ಸಾಂಪ್ರದಾಯಿಕ ನೀಲಿ ಜೆರ್ಸಿ ಬದಲಾಯಿಸಿ ಕೇಸರಿ ಬಣ್ಣದ ಜೆರ್ಸಿ ಪರಿಚಯಿಸಿದ ಹಾಕಿ ಇಂಡಿಯಾ
ಟೀಕೆ ವ್ಯಕ್ತವಾಗುತ್ತಿದ್ದಂತೆ ಬಣ್ಣ ಬದಲಾವಣೆಯನ್ನು ಸಮರ್ಥಿಸಿದ ಹಾಕಿ ಇಂಡಿಯಾ
Photo | X
ಹೊಸದಿಲ್ಲಿ : ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಬದಲಾಯಿಸಿ ಕೇಸರಿ ಬಣ್ಣದ ಜೆರ್ಸಿ ಪರಿಚಯಿಸಿರುವ ಹಾಕಿ ಇಂಡಿಯಾದ ನಿರ್ಧಾರವನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವಿರೇನ್ ರಸ್ಕಿನ್ಹಾ ತೀವ್ರವಾಗಿ ಟೀಕಿಸಿದ್ದಾರೆ.
2026ರ ಹಾಕಿ ವಿಶ್ವಕಪ್ ಗೂ ಮೊದಲು ಹಾಕಿ ಇಂಡಿಯಾ ಪುರುಷರ ಮತ್ತು ಮಹಿಳೆಯರ ತಂಡಗಳಿಗೆ ಹೊಸ ಕಿಟ್‌ಗಳನ್ನು ಅನಾವರಣಗೊಳಿಸಿದ್ದು, ಇದರಲ್ಲಿ ನೀಲಿ ಬಣ್ಣದ ಬದಲಿಗೆ ಕೇಸರಿ ಬಣ್ಣವನ್ನು ಪ್ರಮುಖ ಬಣ್ಣವಾಗಿ ಬಳಸಲಾಗಿದೆ. ಹೊಸ ಜೆರ್ಸಿಯು ಮಂಡಲ ಶೈಲಿಯ ವಿನ್ಯಾಸಗಳು, ಭುಜದ ಬಳಿ ತ್ರಿವರ್ಣ ಧ್ವಜದ ಪಟ್ಟಿ ಮತ್ತು ಕೈಯ ಪಟ್ಟಿ ಮತ್ತು ಕೊರಳ ಪಟ್ಟಿ ನೀಲಿ ಬಣ್ಣದಲ್ಲಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಸ್ಕಿನ್ಹಾ ,"ಹಾಕಿ ಇಂಡಿಯಾ ಭಾರತೀಯ ಹಾಕಿಗಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಭಾರತೀಯ ತಂಡದ ಪರಂಪರೆ ಮತ್ತು ಗುರುತು ಯಾವಾಗಲೂ ನೀಲಿ ಬಣ್ಣವೇ ಆಗಿತ್ತು. ನಾನು ಹಲವು ವರ್ಷಗಳ ಕಾಲ ನೀಲಿ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ನಮ್ಮ ಭಾರತೀಯ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಹಾಗಿದ್ದ ಮೇಲೆ ಈ ಕೇಸರಿ ಬಣ್ಣದ ತರ್ಕವೇನು?" ಎಂದು ಪ್ರಶ್ನಿಸಿದ್ದಾರೆ.
ಈ ಬದಲಾವಣೆಯನ್ನು ಸಮರ್ಥಿಸಿಕೊಂಡಿರುವ ಹಾಕಿ ಇಂಡಿಯಾ, "ಇದು ಧೈರ್ಯ, ತ್ಯಾಗ ಮತ್ತು ವಿಜಯದ ಸಂಕೇತವಾಗಿದೆ. ಭಾರತದ ರಾಷ್ಟ್ರಧ್ವಜ ಮತ್ತು ಉದಯಿಸುತ್ತಿರುವ ಸೂರ್ಯನಿಂದ ಪ್ರೇರಿತಗೊಂಡಿರುವ ಇದು ಹೊಸ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ," ಎಂದು ಹೇಳಿದೆ.
ವಿಶ್ವಕಪ್ ಅಭಿಯಾನಕ್ಕೆ ಸಜ್ಜಾದ ಭಾರತ
2026ರ ಹಾಕಿ ವಿಶ್ವಕಪ್ ಆಗಸ್ಟ್ 14 ರಿಂದ 30ರವರೆಗೆ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿದ್ದು , ಭಾಥರದ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿವೆ.
ಡಿ ಗುಂಪಿನಲ್ಲಿರುವ ಭಾರತೀಯ ಪುರುಷರ ತಂಡವು ಲೀಗ್ ಹಂತದಲ್ಲಿ ವೇಲ್ಸ್, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಎದುರಿಸಲಿದೆ. ಅದೇ ರೀತಿ ಡಿ ಗುಂಪಿನಲ್ಲಿರುವ ಮಹಿಳೆಯರ ತಂಡವು ತನ್ನ ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ ಸೆಣಸಲಿದ್ದು, ನಂತರ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.