"ದೇಶಾದ್ಯಂತ SIR ಕೈಗೊಳ್ಳುವುದು ಕಾನೂನುಬಾಹಿರ": ಜ್ಞಾನೇಶ್ ಕುಮಾರ್ ಕ್ರಮಗಳ ವಿರುದ್ಧ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ರಿಂದ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್
► "ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿಯಬೇಕೆಂದು ನೀವು ಬಯಸುತ್ತೀರಾ? ಹಾಗಾದರೆ..." ಆರ್.ಕೆ. ಸಿಂಗ್ ಹೇಳಿದ್ದೇನು? ► ಸಿಇಸಿ, ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಚುನಾವಣೆ ಬಹಿಷ್ಕರಿಸುವಂತೆ ವಿಪಕ್ಷಗಳಿಗೆ ಕರೆ
ಜ್ಞಾನೇಶ್ ಕುಮಾರ್ | ಆರ್.ಕೆ. ಸಿಂಗ್ (Photo: PTI)
ಹೊಸದಿಲ್ಲಿ: ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ಅವರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. 2003ರ ಬಳಿಕ ಮತದಾರರ ನೋಂದಣಿ ಅಧಿಕಾರಿಗಳು ಪಟ್ಟಿಗೆ ಸೇರಿಸಿದ್ದ ಎಲ್ಲ ಮತದಾರರ ಹೆಸರುಗಳನ್ನು ಯಾವುದೇ ಆಧಾರವಿಲ್ಲದೆ, ಯಾವುದೇ ವಿಚಾರಣೆ ನಡೆಸದೆ ಹಾಗೂ ನೋಂದಾಯಿತ ಮತದಾರರಿಗೆ ಶೋಕಾಸ್ ನೋಟಿಸ್ ನೀಡದೆ ತೆಗೆದುಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕ್ರಮವು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ ಎಂದು ಆರ್.ಕೆ. ಸಿಂಗ್ ಹೇಳಿದ್ದಾರೆ.
ಈ ಕುರಿತು ಆರ್.ಕೆ. ಸಿಂಗ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಿಇಸಿ ಮತ್ತು ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಚುನಾವಣೆಯನ್ನು ಬಹಿಷ್ಕರಿಸುವಂತೆ ವಿರೋಧ ಪಕ್ಷಗಳಿಗೆ ಒತ್ತಾಯಿಸಿದ್ದಾರೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿಯಬೇಕೆಂದು ನೀವು ಬಯಸುತ್ತೀರಾ? ಹಾಗಾದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಅವರ ಬಾಸ್‌ಗಳು ಎಸ್ಐಆರ್ ಹೆಸರಿನಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಕಳೆದ 10 ತಿಂಗಳ ಅವಧಿಯಲ್ಲಿ, ಭಾರತೀಯ ಚುನಾವಣಾ ಆಯೋಗದ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎಸ್ಐಆರ್ ಪ್ರಕ್ರಿಯೆಯ ವಿವಿಧ ಅಂಶಗಳಿಗೆ ಸಂಬಂಧಿಸಿ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು Indian Express ವರದಿ ಮಾಡಿತ್ತು. ಹೊಸ ಮತದಾರರನ್ನು ಸೇರ್ಪಡೆಗೊಳಿಸುವುದು ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ವಿಚಾರದಲ್ಲಿ ತಮ್ಮ ಗಮನಕ್ಕೆ ತರದೆ ಕೈಗೊಂಡ ಹಲವು ನಿರ್ಧಾರಗಳಿಗೆ ಸಂಧು ಮತ್ತು ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯು ತಿಳಿಸಿತ್ತು.
