಪಿಸಿಸಿಯ ಬೂತ್ ನಿರ್ವಹಣಾ ಸಮಿತಿಯ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿಯ ಕುರಿತಂತೆ ನ್ಯಾಯಾಲಯವು ಈ ತೀರ್ಪನ್ನು ಹೊರಡಿಸಿದೆ.

ರಾಜಕೀಯ ಪಕ್ಷಗಳ ಬಿಎಲ್‌ಎಗಳು ಎಣಿಕೆ ನಮೂನೆಗಳಲ್ಲಿರುವ ಎಲ್ಲ ವಿವರಗಳನ್ನು ತಾವು ಖುದ್ದಾಗಿ ಪರಿಶೀಲಿಸಿರುವುದಾಗಿ ಪ್ರಮಾಣಿಸಿ ಮುಚ್ಚಳಿಕೆಯನ್ನು ಸಲ್ಲಿಸಬೇಕು ಎಂಬ ಕಡ್ಡಾಯ ನಿಯಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಜನತಾ ಪ್ರಾತಿನಿಧ್ಯ ಕಾಯ್ದೆ ಅಥವಾ ಮತದಾರರ ನೋಂದಣಿ ನಿಯಮಗಳಡಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಅಂತಹ ವೈಯಕ್ತಿಕ ಮುಚ್ಚಳಿಕೆಯನ್ನು ಕೇಳಲು ಚುನಾವಣಾ ಆಯೋಗಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಬಿಎಲ್‌ಎಗಳಿಂದ ವೈಯಕ್ತಿಕ ಪರಿಶೀಲನೆಯ ಮುಚ್ಚಳಿಕೆ ಕೋರುವಿಕೆಯು 1950ರ ಜನತಾ ಪ್ರಾತಿನಿಧ್ಯಕಾಯ್ದೆಯ ಕಲಂ 23 ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಪರಿಶೀಲನೆ ಯೋಜನೆಗೆ ನೇರವಾಗಿ ವಿರುದ್ಧವಾಗಿದೆ. ಚುನಾವಣಾ ನೋಂದಣಿ ಅಧಿಕಾರಿಯು ಸರಿಯಾದ ಪರಿಶೀಲನೆಯ ನಂತರವೇ ಪಟ್ಟಿಗೆ ಹೆಸರು ಸೇರಿಸುವುದನ್ನು ಕಾಯ್ದೆಯು ಕಡ್ಡಾಯಗೊಳಿಸಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿತ್ತು.

ಅಲ್ಲದೆ, ನಿಯಮಗಳ ಪ್ರಕಾರ ಪರಿಶೀಲನೆಯನ್ನು ಶಾಸನಬದ್ಧ ಅಧಿಕಾರಿಗಳೇ ನಡೆಸಬೇಕು ಹೊರತು ಖಾಸಗಿ ವ್ಯಕ್ತಿಗಳು ಅಥವಾ ಪಕ್ಷದ ಪ್ರತಿನಿಧಿಗಳಲ್ಲ. ಬಿಎಲ್‌ಎಗಳ ಮೇಲೆ ವೈಯಕ್ತಿಕ ಪರಿಶೀಲನೆಯ ಜವಾಬ್ದಾರಿಯನ್ನು ಹೇರುವುದು ಶಾಸನಬದ್ಧ ಕರ್ತವ್ಯವನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ ವರ್ಗಾಯಿಸಿದಂತೆ ಆಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor