×
Ad

ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ ಎಂದು ಹೇಳುವುದು ತಪ್ಪು : ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಮದನ್ ಲೋಕೂರ್

Update: 2026-07-05 21:55 IST

Photo credit: Shashi Shekhar Kashyap/The Hindu

ಹೊಸದಿಲ್ಲಿ,ಜು.5: ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆಯಾಗಿದ್ದು, ಅದು ಭಾರತೀಯ ಪೌರತ್ವದ ಪುರಾವೆಯಲ್ಲ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು ಕಾನೂನಿನ ತಪ್ಪು ವ್ಯಾಖ್ಯಾನವಾಗಿದೆ ಮತ್ತು ಇದು ಗಂಭೀರ ಸಾಂವಿಧಾನಿಕ ಪರಿಣಾಮಗಳನ್ನು ಬೀರಬಹುದು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮದನ್ ಬಿ. ಲೋಕೂರ್ ಹೇಳಿದ್ದಾರೆ.

ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲೋಕೂರ್, ಪಾಸ್‌ಪೋರ್ಟ್ ಕಾಯ್ದೆಯ ಪ್ರಕಾರ ಪಾಸ್‌ಪೋರ್ಟ್ ಮತ್ತು ಪ್ರಯಾಣ ದಾಖಲೆ ನಡುವೆ ವ್ಯತ್ಯಾಸವಿದೆ. ಆದ್ದರಿಂದ ಈ ಎರಡನ್ನೂ ಸಮಾನಾರ್ಥಕ ಪದಗಳಾಗಿ ಪರಿಗಣಿಸುವುದು ಕಾನೂನುಬದ್ಧವಾಗಿ ಸರಿಯಲ್ಲ ಎಂದು ಹೇಳಿದರು.

ಪಾಸ್‌ಪೋರ್ಟ್ ಕಾಯ್ದೆಯ ಪೀಠಿಕೆಯನ್ನು ಉಲ್ಲೇಖಿಸಿದ ಲೋಕೂರ್, ಪಾಸ್‌ಪೋರ್ಟ್‌ಗಳು ಮತ್ತು ಪ್ರಯಾಣ ದಾಖಲೆಗಳನ್ನು ವಿತರಿಸಲು ಹಾಗೂ ಭಾರತದಿಂದ ದೇಶದ ಪ್ರಜೆಗಳು ಮತ್ತು ಇತರ ವ್ಯಕ್ತಿಗಳ ನಿರ್ಗಮನವನ್ನು ನಿಯಂತ್ರಿಸಲು ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಬೆಟ್ಟು ಮಾಡಿದರು.

ಸಂಸತ್ತು ಕಾನೂನಿನ ಉದ್ದಕ್ಕೂ ಪಾಸ್‌ಪೋರ್ಟ್ ಮತ್ತು ಪ್ರಯಾಣ ದಾಖಲೆ ಎಂಬ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಪ್ರತ್ಯೇಕವಾಗಿ ಬಳಸಿದೆ. ಸಂಸತ್ತು ಕಾನೂನುಗಳನ್ನು ರೂಪಿಸುವಾಗ ಯಾವುದೇ ಅರ್ಥವಿಲ್ಲದ ಅಥವಾ ಅನಗತ್ಯ ಪದಗಳನ್ನು ಬಳಸುವುದಿಲ್ಲ ಎಂದು ಹೇಳಿದ ಲೋಕೂರ್, ಆದ್ದರಿಂದ ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ ಎಂದು ಹೇಳುವುದು ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳ ಸಂಪೂರ್ಣ ತಪ್ಪು ವ್ಯಾಖ್ಯಾನವಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ವ್ಯಕ್ತಿಯು ಭಾರತದ ಪ್ರಜೆಯಾಗಿದ್ದಾನೆ ಎಂಬ ಕಾನೂನು ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News