ಬಿಹಾರದ ಆರಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಆರ್.ಕೆ. ಸಿಂಗ್, ಸೆಕ್ಷನ್ 21ರ ಪ್ರಕಾರ, ವಿಶೇಷ ಪರಿಷ್ಕರಣೆಯನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಪ್ರತಿಯೊಂದು ಪ್ರಕರಣದಲ್ಲೂ ಅದಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಹಾಗೂ ಯಾವುದೇ ಒಂದು ಕ್ಷೇತ್ರ ಅಥವಾ ಕ್ಷೇತ್ರದ ನಿರ್ದಿಷ್ಟ ಭಾಗಕ್ಕೆ ಮಾತ್ರ ಇಂತಹ ಪರಿಷ್ಕರಣೆ ಅನ್ವಯಿಸಬೇಕು. ದೇಶಾದ್ಯಂತ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕೈಗೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ನೀಡಿದ ವಿನಾಯಿತಿ ಸಾಮಾನ್ಯ ನಿಯಮವಾಗಲು ಸಾಧ್ಯವಿಲ್ಲ. ಎಸ್‌ಐಆರ್ ಅನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಆದೇಶವು ತಪ್ಪು. ಈ ನಿರ್ಧಾರವನ್ನು ಪೂರ್ಣ ಆಯೋಗವೇ ತೆಗೆದುಕೊಂಡಿದೆಯೇ ಅಥವಾ ಜ್ಞಾನೇಶ್ ಕುಮಾರ್ ಮಾತ್ರವೇ ತೆಗೆದುಕೊಂಡಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಸೆಕ್ಷನ್ 21ರ ಪ್ರಕಾರ, ಅಧಿಸೂಚನೆ ಹೊರಡಿಸಿದ ಸಮಯದಲ್ಲಿ ಚಾಲ್ತಿಯಲ್ಲಿದ್ದ ಮತದಾರರ ಪಟ್ಟಿಯು ಪರಿಷ್ಕರಣೆ ಪೂರ್ಣಗೊಳ್ಳುವವರೆಗೆ ಮಾನ್ಯವಾಗಿರಬೇಕು; ಈ ಪರಿಷ್ಕರಣೆಯು ಎಲ್ಲಾ ಮೇಲ್ಮನವಿಗಳ ಇತ್ಯರ್ಥದ ನಂತರವಷ್ಟೇ ಪೂರ್ಣಗೊಳ್ಳುತ್ತದೆ. ಆದರೆ, ಮೇಲ್ಮನವಿಗಳು ಬಾಕಿಯಿದ್ದಾಗಲೇ, ಹೆಸರುಗಳನ್ನು ಕೈಬಿಟ್ಟು ಸಿದ್ಧಪಡಿಸಿದ ಹೊಸ ಪಟ್ಟಿಯನ್ನು ಚುನಾವಣೆಯಲ್ಲಿ ಬಳಸಲಾಯಿತು ಎಂದು ಹೇಳಿದರು.
ಸೆಕ್ಷನ್ 22ನ್ನು ಉಲ್ಲೇಖಿಸಿದ ಅವರು, ಮತದಾರರ ಪಟ್ಟಿಯಿಂದ ಮತದಾರರೊಬ್ಬರ ಹೆಸರನ್ನು ತೆಗೆದುಹಾಕುವ ಅಧಿಕಾರ ಕೇವಲ ಮತದಾರರ ನೋಂದಣಿ ಅಧಿಕಾರಿಗೆ (ERO) ಮಾತ್ರ ಇದೆ. ಅದರೂ ಕೂಡ ಆ ಸೆಕ್ಷನ್‌ನಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಕಾರಣಗಳ ಆಧಾರದ ಮೇಲೆ, ಸೂಕ್ತ ವಿಚಾರಣೆ ನಡೆಸಿದ ಬಳಿಕ, ಸಂಬಂಧಪಟ್ಟ ವ್ಯಕ್ತಿಗೆ ತನ್ನ ವಾದ ಮಂಡಿಸಲು ಸಮಂಜಸವಾದ ಅವಕಾಶ ನೀಡಿದ ನಂತರ ಹಾಗೂ ERO ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಗಳ ವಿಲೇವಾರಿ ಬಳಿಕ ಮಾತ್ರ ಹೆಸರು ತೆಗೆದುಹಾಕಬಹುದು ಎಂದು ಹೇಳಿದ್ದಾರೆ.
ಜ್ಞಾನೇಶ್ ಕುಮಾರ್ ಅವರು 2003ರ ನಂತರ ERO ಗಳಿಂದ ಪಟ್ಟಿ ಮಾಡಿದ ಎಲ್ಲಾ ಮತದಾರರ ಹೆಸರನ್ನು ಯಾವುದೇ ಆಧಾರವಿಲ್ಲದೆ, ಯಾವುದೇ ವಿಚಾರಣೆಯಿಲ್ಲದೆ ಮತ್ತು ನೋಂದಾಯಿತ ಮತದಾರರಿಗೆ ಯಾವುದೇ ಶೋಕಾಸ್ ನೋಟಿಸ್ ನೀಡದೆ ತೆಗೆದುಹಾಕಿದ್ದಾರೆ. ಇದು ಸ್ಪಷ್ಟವಾಗಿ ಕಾನೂನು ಬಾಹಿರವಾಗಿದೆ ಎಂದು ಸಿಂಗ್ ಹೇಳಿದರು.
