ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್  (Photo: PTI)

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಹಾಗೂ ದೇಶಾದ್ಯಂತ ನಡೆಯುತ್ತಿರುವ SIR ಅನ್ನು ಅಕ್ರಮ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಕೊಂಡಿದೆ.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಮತದಾರರ ಪಟ್ಟಿಗಳ SIRಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದ ಕೆಲವೇ ದಿನಗಳ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದೆ. ಕೆಲವು ನಿರ್ಧಾರಗಳನ್ನು ತಮ್ಮ ಅರಿವು ಅಥವಾ ಶಿಫಾರಸಿಲ್ಲದೆ ಕೈಗೊಳ್ಳಲಾಗಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ತಿಳಿಸಿದ್ದರು.

ಈ ಮಧ್ಯೆ , ಸಂಧು ಮತ್ತು ಜೋಶಿ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಕಳುಹಿಸಿದ್ದ ಪತ್ರಗಳು ನಿಯೋಜನೆಯ ಮೇರೆಗೆ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ್ದವು. ಅವು ನೀತಿ ಅಥವಾ ಐಟಿ ವಿಭಾಗದ ವಿಚಾರಗಳಿಗೆ ಸಂಬಂಧಿಸಿರಲಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ

ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರ ವಾದಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಈ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

“ಬಹುಸದಸ್ಯೀಯ ಆಯೋಗವನ್ನು ಹೊಂದಿರುವ ಉದ್ದೇಶವೇನೆಂದರೆ, ಕಾನೂನು ಹೇಳುವಂತೆ, ನಿರ್ಧಾರವು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಆಗಬೇಕು. ಆದರೆ ಚುನಾವಣಾ ಆಯೋಗ ಕಾರ್ಯನಿರ್ವಹಿಸಿರುವ ರೀತಿಯನ್ನು ನೋಡಿದರೆ, SIRನ ಈ ಸಂಪೂರ್ಣ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗದ ನಿರ್ಧಾರವೇ ಇತ್ತೇ ಎಂಬ ಬಗ್ಗೆ ಗಂಭೀರ ಅನುಮಾನವಿದೆ” ಎಂದು ಸಿಂಗ್ ಪೀಠದ ಮುಂದೆ ಹೇಳಿದರು.

“ಏಕೆಂದರೆ, ಗೌರವಾನ್ವಿತ ನ್ಯಾಯಾಲಯವೂ ಇದನ್ನು ಆಯೋಗದ ನಿರ್ಧಾರ ಎಂಬ ಆಧಾರದ ಮೇಲೆ ಪರಿಗಣಿಸಿದೆ. ಆಯೋಗವು ಸರ್ವಾನುಮತದ ನಿರ್ಧಾರ ತೆಗೆದುಕೊಂಡಿಲ್ಲವಾದರೆ ಇದು ಗಂಭೀರ ವಿಚಾರವಾಗಿದೆ. ಶೀಘ್ರ ವಿಚಾರಣೆಗೆ ದಿನಾಂಕ ನಿಗದಿಪಡಿಸುವಂತೆ ಮಾತ್ರ ನಾನು ಮನವಿ ಮಾಡುತ್ತಿದ್ದೇನೆ” ಎಂದು ಅವರು ಹೇಳಿದರು.

ಬಳಿಕ ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ಮುಂದಿನ ವಾರ ಪಟ್ಟಿ ಮಾಡುವಂತೆ ನಿರ್ದೇಶಿಸಿದರು.

ಅರ್ಜಿಯಲ್ಲಿ ಏನಿದೆ?:

ಸಿಇಸಿ ಕುಮಾರ್ ಮತ್ತು ಸಂಧು, ಜೋಶಿ ಅವರ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಅವರು ವ್ಯಕ್ತಪಡಿಸಿದ್ದ ಆಕ್ಷೇಪಗಳನ್ನು ಅರ್ಜಿ ಉಲ್ಲೇಖಿಸಿದೆ.

“ಸಂವಿಧಾನದ ಆರ್ಟಿಕಲ್ 324(1) ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ವೈಯಕ್ತಿಕವಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ನೀಡುವುದಿಲ್ಲ. ಆ ಅಧಿಕಾರವನ್ನು ಒಂದು ಆಯೋಗದಲ್ಲಿ ನೀಡಲಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆರ್ಟಿಕಲ್ 324(2)ರ ಪ್ರಕಾರ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಹಾಗೂ ರಾಷ್ಟ್ರಪತಿ ಕಾಲಕಾಲಕ್ಕೆ ನಿರ್ಧರಿಸುವ ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ ಎಂದು ಸಿಂಗ್ ವಾದಿಸಿದರು.

