Punjab | ಪರೀಕ್ಷಾ ಅಕ್ರಮ ಆರೋಪ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ AAP ಕಚೇರಿ ಎದುರು ಬಿಜೆಪಿ ಪ್ರತಿಭಟನೆ

Update: 2026-07-30 13:04 IST

Photo | NDTV

ಹೊಸದಿಲ್ಲಿ: ಪಂಜಾಬ್‌ನಲ್ಲಿ ಪರೀಕ್ಷಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ದಿಲ್ಲಿಯ ಆಮ್ ಆದ್ಮಿ ಪಕ್ಷದ (AAP) ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜುಲೈ 19ರಂದು ನಡೆದ ಔಷಧಾಲಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಬಳಿಕ ಅಕ್ರಮಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ನಿಗದಿಪಡಿಸುವಲ್ಲಿ ಪಂಜಾಬ್ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಆಪ್‌ ಪ್ರಧಾನ ಕಚೇರಿ ಎದುರು ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.

ನೀಟ್ ಪರೀಕ್ಷೆ ವಿವಾದದ ಬಳಿಕ ಕೇಂದ್ರ ಸರಕಾರ ಕೈಗೊಂಡ ಕ್ರಮಗಳೊಂದಿಗೆ ಹೋಲಿಕೆ ಮಾಡಿದ ಬಿಜೆಪಿ ಸಂಸದೆ ಬನ್ಸುರಿ ಸ್ವರಾಜ್, ಆಪ್‌ ಸರಕಾರದ ಪ್ರತಿಕ್ರಿಯೆಯನ್ನು ಪ್ರಶ್ನಿಸಿದರು.

"ಪಂಜಾಬ್‌ನ ಆಪ್‌ ಸರಕಾರವನ್ನು ನಾನು ಪ್ರಶ್ನಿಸಲು ಬಯಸುತ್ತೇನೆ. ರಾಜ್ಯದ ಔಷಧಾಲಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸಂಭವಿಸಿದ ಅಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ಏಕೆ ನಿಗದಿಪಡಿಸಲಾಗಿಲ್ಲ?" ಎಂದು ಪ್ರಶ್ನಿಸಿದರು.

"ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕಾಯ್ದೆಯನ್ನು ಇನ್ನಷ್ಟು ಬಲಿಷ್ಠ ಹಾಗೂ ಕಠಿಣಗೊಳಿಸಿತು. ದಂಡದ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ತ್ವರಿತ ತನಿಖೆ ಮತ್ತು ವಿಚಾರಣೆಗೆ ಅವಕಾಶ ಕಲ್ಪಿಸುವ ನಿಬಂಧನೆಗಳನ್ನು ಜಾರಿಗೆ ತಂದಿತು" ಎಂದು  ಹೇಳಿದರು.

"ಮತ್ತೊಂದೆಡೆ, ಆಪ್‌ ಮತ್ತು ಅದರ ಪಂಜಾಬ್ ಸರಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸಂಪೂರ್ಣ ಮೌನ ವಹಿಸಿದೆ. ಪಂಜಾಬ್ ಶಿಕ್ಷಣ ಸಚಿವರ ರಾಜೀನಾಮೆಯನ್ನು ಇದುವರೆಗೆ ಏಕೆ ಕೇಳಿಲ್ಲ? ಭವಿಷ್ಯ ಅಪಾಯಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಹೊಣೆಗಾರಿಕೆಯನ್ನು ಪ್ರದರ್ಶಿಸಲು ಅದು ಏಕೆ ವಿಫಲವಾಗಿದೆ?" ಎಂದು ಬನ್ಸುರಿ ಸ್ವರಾಜ್ ಪ್ರಶ್ನಿಸಿದರು.

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಕೂಡ ಪಂಜಾಬ್‌ನಲ್ಲಿ ಪದೇ ಪದೇ ನಡೆಯುತ್ತಿರುವ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಪ್‌ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News