ಹೆಸರು ತೆಗೆದಿರುವ ವ್ಯಕ್ತಿಗಳು ಹೊಸದಾಗಿ ಮತದಾರರಾಗಿ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ನೋಂದಣಿಗೆ ಅರ್ಹರು ಎಂಬುದಕ್ಕೆ ಪುರಾವೆ ನೀಡಬೇಕು ಎಂದು ಅವರು ತಿಳಿಸಿದರು. ಅವರು ಲಾಲ್ ಬಾಬು ಹುಸೇನ್ ಮತ್ತು ಇತರರ ಪ್ರಕರಣದಲ್ಲಿ ವಿರುದ್ಧ ಚುನಾವಣಾ ನೋಂದಣಿ ಅಧಿಕಾರಿ ಮತ್ತು ಇತರರು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿದರು.
ನಮೂನೆ 6, ನಮೂನೆ 7 ಮತ್ತು "ತಾರ್ಕಿಕ ವ್ಯತ್ಯಾಸ"
ಮುಖ್ಯ ಚುನಾವಣಾ ಆಯುಕ್ತರು (CEC) ನಮೂನೆ 6ಕ್ಕೆ ಹೊಸ ಅನುಬಂಧವೊಂದನ್ನು ಸೇರಿಸಿದ್ದಾರೆ ಎಂದು ಶ್ರೀ ಸಿಂಗ್ ಹೇಳಿದರು. ಫಾರ್ಮ್ 6 ಅನ್ನು ಕಾನೂನುಬದ್ಧ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾಗಿರುವುದರಿಂದ, ಈ ಬದಲಾವಣೆ ಇಬ್ಬರು ಚುನಾವಣಾ ಆಯುಕ್ತರ ಅಭಿಪ್ರಾಯಗಳಿಗೆ ವಿರುದ್ಧವಾಗಿರುವುದರಿಂದ ಹಾಗೆ ಮಾಡಲು ಅವರಿಗೆ ಅಧಿಕಾರವಿರಲಿಲ್ಲ ಎಂದು ಹೇಳಿದರು.
ಚುನಾವಣಾ ಆಯೋಗದ ನಿರ್ಧಾರಗಳನ್ನು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಕೈಗೊಳ್ಳಬೇಕು. ಫಾರ್ಮ್‌ಗೆ ಹೊಸ ಅನುಬಂಧವನ್ನು ಸೇರಿಸುವುದಕ್ಕೆ ಬಹುಮತದ ವಿರೋಧವಿತ್ತು. ಹೀಗಾಗಿ, ಹೊಸ ಅನುಬಂಧವನ್ನು ಸೇರಿಸಿರುವುದು ಆಯೋಗದ ಸ್ವಂತ ನಿರ್ಧಾರಕ್ಕೆ ವಿರುದ್ಧವಾಗಿದೆ. ಹಾಗಾದರೆ ಅದನ್ನು ಏಕೆ ಸೇರಿಸಲಾಯಿತು? ಯಾರ ಆದೇಶದ ಮೇರೆಗೆ ಸೇರಿಸಲಾಯಿತು? ಇದು ಕಾನೂನುಬಾಹಿರವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ಅನುಬಂಧವು 2003 ರ ಮತದಾರರ ಪಟ್ಟಿಯಲ್ಲಿ ಅವರ ಪೋಷಕರ ಹೆಸರನ್ನು ಪಟ್ಟಿ ಮಾಡಲಾದ ಕ್ರಮಸಂಖ್ಯೆಯನ್ನು ನಮೂದಿಸಲು ಅರ್ಜಿದಾರರನ್ನು ಕೇಳುತ್ತದೆ. ಒಬ್ಬ ಸಾಮಾನ್ಯ 18 ವರ್ಷದ ಯುವಕ 2026 ರಲ್ಲಿ 2003ರ ಪಟ್ಟಿಯನ್ನು ಎಲ್ಲಿ ಪಡೆಯಬಹುದು? ಇದು ಎಲ್ಲಾ ಯುವ ಮತದಾರರ ನೋಂದಣಿಯನ್ನು ನಿಲ್ಲಿಸಿದೆ. ಯುವ ಮತದಾರರು ಮತ ಹಾಕುವುದಿಲ್ಲ ಎಂದು ಬಿಜೆಪಿಗೆ ತಿಳಿದಿದೆ ಎಂದು ಹೇಳಿದರು.
