ಕಮರಲಿದೆಯೇ ಭಾರತೀಯರ ಅಮೆರಿಕದ ಕನಸು? ಓದು ಮುಗಿಸಿ ಉದ್ಯೋಗ ಮಾಡಲು 95 ಲಕ್ಷ ರೂ. ಫೀಸ್ ಕಟ್ಟುವ ಪ್ರಸ್ತಾಪ!
ಡೊನಾಲ್ಡ್ ಟ್ರಂಪ್ | Photo Credit : PTI
ಅಧ್ಯಯನದ ನಂತರ ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವ ವಿದೇಶಿ ಪದವೀಧರರ ಮೇಲೆ 1 ಲಕ್ಷ ಅಮೆರಿಕದ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸುತ್ತಿದ್ದಾರೆ.
ಅನೇಕ ದಶಕಗಳಿಂದ ಅಮೆರಿಕದಲ್ಲಿ ಪದವಿ ಪಡೆಯುವುದು ಎಂದರೆ ಅಮೂಲ್ಯವಾದ ಕೆಲಸದ ಅನುಭವದ ಭರವಸೆ ಸಿಗುವುದಾಗಿತ್ತು. ಅದೇ ಕಾರಣದಿಂದ ವಿದೇಶಿ ವಿದ್ಯಾರ್ಥಿಗಳನ್ನು ಅಮೆರಿಕ ಆಕರ್ಷಿಸಿದೆ. ಆದರೆ ಇನ್ನು ಮುಂದೆ ಈ ಮಾರ್ಗ ಕಷ್ಟವಾಗಲಿದೆ. ಅಧ್ಯಯನದ ನಂತರ ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವ ವಿದೇಶಿ ಪದವೀಧರರ ಮೇಲೆ 1 ಲಕ್ಷ ಅಮೆರಿಕದ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಗಣಿಸುತ್ತಿದ್ದಾರೆ. ಜೊತೆಗೆ, ಸರ್ಕಾರದ ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳು ದೇಶದಲ್ಲಿ ಎಷ್ಟು ಕಾಲ ಉಳಿಯಬಹುದು ಎಂಬ ಅವಧಿಯನ್ನು ಮಿತಿಗೊಳಿಸುವ ಮೂಲಕ ವಿದ್ಯಾರ್ಥಿ ವೀಸಾ ನಿಯಮಗಳನ್ನು ಬಿಗಿಗೊಳಿಸುತ್ತಿದ್ದಾರೆ.
ಈ ಬದಲಾವಣೆಗಳು ಜಾರಿಗೆ ಬಂದಲ್ಲಿ ಅಮೆರಿಕದ ವಿದ್ಯಾರ್ಥಿ ವೀಸಾ ವ್ಯವಸ್ಥೆಗೆ ಅತ್ಯಂತ ಮಹತ್ವದ ಪರಿಷ್ಕರಣೆಯಾಗಲಿದೆ. ಈ ಪರಿಷ್ಕರಣೆಯಿಂದಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಎಷ್ಟು ಕಾಲ ಉಳಿಯಬಹುದು ಎನ್ನುವುದರ ಮೇಲೆ ಮಿತಿ ಬೀಳಲಿದ್ದು, ಪದವಿಯ ನಂತರ ಅವರು ಉದ್ಯೋಗಕ್ಕೆ ಸೇರುವ ವೆಚ್ಚದ ಮೇಲೂ ಪರಿಣಾಮ ಬೀರಲಿದೆ.
►ಒಂದು ಲಕ್ಷ ಡಾಲರ್ ಪ್ರಸ್ತಾಪವೇನು?
ವರದಿಗಳ ಪ್ರಕಾರ, ಪ್ರಸ್ತಾಪಿತ ಶುಲ್ಕವು ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ಕಾರ್ಯಕ್ರಮಕ್ಕೆ ಅನ್ವಯಿಸುತ್ತದೆ. OPT ಎಂದರೆ ಅಮೆರಿಕದಲ್ಲಿ ಕಾಲೇಜು ಅಧ್ಯಯನದ ನಂತರ ಪಡೆಯುವ ಉದ್ಯೋಗ ತರಬೇತಿ ಕಾರ್ಯಕ್ರಮವಾಗಿದೆ. ಪ್ರಸ್ತುತ F-1 ವೀಸಾದಲ್ಲಿ ಅಮೆರಿಕದಲ್ಲಿ ಓದುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ತಮ್ಮ ಅಧ್ಯಯನದ ಕ್ಷೇತ್ರದಲ್ಲಿ ಕೆಲಸ ಪಡೆದು ಒಂದು ವರ್ಷದವರೆಗೆ ಅಮೆರಿಕದಲ್ಲಿ ಉಳಿಯಬಹುದು. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಭಾಗದ ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ಕೆಲಸ ಮಾಡಬಹುದಾಗಿದೆ.
