ಮಹಿಳೆ ನಿಗೂಢ ಸಾವು | ಮಧ್ಯಪ್ರದೇಶ ಸಿಎಂ ನಿವಾಸದ ಎದುರು ಕುಟುಂಬಸ್ಥರಿಂದ ಧರಣಿ
Photo: screengrab/ x.com/FMNewsLive
ಭೋಪಾಲ್: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರ ಅಧಿಕೃತ ನಿವಾಸದ ಮುಂದೆ ರವಿವಾರ ನೋಯ್ಡಾದ ಕುಟುಂಬವೊಂದು ಧರಣಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿತು. ವಾರದ ಆರಂಭದಲ್ಲಿ ಈ ಕುಟುಂಬದ 33 ವರ್ಷದ ಮಹಿಳೆ ನಿಗೂಢವಾಗಿ ಮೃತಪಟ್ಟಿದ್ದು, ಮಹಿಳೆಯ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಭೋಪಾಲ್ ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತನ್ನ ಗಂಡನಮನೆಯಲ್ಲಿ ಈ ತಿಂಗಳ 12ರಂದು ಮಹಿಳೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಮಹಿಳೆಯ ಪತಿಯ ಮನೆಯಲ್ಲಿ ನೀಡಿದ ವರದಕ್ಷಿಣೆ ಕಿರುಕುಳದ ಪರಿಣಾಮ ಎಂದು ಕುಟುಂಬದವರು ಆಪಾದಿಸಿದ್ದಾರೆ. ರವಿವಾರ ನ್ಯಾಯಕ್ಕಾಗಿ ಆಗ್ರಹಿಸಿ ಅವರು ಸಿಎಂ ನಿವಾಸದ ಮುಂದೆ ಧರಣಿ ನಡೆಸಿದರು ಹಾಗೂ ದಿಲ್ಲಿಯ ಎಐಐಎಂಎಸ್ ನಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಮತ್ತೆ ನಡೆಸಬೇಕು ಎಂದು ಆಗ್ರಹಿಸಿದರು.
ಭೋಪಾಲ್ ವಕೀಲ ಸಮರ್ಥ ಸಿಂಗ್ 2024ರಲ್ಲಿ ಡೇಟಿಂಗ್ ಆ್ಯಪ್ ನಲ್ಲಿ ತ್ವಿಷಾ ಶರ್ಮಾ ಎಂಬ ಯುವತಿಯನ್ನು ಪರಿಚಯಿಸಿಕೊಂಡಿದ್ದರು. 2025ರ ಡಿಸೆಂಬರ್ ನಲ್ಲಿ ಇವರಿಬ್ಬರ ವಿವಾಹ ನೆರವೇರಿತ್ತು. ವಿವಾಹ ಬಳಿಕ ತ್ವಿಷಾ ಭೋಪಾಲ್ ಗೆ ಆಗಮಿಸಿದ್ದರು. ಆದರೆ ಮತ್ತೆ ನೋಯ್ಡಾಗೆ ವಾಪಸ್ಸಾಗಬೇಕು ಎನ್ನುವುದು ಆಕೆಯ ಇಚ್ಛೆಯಾಗಿತ್ತು. ಮೇ 12ರಂದು ನೇಣಿಗೆ ಶರಣಾಗುವ ಮುನ್ನ ರಾತ್ರಿ 10 ಗಂಟೆವರೆಗೂ ಸಂಪರ್ಕದಲ್ಲಿದ್ದಳು ಎಂದು ಕುಟುಂಬದವರು ಹೇಳುತ್ತಾರೆ. ಮಹಿಳೆಯ ಸಾವಿಗೆ ಸಮರ್ಥ್ ಹಾಗೂ ಆತನ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಕಾರಣ ಎನ್ನುವುದು ಕುಟುಂಬದ ಆರೋಪ. ಗಂಡನ ಮನೆಯಲ್ಲಿ ಮಹಿಳೆಗೆ ದೈಹಿಕ ಕಿರುಕುಳ ನೀಡಿ ಪುರಾವೆಗಳನ್ನು ನಾಶಪಡಿಸಿದ್ದಾರೆ ಎಂದೂ ಕುಟುಂಬದವರು ದೂರಿದ್ದಾರೆ.
ಮಹಿಳೆಯ ಮೃತದೇಹ ಭೋಪಾಲ್ ಎಐಐಎಂಎಸ್ ನಲ್ಲಿ ಕಳೆದ ಐದು ದಿನಗಳಿಂದ ಇದ್ದು, ಇದರ ಮರಣೋತ್ತರ ಪರೀಕ್ಷೆಯನ್ನು ದೆಹಲಿಯ ಏಮ್ಸ್ ನಲ್ಲಿ ಮಾಡಬೇಕು ಎನ್ನುವುದು ಕುಟುಂಬದ ಆಗ್ರಹ. ಪ್ರತಿಭಟನೆ ವೇಳೆ ಭೇಟಿ ಮಾಡಿದ ಸಿಎಂ ಮೋಹನ್ ಯಾದವ್ ಅವರು, ಈ ಪ್ರಕರಣದಲ್ಲಿ ನ್ಯಾಯಸಮ್ಮತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾಗಿ ತಂದೆ ನವನಿಧಿ ಶರ್ಮಾ ಮತ್ತು ಸಹೋದರ ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮಧ್ಯಪ್ರದೇಶದಿಂದ ಹೊರಗೆ ನಡೆಸಬೇಕು ಎಂದೂ ಮೃತ ಮಹಿಳೆಯ ತಂದೆ ಆಗ್ರಹಿಸಿದ್ದಾರೆ.