ದೊಡ್ಡ ಪ್ರಮಾಣದಲ್ಲಿ ಫಾರ್ಮ್ 7 ಆಕ್ಷೇಪಣೆಗಳನ್ನು ಸಲ್ಲಿಸಿದವರು ಯಾರು? ಮತ್ತು ಆ ಆಕ್ಷೇಪಣೆಗಳಿಗೆ ಸಹಿ ಮಾಡಿದವರು ವಿಚಾರಣೆಗೆ ಹಾಜರಾಗದಿದ್ದರೂ ಅವುಗಳ ಆಧಾರದ ಮೇಲೆ ಹೇಗೆ ಕ್ರಮ ಕೈಗೊಳ್ಳಲಾಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಲಕ್ಷಾಂತರ ಮತದಾರರ ಮೇಲ್ಮನವಿಗಳು ಬಾಕಿ ಇರುವಾಗ ಚುನಾವಣೆಗಳನ್ನು ಹೇಗೆ ನಡೆಸಲು ಅವಕಾಶ ನೀಡಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.
“ತಾರ್ಕಿಕ ವ್ಯತ್ಯಾಸ" ಎಂಬ ಪರಿಕಲ್ಪನೆಯನ್ನು ಅವರು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಭಾರತದಲ್ಲಿ ಬಡವರು ಹೇಗೆ ಬದುಕುತ್ತಾರೆ ಎಂಬುದರ ಬಗ್ಗೆ ಜ್ಞಾನೇಶ್ ಕುಮಾರ್ ಅವರಿಗೆ ಯಾವುದೇ ಅರಿವಿಲ್ಲ ಎಂದು ಅವರು ಆರೋಪಿಸಿದ್ದಾರೆ. ಬಡವರ ಮಕ್ಕಳು ಆಸ್ಪತ್ರೆಗಳಲ್ಲಿ ಜನಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಇದುವರೆಗೆ 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಎಸ್ಐಆರ್ ಇನ್ನೂ ಪೂರ್ಣಗೊಂಡಿಲ್ಲ, ಇದು ಒಟ್ಟು ಮತದಾರರ ಶೇ.13ರಷ್ಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
2024ರ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವಿನ ಅಂತರ ಕೇವಲ ಶೇ.3ರಷ್ಟಿತ್ತು. ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಮತದಾರರ ಹೆಸರುಗಳನ್ನು ಅಳಿಸಿರುವುದು ಚುನಾವಣೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ. ಎನ್‌ಡಿಎ ವಿರುದ್ಧ ಮತ ಚಲಾಯಿಸುವ ಬೂತ್ಗಳಿಂದ ಮತದಾರರನ್ನು ಕೈಬಿಡಲು ವ್ಯವಸ್ಥೆಯನ್ನು ಬಳಸಿರಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಬಡವರ ಮೇಲೆ ಪರಿಣಾಮ:
ಬಡವರ ಬಳಿ ಸಾಮಾನ್ಯವಾಗಿ ಜನನ ಪ್ರಮಾಣಪತ್ರಗಳು ಇರುವುದಿಲ್ಲ. ಹೀಗಾಗಿ ಅವರು ಜನನದ ಅಂದಾಜು ವರ್ಷವನ್ನು ನೀಡುತ್ತಾರೆ. ತಂದೆ ಮತ್ತು ಮಗುವಿನ ವಯಸ್ಸಿನ ನಡುವಿನ ಅಂತರ 15 ವರ್ಷಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ, ಯಾವುದೇ ವಿಚಾರಣೆ ನಡೆಸದೆ ಹೆಸರುಗಳನ್ನು ಕೈಬಿಡುವುದು ಸೆಕ್ಷನ್ 21ಕ್ಕೆ ವಿರುದ್ಧವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಸರುಗಳನ್ನು ಕಳೆದುಕೊಂಡಿರುವವರು ಬಡವರು, ಹಿಂದುಳಿದವರಾಗಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಮತದಾರರ ಪಟ್ಟಿಗೆ ಚುನಾವಣಾ ನೋಂದಣಿ ಅಧಿಕಾರಿ (ERO), ಜಿಲ್ಲಾ ಚುನಾವಣಾಧಿಕಾರಿ (DEO) ಮತ್ತು ಮುಖ್ಯ ಚುನಾವಣಾಧಿಕಾರಿ (CEO) ಅವರಿಗೆ ಪ್ರವೇಶಾತಿ ಅವಕಾಶ ನೀಡಲಾಗುತ್ತಿಲ್ಲ ಎಂದು ಇಬ್ಬರು ಚುನಾವಣಾ ಆಯುಕ್ತರು ಗಮನ ಸೆಳೆದಿದ್ದರು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಗೋವಾದಲ್ಲಿ EROಗಳಿಂದ ಮಾನ್ಯರೆಂದು ಪರಿಗಣಿಸಲ್ಪಟ್ಟ 97 ಮತದಾರರ ಹೆಸರುಗಳನ್ನು ಇನ್ನೂ ಮತದಾರರ ಪಟ್ಟಿಗೆ ಸೇರಿಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಪ್ರತಿಪಕ್ಷಗಳು ಒಗ್ಗೂಡುವಂತೆ ಆಗ್ರಹ:
ಸಿಂಗ್ ಅವರು ಪ್ರತಿಪಕ್ಷಗಳು ಒಗ್ಗೂಡಬೇಕೆಂದು ಒತ್ತಾಯಿಸಿದರು. ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸುವುದು ನಿಷ್ಪ್ರಯೋಜಕವಾಗಲಿದೆ, ಏಕೆಂದರೆ ಅದಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲ ಪ್ರತಿಪಕ್ಷಗಳ ಬಳಿ ಇಲ್ಲ ಎಂದು ಅವರು ಹೇಳಿದರು.
“ಎಲ್ಲಾ ಪ್ರತಿಪಕ್ಷಗಳು ಒಗ್ಗೂಡಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಬೇಕು. ಅವರ ಉತ್ತರಾಧಿಕಾರಿಗಳನ್ನು ಹಿಂದಿನ ಆಯ್ಕೆ ವ್ಯವಸ್ಥೆಯಂತೆ ಪ್ರಧಾನಮಂತ್ರಿ, ಪ್ರತಿಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿಯ ಮೂಲಕ ಆಯ್ಕೆ ಮಾಡಬೇಕು. ಲಕ್ಷಾಂತರ ಮತದಾರರ ಮೇಲ್ಮನವಿಗಳು ಬಾಕಿ ಇರುವಾಗ ರಾಜ್ಯಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಿ, ಹೊಸದಾಗಿ ಚುನಾವಣೆ ನಡೆಸಬೇಕು. ಅಲ್ಲದೆ, ಮತದಾನವನ್ನು EVMಗಳ ಬದಲಿಗೆ ಬ್ಯಾಲೆಟ್ ಮೂಲಕ ನಡೆಸಬೇಕು. ಏಕೆಂದರೆ ಹ್ಯಾಕ್ ಮಾಡಲು ಸಾಧ್ಯವಾಗದ ಯಾವುದೇ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ,” ಎಂದು ಸಿಂಗ್ ಹೇಳಿದ್ದಾರೆ.
ಎಸ್ಐಆರ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ನ್ಯಾಯಾಲಯದ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಈ ತೀರ್ಪು ತುರ್ತು ಪರಿಸ್ಥಿತಿಯನ್ನು ಎತ್ತಿಹಿಡಿದ ತೀರ್ಪಿನಷ್ಟೇ ವಿವಾದಾತ್ಮಕವಾಗಿದೆ. ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನಿನ ವಿರುದ್ಧದ ಅರ್ಜಿಯ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬವೂ ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ. ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಒಗ್ಗೂಡೋಣ ಎಂದು ಸಿಂಗ್ ಹೇಳಿದ್ದಾರೆ.
An open letter to all my countrymen.Do you want India to remain a democracy? Then you must understand what Gyanesh Kumar, the CEC, and his bosses are doing in the so-called SIR.They are violating the law.- As per Section 21 of the law, a special revision is to be undertaken…
— R. K. Singh (@RajKSinghIndia) September 28, 2026