ಇತರ ಚುನಾವಣಾ ಆಯುಕ್ತರನ್ನು ನೇಮಿಸಿದಾಗ ಮುಖ್ಯ ಚುನಾವಣಾ ಆಯುಕ್ತರು ಆಯೋಗದ ಅಧ್ಯಕ್ಷರಾಗಿ/ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಬೇಕು ಎಂದು ಆರ್ಟಿಕಲ್ 324(3) ಹೇಳುತ್ತದೆ.

“ಹೀಗಾಗಿ ಸಾಂವಿಧಾನಿಕ ಪಠ್ಯವು ಆಯೋಗದ ಸದಸ್ಯತ್ವವನ್ನು ಅದರ ಅಧ್ಯಕ್ಷ ಸ್ಥಾನದಿಂದ ಮತ್ತು ಆಯೋಗದ ಅಧಿಕಾರವನ್ನು ಅಧ್ಯಕ್ಷ ಸ್ಥಾನದಿಂದ ಉದ್ದೇಶಪೂರ್ವಕವಾಗಿ ಪ್ರತ್ಯೇಕಿಸುತ್ತದೆ” ಎಂದು ಅವರು ಹೇಳಿದರು.

ಕುಮಾರ್ ಅವರು ಸಿಇಸಿಯ ಅಧಿಕಾರವನ್ನು ತಪ್ಪಾಗಿ ಚಲಾಯಿಸಿದ್ದಾರೆ ಎಂಬುದು ತಮ್ಮ ದೂರು ಅಲ್ಲ ಎಂದು ಅವರು ಹೇಳಿದರು.

“ಆದರೆ, ಆರ್ಟಿಕಲ್ 324 ಮತ್ತು 2023ರ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ಆಯೋಗಕ್ಕೆ ಸೇರಿದ ಸಾಮೂಹಿಕ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಚಲಾಯಿಸುವ ಹಕ್ಕು ತಮಗಿದೆ ಎಂಬಂತೆ ಅವರು ನಡೆದುಕೊಂಡಿದ್ದಾರೆ. ಆರ್ಟಿಕಲ್ 324(3) ಅವರಿಗೆ ಅಂತಹ ವೈಯಕ್ತಿಕ ಅಧಿಕಾರವನ್ನು ನೀಡುವುದಿಲ್ಲ. ಅವರು ಆಯೋಗದ ಅಧ್ಯಕ್ಷರು ಮಾತ್ರ , ಆಯೋಗವೇ ಅಲ್ಲ” ಎಂದು ಅವರು ಹೇಳಿದರು.

ಅರ್ಜಿಯಲ್ಲಿ ಏನು ಕೋರಲಾಗಿದೆ?:

ಆರ್ಟಿಕಲ್ 324ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಸಾಮೂಹಿಕವಾಗಿ ನೀಡಲಾಗಿರುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ವೈಯಕ್ತಿಕವಾಗಿ ಚಲಾಯಿಸಲು ತಮಗೆ ಯಾವ ಅಧಿಕಾರವಿದೆ ಎಂಬುದನ್ನು ವಿವರಿಸುವಂತೆ ಕುಮಾರ್ ಅವರನ್ನು ಕೇಳುವ ‘ಕ್ವೋ ವಾರಂಟೊ’ ರಿಟ್ ಹೊರಡಿಸುವಂತೆ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ. 324(3) ವಿಧಿಯು , ಅವರನ್ನು ಕೇವಲ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದು, ಆಯೋಗದ ಸಾಮೂಹಿಕ ಅಧಿಕಾರದ ಮೇಲೆ ವೈಯಕ್ತಿಕ ಹಕ್ಕು ನೀಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

SIRನ ಭಾಗವಾಗಿ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವುದು, ತೆಗೆದುಹಾಕುವುದು, ಅಳಿಸುವುದು, ಮರುಸ್ಥಾಪಿಸುವುದು ಅಥವಾ ಬದಲಾವಣೆ ಮಾಡುವುದು ನಡೆದಿದ್ದರೆ, ಅಂತಹ ಕ್ರಮಗಳಿಗೆ ಯಾವುದೇ ಕಾನೂನುಬದ್ಧ ಪರಿಣಾಮ ಇರುವುದಿಲ್ಲ ಎಂದು ಘೋಷಿಸುವಂತೆಯೂ ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor