CJP ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ವಶದಲ್ಲಿದ್ದ ಕಲ್ಲು ತುಂಬಿದ ಟ್ರಕ್ ಹೇಗೆ ಬಂತು?: ದಿಲ್ಲಿ ಪೊಲೀಸರನ್ನು ಪ್ರಶ್ನಿಸಿದ ಕಾಂಗ್ರೆಸ್

Update: 2026-07-31 19:01 IST

Photo Credit : timesofindia.indiatimes.com

ಹೊಸದಿಲ್ಲಿ: ಜುಲೈ 16ರಂದು ಅಪಘಾತದ ಬಳಿಕ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು ಎಂದು ದಿಲ್ಲಿ ಪೊಲೀಸರು ಹೇಳಿರುವ ಕಲ್ಲು ತುಂಬಿದ ಟ್ರಕ್, ನಾಲ್ಕು ದಿನಗಳ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (CJP)ಯ 'ಸಂಸದ್ ಚಲೋ' ಪ್ರತಿಭಟನಾ ಸ್ಥಳ ಹಾಗೂ ನಂತರ ಭಾರತೀಯ ಯುವ ಕಾಂಗ್ರೆಸ್ ಕಚೇರಿ ಎದುರು ಹೇಗೆ ಕಾಣಿಸಿಕೊಂಡಿತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಕುರಿತು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಗುರ್ಮೆಹರ್ ಕೌರ್ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಟ್ರಕ್ ನ ಚಲನವಲನದ ಕುರಿತು ದಿಲ್ಲಿ ಪೊಲೀಸರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

"ನಾವು ಯಾವುದೇ ಪಿತೂರಿ ಸಿದ್ಧಾಂತವನ್ನು ಮಂಡಿಸಲು ಬಂದಿಲ್ಲ. ಈ ಪ್ರಜಾಪ್ರಭುತ್ವ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉತ್ತರ ಪಡೆಯುವ ಹಕ್ಕಿದೆ. ಅದಕ್ಕಾಗಿಯೇ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಈ ನಿಗೂಢ ಹಾಗೂ ಅಪಾಯಕಾರಿ ಟ್ರಕ್ ನ ಕಥೆಯಿಂದಲೇ ಆರಂಭಿಸುತ್ತಿದ್ದೇವೆ" ಎಂದು ಕೌರ್ ಹೇಳಿದರು.

ಅವರ ಪ್ರಕಾರ, ಜುಲೈ 16ರಂದು ಬೆಳಿಗ್ಗೆ ಸುಮಾರು 4 ಗಂಟೆಗೆ ಫಿರೋಜ್ ಷಾ ರಸ್ತೆ–ಕಸ್ತೂರ್ಬಾ ಗಾಂಧಿ ಮಾರ್ಗ್ ಜಂಕ್ಷನ್ನಲ್ಲಿ ಟ್ರಕ್ ಮತ್ತು ಮಾರುತಿ ಇಕೊ ನಡುವೆ ಅಪಘಾತ ಸಂಭವಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎರಡೂ ವಾಹನಗಳನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ವಶಕ್ಕೆ ಪಡೆದಿದ್ದರು.

"ಜುಲೈ 16ರಿಂದ 20ರವರೆಗೆ ಅದೇ ಟ್ರಕ್ ಮತ್ತು ಮಾರುತಿ ಇಕೊ ಪೊಲೀಸ್ ವಶದಲ್ಲಿದ್ದವು. ಆದರೆ ಜುಲೈ 20ರಂದು ಅದೇ ಟ್ರಕ್ ಕಲ್ಲುಗಳಿಂದ ತುಂಬಿದ ಸ್ಥಿತಿಯಲ್ಲಿ ಸಂಸದ್ ಮಾರ್ಗ್ ಮತ್ತು ಜಂತರ್ ಮಂತರ್ ಬಳಿ ಕಾಣಿಸಿಕೊಂಡಿತು. ಬಳಿಕ ಭಾರತೀಯ ಯುವ ಕಾಂಗ್ರೆಸ್ ಕಚೇರಿ ಎದುರು ಸಹ ಕಾಣಿಸಿಕೊಂಡಿತು. ಪೊಲೀಸ್ ವಶದಲ್ಲಿದ್ದ ವಾಹನ ಅಲ್ಲಿಗೆ ಹೇಗೆ ತಲುಪಿತು?" ಎಂದು ಕೌರ್ ಪ್ರಶ್ನಿಸಿದರು.

ಈ ಪ್ರಶ್ನೆಗಳು ಜುಲೈ 28ರಂದು ದಿಲ್ಲಿ ಪೊಲೀಸರು ನೀಡಿದ್ದ ಸ್ಪಷ್ಟೀಕರಣದ ಬೆನ್ನಲ್ಲೇ ಬಂದಿವೆ. ಏಳು ಮಂದಿ ಗಾಯಗೊಂಡ ಅಪಘಾತದ ಬಳಿಕ ಜುಲೈ 16ರಂದು ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.

