×
Ad

ಕೊನೆಗೂ ಜನಗಣತಿ ವೇಳಾಪಟ್ಟಿ ಪ್ರಕಟಿಸಿದ ಗೃಹ ಸಚಿವಾಲಯ

Update: 2026-01-23 08:11 IST

ಸಾಂದರ್ಭಿಕ ಚಿತ್ರ PC: x.com/the_hindu

ಹೊಸದಿಲ್ಲಿ: ಮುಂಬರುವ ಜನಗಣತಿ ಕಾರ್ಯಕ್ಕಾಗಿ ಮನೆಪಟ್ಟಿ ಹಾಗೂ ಮನೆಗಣತಿ ಮತ್ತು ಜನಗಣತಿ ಹಂತಗಳ ವೇಳಾಪಟ್ಟಿಯನ್ನು ಗೃಹ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದೆ. 2021ರ ಜನಗಣತಿಗಾಗಿ ಸಿದ್ಧಪಡಿಸಿದ್ದ ಎಲ್ಲ 33 ಪ್ರಶ್ನೆಗಳ ಪ್ರಶ್ನಾವಳಿಯನ್ನೇ ಈ ಬಾರಿ ಕೂಡ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಕಾರಣ 2021ರ ಜನಗಣತಿ ಮುಂದೂಡಲಾಗಿತ್ತು.

ಮನೆಭೇಟಿ ಹಂತದಲ್ಲಿ ಮಾಹಿತಿ ಸಂಗ್ರಹಣೆ ನಡೆಯಲಿದ್ದು, ಈ ಹಂತವು ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕಟ್ಟಡ ಸಂಖ್ಯೆ, ಗಣತಿ ಮಾಡಲಾಗುವ ಮನೆಯ ಮಹಡಿ, ಗೋಡೆ ಮತ್ತು ಛಾವಣಿಗೆ ಬಳಸಿರುವ ಪ್ರಮುಖ ವಸ್ತುಗಳು, ಮನೆಯ ಬಳಕೆ ಹಾಗೂ ಅದರ ಸ್ಥಿತಿ, ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

ಅದೇ ರೀತಿ, ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ, ಹೆಸರು, ಕುಟುಂಬದ ಮುಖ್ಯಸ್ಥರ ಲಿಂಗ, ಎಸ್ಸಿ/ಎಸ್ಟಿ ಅಥವಾ ಇತರ ವರ್ಗಕ್ಕೆ ಸೇರಿದ ಮಾಹಿತಿಗಳು, ಮನೆಯ ಮಾಲೀಕತ್ವದ ಸ್ಥಿತಿ, ಮನೆಯಲ್ಲಿ ಇರುವ ವಾಸದ ಕೊಠಡಿಗಳ ಸಂಖ್ಯೆ ಹಾಗೂ ಮನೆಯಲ್ಲಿ ವಾಸಿಸುವ ವಿವಾಹಿತ ಜೋಡಿಗಳ ಸಂಖ್ಯೆಯ ಮಾಹಿತಿಯನ್ನೂ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಗಣತಿ ಅಧಿಕಾರಿಗೆ ಮನೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕಾಗಿದ್ದು, ಸೆನ್ಸಸ್ ಆ್ಯಪ್ ಅಥವಾ ಗಣತಿದಾರರ ಮನೆಭೇಟಿಯ ಸಂದರ್ಭದಲ್ಲಿ ಕುಡಿಯುವ ನೀರಿನ ಮುಖ್ಯ ಮೂಲ, ವಿದ್ಯುತ್ ವ್ಯವಸ್ಥೆ, ಶೌಚಾಲಯದ ಲಭ್ಯತೆ ಮತ್ತು ಅದರ ವಿಧ, ತ್ಯಾಜ್ಯ ನೀರಿನ ಹೊರಹೋಗುವ ವ್ಯವಸ್ಥೆ ಹಾಗೂ ಸ್ನಾನ ಸೌಲಭ್ಯಗಳ ವಿವರಗಳನ್ನು ದಾಖಲಿಸಲಾಗುತ್ತದೆ.

ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಮನೆಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದ್ದು, ಜನಗಣತಿ ಹಂತವು 2027ರ ಫೆಬ್ರುವರಿ 9ರಿಂದ 28ರವರೆಗೆ ನಡೆಯಲಿದೆ. 2027ರ ಮಾರ್ಚ್ 1ನ್ನು ಉಲ್ಲೇಖ ದಿನಾಂಕವಾಗಿ ಪರಿಗಣಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News