“ಸ್ವೀಕಾರಾರ್ಹವಲ್ಲ”: ಯುಎಇ ಪರಮಾಣು ವಿದ್ಯುತ್ ಸ್ಥಾವರದ ಮೇಲಿನ ಡ್ರೋನ್ ದಾಳಿಯನ್ನು ಖಂಡಿಸಿದ ಭಾರತ
Photo: X (ಬರಾಖಾ ಅಣುವಿದ್ಯುತ್ ಸ್ಥಾವರ)
ಹೊಸದಿಲ್ಲಿ: ಯುಎಇಯ ಬರಾಖಾ ಪರಮಾಣು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ನಡೆಸಿದ ಡ್ರೋನ್ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಹಿನ್ನೆಲೆ ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳಬೇಕೆಂದು ಭಾರತ ಒತ್ತಾಯಿಸಿದೆ.
ಭಾರತದ ವಿದೇಶಾಂಗ ಸಚಿವಾಲಯ ಸೋಮವಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಯುಎಇಯ ಪರಮಾಣು ಸ್ಥಾವರದ ಮೇಲಿನ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
"ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ಅಪಾಯಕಾರಿ ಉಲ್ಬಣವನ್ನು ಸೂಚಿಸುತ್ತದೆ. ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು ಎಂದು ನಾವು ತುರ್ತಾಗಿ ಕರೆ ನೀಡುತ್ತೇವೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಅನಿಶ್ಚಿತತೆ ಮೂಡಿರುವ ನಡುವೆಯೇ, ಯುಎಇನ ಅಲ್ ಧಾಫ್ರಾ ಪ್ರಾಂತದಲ್ಲಿರುವ ಬರಾಖಾ ಅಣುವಿದ್ಯುತ್ ಸ್ಥಾವರದ ಮೇಲೆ ರವಿವಾರ ಡ್ರೋನ್ ದಾಳಿ ನಡೆದಿತ್ತು. ವಿದ್ಯುತ್ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆಯೆಂದು ಅಬುದಾಭಿಯ ಮಾಧ್ಯಮ ಕಚೇರಿ ವರದಿ ಮಾಡಿತ್ತು.
ದಾಳಿಯ ಮೂಲದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಅಂತಹ ದಾಳಿಗಳಿಗೆ ಪ್ರತಿಕ್ರಿಯಿಸಲು ಯುಎಇಗೆ ಸಂಪೂರ್ಣ ಹಕ್ಕಿದೆ ಎಂದು ಯುಎಇ ಅಧಿಕಾರಿಗಳು ಹೇಳಿದ್ದರು.