ಪೊಲೀಸರ ಪ್ರಕಾರ, ಪೊಲೀಸ್ ಠಾಣೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಟ್ರಕ್ ಅನ್ನು ಆರಂಭದಲ್ಲಿ ಠಾಣೆ ಸಮೀಪವೇ ನಿಲ್ಲಿಸಲಾಗಿತ್ತು. ನಂತರ 'ಚಲೋ ಸಂಸದ್' ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ವಾಹನದ ಮಾಲೀಕರಿಗೆ ಅದನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿತ್ತು.

ಜಂತರ್ ಮಂತರ್ ಅಥವಾ ಯಾವುದೇ ರಾಜಕೀಯ ಪಕ್ಷದ ಕಚೇರಿ ಎದುರು ಟ್ರಕ್ ಅನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಲಾಗಿರಲಿಲ್ಲ. ಪ್ರತಿಭಟನಾಕಾರರ ವಿರುದ್ಧದ ಯಾವುದೇ ಪಿತೂರಿಯೊಂದಿಗೆ ಟ್ರಕ್ ಅನ್ನು ಲಿಂಕ್ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

"ಟ್ರಕ್ ಅಥವಾ ಅದರಲ್ಲಿದ್ದ ಕಲ್ಲುಗಳೊಂದಿಗೆ ಪ್ರತಿಭಟನಾಕಾರರಿಗೆ ಯಾವುದೇ ಸಂಬಂಧವಿದೆ ಎಂದು ನಾವು ಯಾವುದೇ ಹಂತದಲ್ಲೂ ಆರೋಪಿಸಿಲ್ಲ. ಪರಿಶೀಲಿಸದ ಮಾಹಿತಿಯನ್ನು ಸಾರ್ವಜನಿಕರು ಪ್ರಸಾರ ಮಾಡಬಾರದು" ಎಂದು ಪೊಲೀಸರು ಮನವಿ ಮಾಡಿದ್ದಾರೆ.

►ವೀಡಿಯೊದಿಂದ ಆರಂಭವಾದ ವಿವಾದ

ಜುಲೈ 20ರಂದು HR63 E 6865 ನೋಂದಣಿ ಸಂಖ್ಯೆಯ ಕಲ್ಲು ತುಂಬಿದ ಟ್ರಕ್ ಜಂತರ್ ಮಂತರ್ ಬಳಿ ನಿಂತಿದ್ದ ವೀಡಿಯೊವನ್ನು CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಕ್ಸ್ನಲ್ಲಿ ಹಂಚಿಕೊಂಡಿದ್ದರು.

"ಕಲ್ಲುಗಳಿಂದ ತುಂಬಿದ ಟ್ರಕ್ ಅನ್ನು ಜಂತರ್ ಮಂತರ್ನಲ್ಲಿ ನಿಲ್ಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಶಾಂತಿಯುತ CJP ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆಯೇ?" ಎಂದು ಅವರು ಬೆಳಿಗ್ಗೆ 6.24ಕ್ಕೆ ಪೋಸ್ಟ್ ಮಾಡಿದ್ದರು.

ಬಳಿಕ ಇದೇ ಟ್ರಕ್ ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿ ಎದುರು ಕಾಣಿಸಿಕೊಂಡಿತ್ತು. ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿದ್ದ ದಿಲ್ಲಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಲಕ್ರಾ, "ಪ್ರವೇಶ ನಿಷೇಧಿತ ವಲಯದಲ್ಲಿ ಈ ಟ್ರಕ್ ಹೇಗೆ ನಿಂತಿದೆ? ಇದು ಮೂರು ದಿನಗಳಿಂದ ಇಲ್ಲೇ ಇದೆ. ಸಂಸತ್ ಇಲ್ಲೇ ಇದೆ. ಈ ಟ್ರಕ್ ಇಲ್ಲಿ ಏಕೆ ನಿಂತಿದೆ? ಯಾರ ಬಳಿಯೂ ಉತ್ತರವಿಲ್ಲ. ದಿಲ್ಲಿ ಪೊಲೀಸರು ಇದನ್ನು ಏಕೆ ತೆರವುಗೊಳಿಸುತ್ತಿಲ್ಲ?" ಎಂದು ಪ್ರಶ್ನಿಸಿದ್ದರು.

ನಂತರ Times of India ಜೊತೆ ಮಾತನಾಡಿದ ಲಕ್ರಾ, ತಾವು ಪೊಲೀಸರಿಗೆ ಮಾಹಿತಿ ನೀಡಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಗಂಟೆಯೊಳಗೆ ಟ್ರಕ್ ಅನ್ನು ಅಲ್ಲಿಂದ ತೆರವುಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News