ಈ ಅವಧಿಯು ಪದವೀಧರರಿಗೆ ಕೆಲಸದ ಅನುಭವ ಗಳಿಸಲು ಮತ್ತು ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹೀಗೆ ಪದವಿ ಗಳಿಸಿದವರು H-1B ಕೆಲಸದ ವೀಸಾಗೆ ವರ್ಗಾವಣೆಗೊಳ್ಳುತ್ತಾರೆ. ಇದೀಗ ಟ್ರಂಪ್ ಆಡಳಿತವು ಈ ಅವಕಾಶಕ್ಕೆ ಒಂದು ಲಕ್ಷ ಡಾಲರ್ (90 ಲಕ್ಷ ರೂ.) ಬೆಲೆಯನ್ನು ಲಗತ್ತಿಸುವ ಬಗ್ಗೆ ಆಲೋಚಿಸುತ್ತಿದೆ.
ಈ ಪ್ರಸ್ತಾಪದ ಬಗ್ಗೆ ಇದೀಗ ಅಮೆರಿಕದ ಗೃಹ ಭದ್ರತಾ ಇಲಾಖೆಯೊಳಗೆ ಚರ್ಚೆ ನಡೆಯುತ್ತಿದೆಯೇ ವಿನಾ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ವಿದ್ಯಾರ್ಥಿಗಳು ಸ್ವತಃ ಅಥವಾ ಅವರನ್ನು ನೇಮಿಸಿಕೊಳ್ಳುವ ಕಂಪೆನಿಗಳು ಶುಲ್ಕವನ್ನು ಪಾವತಿಸಬೇಕೇ ಎಂದು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಏನೇ ಆದರೂ, ಅಮೆರಿಕದಲ್ಲಿ ಉದ್ಯೋಗ ಬಯಸುವ ಅಂತಾರಾಷ್ಟ್ರೀಯ ಪದವೀಧರರಿಗೆ ಈವರೆಗೆ ಪ್ರಸ್ತಾಪಿಸಲಾದ ಅತಿದೊಡ್ಡ ಆರ್ಥಿಕ ಅಡೆತಡೆಗಳಲ್ಲಿ ಇದು ಒಂದಾಗಲಿದೆ.
►ವಿದ್ಯಾರ್ಥಿಗಳಿಗೆ OPT ಏಕೆ ಮುಖ್ಯವಾಗುತ್ತದೆ?
ಅನೇಕ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ಓದುವುದು ಕೇವಲ ಪದವಿ ಪಡೆಯುವ ಉದ್ದೇಶ ಮಾತ್ರವಾಗಿರುವುದಿಲ್ಲ. ಅಮೆರಿಕದ ಓದಿಗೆ ಕುಟುಂಬಗಳು ಲಕ್ಷಾಂತರ, ಕೆಲವೊಮ್ಮೆ ಕೋಟ್ಯಂತರ, ವೆಚ್ಚ ಮಾಡಲು ಮುಖ್ಯ ಕಾರಣ ಅಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎನ್ನುವುದೇ ಆಗಿರುತ್ತದೆ. OPT ಮೂಲಕ ಕೆಲಸ ಮಾಡುವುದರಿಂದ ಪದವೀಧರರು ತಮ್ಮ ಹೂಡಿಕೆಯ ಒಂದು ಭಾಗವನ್ನು ಮರುಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ, ಅಂತರರಾಷ್ಟ್ರೀಯ ಉದ್ಯೋಗದ ಅನುಭವ ಪಡೆಯಲು ಹಾಗೂ ದೀರ್ಘಾವಧಿಯ ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ಸುಧಾರಿಸಿಕೊಳ್ಳಲು ಅವಕಾಶ ದೊರೆಯುತ್ತದೆ.
ಇದೀಗ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿದಲ್ಲಿ ಉದ್ಯೋಗದಾತರು ಅಂತರರಾಷ್ಟ್ರೀಯ ಪದವೀಧರರನ್ನು ನೇಮಿಸಿಕೊಳ್ಳುವ ಮೊದಲು ಎರಡು ಬಾರಿ ಯೋಚಿಸಬಹುದು. ಕಂಪೆನಿಗಳು ಈ ಮೊತ್ತವನ್ನು ಪಾವತಿಸಬೇಕೆಂದು ನಿರೀಕ್ಷಿಸಿದಲ್ಲಿ ಅಮೆರಿಕದ ವಿದ್ಯಾರ್ಥಿಗಳಿಗೆ ಆದ್ಯತೆ ಸಿಗಬಹುದು. ವಿದ್ಯಾರ್ಥಿಗಳೇ ಪಾವತಿಸಬೇಕು ಎಂದು ನಿರೀಕ್ಷಿಸಿದಲ್ಲಿ ಅನೇಕರಿಗೆ ಅದನ್ನು ಭರಿಸುವುದು ಸಾಧ್ಯವಾಗದೇ ಇರಬಹುದು.
ಹೀಗಾಗಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ತಜ್ಞರು, ಈ ಪ್ರಸ್ತಾಪದ ಬಳಿಕ ಅಮೆರಿಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆಕರ್ಷಕ ತಾಣವಾಗಿ ಉಳಿಯದು ಎಂದು ಹೇಳುತ್ತಿದ್ದಾರೆ. 2024ರಲ್ಲಿ ಸುಮಾರು 4.19 ಲಕ್ಷ ವಿದ್ಯಾರ್ಥಿಗಳು OPT ಕಾರ್ಯಕ್ರಮದಡಿ ಅಮೆರಿಕದಲ್ಲಿ ಕೆಲಸದ ತರಬೇತಿ ಪಡೆದಿದ್ದಾರೆ.
►ಮತ್ತೊಂದು ದೊಡ್ಡ ಬದಲಾವಣೆ
OPT ಶುಲ್ಕ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಅಮೆರಿಕದಲ್ಲಿ ಎಷ್ಟು ಕಾಲ ಉಳಿದುಕೊಳ್ಳಬಹುದು ಎನ್ನುವ ನಿಯಮದಲ್ಲೂ ಅಮೆರಿಕ ಸರ್ಕಾರ ಬದಲಾವಣೆ ತರುತ್ತಿದೆ. ಅನೇಕ ವರ್ಷಗಳಿಂದ ವಿದ್ಯಾರ್ಥಿಗಳು "duration of status" ಎನ್ನುವ ವ್ಯವಸ್ಥೆಯಡಿ ಅಮೆರಿಕಕ್ಕೆ ಆಗಮಿಸುತ್ತಿದ್ದರು. ಸರಳವಾಗಿ ಹೇಳಬೇಕೆಂದರೆ, ಪೂರ್ಣ ಸಮಯದ ವಿದ್ಯಾರ್ಥಿಯಾಗಿ ಉಳಿದು ವೀಸಾದ ನಿಯಮಗಳನ್ನು ಪಾಲಿಸುವವರೆಗೆ ದೇಶದಲ್ಲಿ ಉಳಿಯಬಹುದು. ಈ ವಾಸ್ತವ್ಯಕ್ಕೆ ಯಾವುದೇ ನಿಗದಿತ ಅಂತಿಮ ಗಡುವು ಇರಲಿಲ್ಲ.
ಆ ವ್ಯವಸ್ಥೆ ಇನ್ನು ಬದಲಾಗಲಿದೆ. ಹೊಸ ನಿಯಂತ್ರಣದ ಅಡಿಯಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳವರೆಗೆ ಅಮೆರಿಕದಲ್ಲಿ ಉಳಿಯಲು ಅನುಮತಿ ಸಿಗಲಿದೆ. ಆದರೆ ಪದವಿ, ಪಿಎಚ್ಡಿ, ವೈದ್ಯಕೀಯ ಕಾರ್ಯಕ್ರಮ ಅಥವಾ ಸಂಶೋಧನೆ ಪೂರ್ಣಗೊಳ್ಳಲು ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಅಧಿಕೃತ ವಾಸ್ತವ್ಯದ ಅವಧಿ ಮುಗಿಯುವ ಮೊದಲು ವಿಸ್ತರಣೆಗಾಗಿ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನಿಯಮವು ಅಮೆರಿಕದಲ್ಲಿ ಕೆಲಸ ಮಾಡುವ ಎಕ್ಸ್ಚೇಂಜ್ ವಿಸಿಟರ್ಗಳು ಹಾಗೂ ವಿದೇಶಿ ಪತ್ರಕರ್ತರಿಗೂ ಅನ್ವಯಿಸುತ್ತದೆ. ಆದರೆ ಈ ನಿಯಮ ಅಧಿಕೃತವಾಗಿ ಜಾರಿಗೆ ಬರುವ ಮೊದಲು ಅಮೆರಿಕದ ಸಂಸತ್ತಿನ ಒಪ್ಪಿಗೆ ಸಿಗಬೇಕಿದೆ.
►ಭಾರತೀಯ ವಿದ್ಯಾರ್ಥಿಗಳ ಮೇಲೆ ಯಾವ ಪರಿಣಾಮವಾಗಲಿದೆ?
ಅಮೆರಿಕದ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಪ್ರಸ್ತುತ 3.3 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಾಗಿ ದಾಖಲಾಗಿದ್ದಾರೆ. ಅಮೆರಿಕದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ತಕ್ಷಣಕ್ಕೆ ತಮ್ಮ ನಿರ್ಧಾರ ಬದಲಿಸಬೇಕಾದ ಅಗತ್ಯವಿಲ್ಲ. ಪ್ರಸ್ತುತ ಒಂದು ಲಕ್ಷ ಡಾಲರ್ನ OPT ಶುಲ್ಕ ಕೇವಲ ಪ್ರಸ್ತಾವನೆಯಾಗಿದೆ. ನಾಲ್ಕು ವರ್ಷಗಳ ವೀಸಾ ನಿಯಮವೂ ಇನ್ನೂ ಜಾರಿಗೆ ಬಂದಿಲ್ಲ. ಆದರೆ ಅಮೆರಿಕದ ವಲಸೆ ನೀತಿಯ ದಿಕ್ಕು ಬದಲಾಗುತ್ತಿದೆ. ಹೀಗಾಗಿ ಅಮೆರಿಕದಲ್ಲಿ ಪದವಿ ಪಡೆದು ವೃತ್ತಿ ಹುಡುಕುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗಬಹುದು.